Latest Posts

ದೇಶದಲ್ಲಿ ಹೆಚ್ಚುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ.

ಮಾನವ ಹಕ್ಕುಗಳಿಗೆ ಅತ್ಯಂತ ಮಹತ್ವ ಮತ್ತು ಪ್ರತ್ಯೇಕವಾದ ಸಂರಕ್ಷಣಾ ವ್ಯವಸ್ಥೆಯ ಸಂವಿದಾನವಿರುವ ನಮ್ಮ ದೇಶದಲ್ಲಿ ಇಂದಿಗೂ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿರುವುದು ಬಹಳ ದುಃಖಕರವಾದ ಸಂಗತಿಯಾಗಿದೆ. ಮಾನವ ಹಕ್ಕುಗಳ ಮೂಲಕ ನಮಗೆ ಅರ್ಥವಾಗುವ ಸಂಗತಿಯೆಂದರೆ ಮೂಲಭೂತ ಹಕ್ಕುಗಳ ಶುಭ್ರವಾದ ವ್ಯವಸ್ಥೆ ಮತ್ತು ಮಾನವನೆಂಬ ನೆಲೆಯಲ್ಲಿ ಒಬ್ಬ ವ್ಯಕ್ತಿಗೆ ಸಿಗಬೇಕಾದ ಮಾನವೀಯ ಮೌಲ್ಯಗಳು ಹಾಗೂ ಸ್ವಾಸ್ಥ್ಯ ಜೀವನಕ್ಕಿರುವ ಸರ್ವ ಪರಿಗಣನೆ ಗಳಾಗಿದೆ. ಮಾನವ ಹಕ್ಕುಗಳ ರಕ್ಷಣಾ ಕಾನೂನು – 1993 (Protection of Human Rights Act) 1994 ರಲ್ಲಿ ಜಾರಿಗೆ ಬಂತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಅನುಷ್ಠಾನಕ್ಕೆ ಬಂದು ಮಾನವ ಹಕ್ಕುಗಳ ರಕ್ಷಣೆ ಹೊಣೆ ಹೊತ್ತು ಕೊಂಡಿತು. ಪ್ರತಿಯೊಬ್ಬ ವ್ಯಕ್ತಿಗೂ ಜೀವನ, ಸ್ವಾತಂತ್ರ್ಯ, ಸಮತ್ವ, ಗೌರವ ಎಂಬಿತ್ಯಾದಿ ಗಳನ್ನು ಒಳಗೊಂಡು, ಸುಂದರವಾದ ಸಂವಿದಾನದ 21 ನೇ ಅನುಚ್ಛೇದ ಪ್ರಕಾರ ಜೀವಿಸಲು ಬೇಕಾದ ಸಂಪೂರ್ಣವಾದ ಮೂಲಭೂತ ಹಕ್ಕುಗಳನ್ನು ಪ್ರತಿಯೊಬ್ಬ ಪ್ರಜೆಗೂ ನೀಡುತ್ತದೆ. ಮೂಲಭೂತ ಅವಕಾಶ ಎನ್ನುವುದಕ್ಕಿಂತ ಪ್ರಜೆಗಳಿಗೆ ಜೀವಿಸಲಿರುವ ಅವಕಾಶ, ವಿಶಾಲವಾದ ಮಾನವ ಹಕ್ಕುಗಳು ಕೂಡ ಸೇರಿದ್ದಾಗಿದೆ.

ಸಂವಿದಾನದ 3 ನೇ ಬಾಗದಲ್ಲಿ 12 ರಿಂದ 35 ರ ವರೆಗೆ 6 ಮೂಲಭೂತ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದೆ. ಈ ಮೊದಲು ಸಂವಿದಾನವು 7 ಮೂಲಭೂತ ಹಕ್ಕುಗಳನ್ನು ಒಳಗೊಂಡಿತು. ಅದರಲ್ಲಿ ಆಸ್ತಿಯ ಹಕ್ಕು ಕೂಡ ಸೇರಿತ್ತು. ಆದರೆ 1978 ರಲ್ಲಿ 44 ನೇ ತಿದ್ದುಪಡಿಗೆ ವಿಧೇಯವಾದ ಸಂವಿದಾವು ಆಸ್ತಿಯ ಹಕ್ಕನ್ನು ಮೂಲಭೂತ ಅವಕಾಶಗಳಿಂದ ತೆಗೆದು ಹಾಕಿತು. ಈಗ 6 ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ. ಅವುಗಳೆಂದರೆ ಸಮಾನತೆಯ ಹಕ್ಕು, ಸ್ವಾತಂತ್ರ್ದದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕತಿಕ ಮತ್ತು ಶೈಕ್ಷಣಿಕ ಹಕ್ಕು, ಹಾಗು ಸಂವಿದಾನ ಬದ್ದವಾದ ಪರಿಹಾರದ ಹಕ್ಕು. ಮುಂತಾದವುಗಳೆಲ್ಲಾ ಮಾನವ ಹಕ್ಕುಗಳ ವ್ಯವಸ್ಥೆ ಯಲ್ಲಿ ಒಳಗೊಂಡಿದೆ. ಆದರೆ ನಮ್ಮ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವಲೋಕಿಸುವಾಗ ವರ್ತಮಾನ ಕಾಲದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಪ್ರಜೆಗಳ ಮಾನವ ಹಕ್ಕುಗಳಾದ ಮೂಲಭೂತ ಅವಕಾಶಗಳನ್ನು ಕೂಡ ನಿಷೇಧಿಸಲಾದ ಶೋಚನೀಯ ಪರಿಸ್ಥಿತಿಯು ನಿರ್ಮಾನವಾಗಿದೆ. ದೈನಂದಿನ ಭೀತಿತವಾದ ವಾತಾವರಣದ ಮೂಲಕ ಜೀವಿಸುವಂತಹ ಭಯಾಂತರಿಕ್ಷ ತಾಂಡವಾಡುತ್ತಿದೆ. ಈ ರೀತಿಯ ಸಂದಿಗ್ಧತೆಯನ್ನು ನಿವಾರಿಸಲು ಅಸಾಧ್ಯವಾದ ಮಟ್ಟಿಗೆ ಬೆಳೆದು ನಿಂತ ದೇಶದ ಸರ್ವ ಚಟುವಟಿಕೆಗಳು, ಮುಂದೊಂದು ದಿನ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ನಾಮಗೊಳಿಸಿ ಭಾರತದ ಭವಿಷ್ಯವನ್ನು ಹಾಳು ಮಾಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಮಾನವ ಹಕ್ಕು ಮತ್ತು ಮೂಲಭೂತ ಹಕ್ಕುಗಳಿಗೆ ಸಜೀವ ಶ್ರದ್ಧೆಯಿರುವ ಸಂವಿಧಾನ ಹೊಂದಿದ ನಮ್ಮ ದೇಶದಲ್ಲಿ ಆಡಲಿತದ ವೈಫಲ್ಯದ ಕಾರಣಗಳಿಂದ ಪ್ರಜೆಗಳ ಹಕ್ಕುಗಳ ವಿಷಯದಲ್ಲಿ ದ್ವಿಮುಖ ಆಶಯಗಳು ಎದ್ದು ಕಾಣುತ್ತದೆ.

ದೇಶದ ಕಹಲವು ಕಡೆಗಳಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳಿಗೆ ವಿಶೇಷವಾದ ಅಧಿಕಾರ ಕಾಯ್ದೆ ಅಥವಾ AFSPA (Armed Forces Special Power Act) ನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಮಣಿಪುರದ ಐರೋಮ್ ಶರ್ಮಿಳಾ ನಿರಂತರವಾದ ಹದಿನಾರು ವರ್ಚಗಳ ಕಾಲ ಸತ್ಯಾಗ್ರಹ ನಡೆಸಿದ್ದರು. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹಲವಾರು ಕಾಯ್ದೆಗಳ ಸರಿಯಾದ ಮಾಹಿಗಳು ಕೂಡ ಇಂದು ಸಾಮಾನ್ಯ ಜನರಿಗೆ ತಿಳಿದಿಲ್ಲ. 1958 ರಲ್ಲಿ ಲೋಕಸಭೆಯಲ್ಲಿ ಜಾರಿಯಾದ AFSPA ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷವಾದ ಅಧಿಕಾರವನ್ನು ನೀಡುತ್ತದೆ. ಈ ಕಾಯ್ದೆಯ ಅನ್ವಯ ಯಾವುದೇ ಪ್ರದೇಶಗಳಿಂದ ಕಾರ್ಯಾಚರಣೆ ನಡೆಸಲು ಮತ್ತು ನೋಟಿಸ್ ನೀಡದೇ ಯಾವುದೇ ವ್ಯಕ್ತಿಯನ್ನು ಬಂದಿಸುವ ಅಧಿಕಾರವನ್ನು ಹೊಂದಿದೆ. ದೇಶದ ಭದ್ರತೆ, ಭಯೋತ್ಪಾದನಾ ನಿಗ್ರಹ ಎನ್ನುವ ನೆಪದಲ್ಲಿ ಈ ರೀತಿಯ ವಿಶೇಷವಾದ ಅಧಿಕಾರವು ಜನ ಸಮಾನ್ಯರಿಗೆ ತೊಂದರೆ ಮತ್ತು ನಿರಪರಾದಿಗಳಾದ ವ್ಯಕ್ತಿಗಳನ್ನು ಜೈಲಿಗಟ್ಟುವುದರ ಮೂಲಕ ದುರ್ಬಳಕೆ ಯಾಗಿದೆ ಎನ್ನುವುದು ಸತ್ಯ.

AFSPA ಎನ್ನುವ ಕಾಯ್ದೆಯು ಮಾನವ ಹಕ್ಕುಗಳನ್ನು ಸಂಪೂರ್ಣ ನಿಷೇಧಿಸುವ, ಕರಾಳ ಕಾಯ್ದೆಗಳ ಮೂಲಕ ದೇಶದಲ್ಲಿ ಅದೆಷ್ಟೋ ನಿರಪರಾದಿಗಳಾದ ಸಾಮಾನ್ಯ ಜನರ ನೈಜ ಅವಕಾಶಗಳನ್ನು ಕಸಿದು ಕೊಳ್ಳುವಾಗ ಛತ್ತೀಸ್ ಗಡ್ ನ ಬಿನಾಯಕ್ ಸೇನ್, ಮಣಿಪುರದ ಐರೋಂ ಶರ್ಮಿಳ ಚಾನು, ಕೇರಳದ ಅಬ್ದುಲ್ ನಾಸರ್ ಮಾಅದನಿ ಮತ್ತು ದೇಶದ ಮೂಲೆಮೂಲೆಗಳಲ್ಲಿ ನಿರ್ದಯಿ ಕಾನೂನಿಗೆ ಬಲಿಯಾಗಿ, ಕಾರಾಗ್ರಹದಲ್ಲಿ ಅದೆಷ್ಟೋ ವರ್ಷಗಳಿಂದ ಬಂದಿಯಾಗಿರುವ ಅಮಾಯಕ ವ್ಯಕ್ತಿಗಳಿಗೆ ಮಾನವೀಯ ಪರಿಗಣನೆಗಳನ್ನು ನಿಷೇಧಿಸಲ್ಪಡುವಾಗ ಇಲ್ಲಿ ಕಾಣ ಸಿಗುವುದು ನ್ಯಾಯ ವ್ಯವಸ್ಥೆಯ ದ್ವಿಮುಖ ನೀತಿಯಾಗಿದೆ. ಪ್ರಜೆಗಳ ಸ್ವಾಸ್ಥ್ಯವಾದ ಜೀವನಕ್ಕೆ ವಿಘ್ನತೆಯನ್ನು ಸೃಷ್ಟಿಸುವಾಗ ಮಾನವ ಹಕ್ಕುಗಳಲ್ಲಿ ಸಮಸ್ಯೆಗಳು ಉದ್ಭವಿಸುತ್ತದೆ ಎನ್ನುವ ಪ್ರಾಥಮಿಕ ಅರಿವು ದೇಶದ ಅಡಲಿತ ವರ್ಗಕ್ಕೆ ಇಲ್ಲದಾಗಿದ್ದು ಖೆದಕರ.

ದೇಶದಲ್ಲಿ ಸೃಷ್ಟಿಯಾಗುವ ಅರಾಜಕತೆಯ ಬಲಿಯಾಡುಗಳು ಕೇವಲ ಗಂಡಸರು ಮಾತ್ರವಲ್ಲ. ಮಹಿಳೆಯರ ಮೇಲೆ ನಡೆಯುವ ದಾಳಿಯನ್ನು ಕೂಡ ಇಲ್ಲಿ ಉಲ್ಲೇಖ ಮಾಡುವುದು ಸೂಕ್ತ. AFSPA ದ ಮರೆಯಲ್ಲಿ ಮಹಿಳೆಯರನ್ನು ಅತ್ಯಾಚಾರ ಮಾಡಿ, ಅವರ ವಿರುದ್ಧ  ಆಶ್ವ ಪ್ರಯೋಗ ಮಾಡುವ ಪೋಲಿಸ್ ಮತ್ತು ಸೈನಿಕರ ಹೀನ ಕೃತ್ಯಗಳು ಎಣಿಸಲಸಾಧ್ಯ. ಕಾಶ್ಮೀರದಲ್ಲಿ ನಡೆಯುತ್ತಿರುವುದು ಅದೇ ಆಗಿದೆ. ವಿಚಾರಣೆಗೆಂದು ಠಾಣೆಗಳಿಗೆ ಕರೆಸಿ ಅತ್ಯಚಾರಕ್ಕೆ ಒಳಗಾದ ಮಹಿಳೆಯರ ಸಂಖ್ಯೆ ಧಾರಾಳವಿದೆ. ತಂದೆ, ಸಹೋದರರನ್ನು ಮಾಡದ ತಪ್ಪಿಗೆ ಠಾಣೆಗೆ ಎಳೆದು ಕೊಂಡು ಹೋಗುವುದನ್ನು ಪ್ರತಿಭಟಿಸಿದ ಸಹೋದರಿಯರು ಅತ್ಯಾಚಾರಕ್ಕೆ ವಿಧೇಯರಾದ ಘಟನೆಗಳು ಕಾಶ್ಮೀರದಲ್ಲಿ ಸಾವಿರಾರು. ಮಣಿಪುರದ ತಾಂಗ್ಜಮ್ ಮನೋರಮ ದೇವಿ, ಕಾಶ್ಮೀರದ ಫಾತಿಮಾ ಬೇಗಂ ಇವರ ಬಲಿಯಾಡುಗಳಲ್ಲಿ ಕೆಲವೊಂದು ಉದಾಹರಣೆಗಳು ಮಾತ್ರ. ದೆಹಲಿ ಅತ್ಯಾಚಾರ ಪ್ರಕರಣವನ್ನು ಕೂಡ ಇಲ್ಲಿಮ ಸೇರಿಸಿ ಓದುವುದು ಸೂಕ್ತ.

ಮಹಿಳೆಯರಿಗೆ ಅಸುರಕ್ಷಿತಾವಸ್ಥೆ ದೇಶದಲ್ಲಿ ಕಾಣುತ್ತಿದೆ. ಕಛೇರಿಗಳಲ್ಲಿ, ದಾರಿ ಮಧ್ಯೆ ಮತ್ತು ಮನೆಗಳಲ್ಲೂ ಕೂಡ ಕಾಮುದಾಸಗೆ ಬಲಿಯಾಗುವ ಮಹಿಳೆಯರ ಮೇಲೆ ನಡೆಯುವ ಈ ರೀತಿಯ ದೌರ್ಜನ್ಯ, ಹಿಂಸೆಗಳು ದೇಶದಲ್ಲಿ ರಂಗೇರಿದ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಯಾಗಿದೆ. ಭಾರತದ ಸಾರ್ವಜನಿಕ ಜನ ನಿಬಿಡವಾದ ಸ್ಥಳಗಳೂ ಕೂಡ ಈಗ ಭಿನ್ನವಲ್ಲ. ಅಧಿಕಾರದ ಕುರ್ಚಿಯಲ್ಲಿ ಕುಳಿತು ಕೇವಲ ವರ್ಗ, ಧರ್ಮ ವಿವೇಚನೆಯ ಪ್ರವಾಹಗಳನ್ನು ಮಾತ್ರ ಚರ್ಚಿಸುವಾಗ ಹೊರಗಿನ ಅವಸ್ಥೆಗಳನ್ನು ಕಾಣದಾದುದು ಖೇದಕರ. ದೈನಂದಿನ ವಾರ್ತೆಯಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಆ ಮೂಲಕ ಬುಗಿಲೇಳುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಅಧಿಕಾರ ವರ್ಗಗಳು ತಯ್ಯಾರಾಗಬೇಕು. ದೇಶದ ಪ್ರಜೆಗಳ ಸ್ವಸ್ಥ ಜೀವನವನ್ನು ಆಧರಿಸಿ ಪ್ರಜಾಪ್ರಭುತ್ವದ ಶುದ್ಧ ವಾಯು ನೆಲೆನಿಲ್ಲುವುದು ಎನ್ನುವ  ಅರಿವು ಮೂಡಬೇಕು. ದೇಶದಲ್ಲಿ UAPA (Unlawful Activities Prevention Act) AFSPA (Armed Forces Special Power Act)ಮುಂತಾದ ಸಂಪೂರ್ಣ ಮಾನವ ಹಕ್ಕುಗಳನ್ನು ದ್ವಂಸ ಮಾಡುವ ಕಾಯ್ದೆ ಗಳನ್ನು ನಿರ್ನಾಮ ಮಾಡುವ ವರೆಗೆ ಇಲ್ಲಿನ ಮಾನವ ಹಕ್ಕುಗಳಿಗೆ ಪೂರ್ಣ ಸುರಕ್ಷಿತತೆ ಸಿಗಲು ಸಾಧ್ಯವಿಲ್ಲ ಎನ್ನುವುದನ್ನು ಅಧಿಕಾರ ವರ್ಗ ಅರ್ಥ ಮಾಡಿಕೊಳ್ಳಬೇಕು. UAPA, AFSPA ಕಾಯ್ದೆಯನ್ನು ಸಂಪೂರ್ಣವಾಗಿ ನಿ಼ಷೇಧಿಸಿದರೆ ಮಾತ್ರ ದೇಶದ ಪ್ರಜಾಪ್ರಭುತ್ವದ ಅರ್ಥ ವಿಶಾಲ ಮತ್ತು ವ್ಯಾಪ್ತಿಯು ಪರಿಪೂರ್ಣ ವಾಗುವುದು ಎನ್ನುವುದನ್ನು ಹೇಳಬೇಕಾಗುತ್ತದೆ.

ಇನ್ನು ದೇಶದಲ್ಲಿ ನಡೆದ ಹಲವಾರು ನಕಲಿ ಎನ್ ಕೌಂಟರ್ ಗಳು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ದೇಶದ ಎಲ್ಲಾ ಪ್ರಜೆಗಳಿಗೂ ಸಮಾನ ನ್ಯಾಯ ಎನ್ನುವ ಸಂಕಲ್ಪವು ಕೇವಲ ಬರಹಕ್ಕೆ ಮಾತ್ರ ಸೀಮಿವಾಗಿದೆ. ಮುಸ್ಲಿಂ ಅಲ್ಪಸಂಖ್ಯಾತ ರನ್ನೊಳಗೊಂಡ  ಹಿಂದುಳಿದ ವರ್ಗಗಳಿಗೆ ಎಲ್ಲಾ ಅರ್ಥದಲ್ಲೂ ನ್ಯಾಯದ ಕಿರಣವು ಅನ್ಯವಾಗಿದೆ. AFSPA ಕಾಯಿದೆಯು ದೇಶದ ನೋರ್ತ್, ಈಷ್ಟ್  ಭಾಗ ಮತ್ತು ಕಾಶ್ಮೀರದ ಅವಸ್ಥೆಯು ಇದನ್ನಾಗಿದೆ ಹೇಳುವುದು. ಅಲ್ಪಸಂಖ್ಯಾತರನ್ನು ಬೇಟೆ ಯಾಡುವ ಮೂಲಕ ಈ ಕಾಯ್ದೆಯನ್ನು ಗಟ್ಟಿ ಗೊಳಿಸುವ ತಂತ್ರಗಳು ಈ ಹಿಂದೆ ನಡೆದಿದೆಯಾದರೂ ಅದರ ಮುಂದುವರಿದ ಭಾಗವೆಂಬಂತೆ ಇಂದಿಗೂ ಕೂಡ ಅದು ಹಾಗೇ ನಡೆಯುತ್ತಿದೆ. ವಿಶಾಲ ದೃಷ್ಟಿ ಹೊಂದಿರುವ ನಮ್ಮ ಸಂವಿದಾನ, ಸ್ವಾತಂತ್ರ್ಯ, ನಿಷ್ಪಕ್ಷಪಾತವಾದ ಕಾರ್ಯವೈಖರಿಗಳು ಮತ್ತು ನ್ಯಾಯ ವ್ಯವಸ್ಥೆ ಗಳು, ಭಾರತೀಯರನ್ನು ಪ್ರಪಂಚದ ಮುಂದೆ ಗೌರವಿಸುವಂತೆ ಮಾಡಿದ್ದ ಒಂದು ಕಾಲವಿತ್ತು. ಆದರೆ ಇಂದು ಸಂಪೂರ್ಣವಾಗಿ ದೇಶದ ಸ್ಥಿತಿ ಅತ್ಯಂತ ಹೀನವಾಗಿದೆ ಎಂದರೆ ತಪ್ಪಾಗಲಾರದು.

ದೇಶದ ಮುಸಲ್ಮಾನರ ನ್ನೊಳಗೊಂಡ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳಾದ ದಳಿತ ಆದಿವಾಸಿಗಳು, ಹಲವು ರೀತಿಯಲ್ಲಿ ಬಲಿಯಾಡುಗಳಾಗುವ ದುರಂತ ವರ್ತಮಾನಗಳ ಕಥೆಗಳು ದೈನಂದಿನ ವರದಿಯಾಗುತ್ತಿದೆ. ಧಾರ್ಮಿಕ, ಸಾಂಸ್ಕೃತಿಕ, ಭಾಷೆ ಮತ್ತು ಪ್ರಾದೇಶಿಕವಾಗಿ ವಿಭಿನ್ನ ರೀತಿಯಲ್ಲಿ  ಬದುಕುವವರಾಗಿದ್ದಾರೆ ದೇಶದ ಮುಸಲ್ಮಾನರ ನ್ನೊಳಗೊಂಡ ಅಲ್ಪಸಂಖ್ಯಾತ ವಿಭಾಗ.  ಇದರಲ್ಲಿ ಅತ್ಯಂತ ಹೆಚ್ಚು ಜನರು ಭಯೋತ್ಪಾದನೆ ಮತ್ತು ಇತರ ಕರಾಳ ಕಾನೂನುಗಳನ್ನು ಹೊಂದಿ ಜೈಲಲ್ಲಿ ವಾಸಿಸುತ್ತಿದ್ದಾರೆ. ಧರ್ಮ ನೋಡಿ ಜೈಲಿಗಟ್ಟುವ ಮತ್ತು ಪ್ರಕರಣಗಳಲ್ಲಿ ಸಿಲುಕಿಸುವ ತಂತ್ರಗಳು ದೇಶದಲ್ಲಿ ಹೇರಳವಾಗಿ ಬೆಳೆಯುತ್ತದೆ. ದೇಶದ ಮುಸಲ್ಮಾನರ ಸಮಸ್ಯೆಗಳನ್ನು ಕಲಿಯಲು ಅನೇಕ ಅಯೋಗಗಳನ್ನು ನೇಮಿಸಿದ್ದರೂ ಸರಕಾರಗಳು ಅವರ ವರದಿಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಶೈಕ್ಷಣಿಕ, ಸಾಮಜಿಕ, ರಾಜಕೀಯವಾಗಿ ಬಹಳಷ್ಟು ಹಿಂದುಳಿದ ಮುಸಲ್ಮಾನರಿಗೆ ಅಭಿವೃದ್ಧಿಯ ಬರವಸೆ ನೀಡಲು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯಾವ ರಾಜಕೀಯ ಪಕ್ಷಗಳು ಕೂಡ ಮುಂದೆ ಬರಲಿಲ್ಲ. ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ, ಹಾಗೂ ಶೋಷಿತ ವರ್ಗದ ಜನರನ್ನು ಒಳಗೊಂಡ ಅಭಿವೃದ್ಧಿ ಮತ್ತು ಜನಕೀಯ ಪದ್ದತಿಗಳ ಮೂಲಕ ಮಾತ್ರ ಕ್ಷೇಮ ರಾಷ್ಟ್ರ ಎನ್ನುವ ಭಾರತದ ಬೆಳವಣಿಗೆ, ಕನಸಿಗೆ ವಿಕಸನ ನಿರ್ಮಾನ ಸಾಧ್ಯ.

ದೇಶದ ಒಟ್ಟು ಜನಸಂಖ್ಯೆಯ 14.2% ಶೇಕಡ ಮುಸಲ್ಮಾನರು ಜೀವಿಸುವ ಭಾರತದಲ್ಲಿ ಅತೀ ದುಃಖದ ಸಂಗತಿಯೆಂದರೆ ದೇಶದಲ್ಲಿ ತಾಂಡವಾಡುವ ಕೋಮು ಗಲಭೆಗೆ ಬಲಿಯಾಗುವವರಲ್ಲಿ 90% ಮುಸಲ್ಮಾನರಾಗಿದ್ದಾರೆ ಎನ್ನುವುದು. ವಿವಿಧತೆಯಲ್ಲಿ ಏಕತೆಯನ್ನು ಸಾರುವ  ಒಂದು ದೇಶದಲ್ಲಾಗಿದೆ ಈ ರೀತಿಯ ಹಿಂಸಾ ಕೃತ್ಯಗಳಿಗೆ ಬಲಿಯಾಗುತ್ತಿರುವುದು ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಂವಿದಾನವು ಅಧಿಕಾರ ವರ್ಗದವರೊಂದಿಗೆ ಅಲ್ಪಸಂಖ್ಯಾತ ಸಂರಕ್ಷಣೆಯ ಕುರಿತು ಆಹ್ವಾನವನ್ನು ನೀಡುತ್ತದೆ. ಆದರೆ ಇಂದು ಅವುಗಳಿಗೆ ವ್ಯತಿರಿಕ್ತವಾಗಿ ನೆಡೆಯುತ್ತಿರುವುದು ಖೇದಕರ. 2002 ರಲ್ಲಿ ಗುಜರಾತ್ ನಲ್ಲಿ ನಡೆದ ಸ್ಪೋಂಸರ್ಸ್ ವಂಶ ಹತ್ಯೆ ಸಾದಾರಣ ಎರಡು ಸಾವಿರಕ್ಕಿಂತಲೂ ಹೆಚ್ಚು ಮುಸಲ್ಮಾನರನ್ನು ಬೇಟೆ ಯಾಡಿತ್ತು. ಗುಜರಾತ್ ಗಲಭೆಗೆ ಎರಡು ದಶಕಗಳು ಪೂರ್ತಿಗೊಳ್ಳುವ ಈ ಸಂದರ್ಭದಲ್ಲಿ ಇಂದು ಕೂಡ ವಾಸಿಯಾಗದ ಗಾಯದಂತೆ ಆ ನೋವುಗಳು ಬಾಕಿಯಾಗಿದೆ. ವಂಶ ಹತ್ಯಯ ನೇತೃತ್ವ ವಹಿಸಿದವರೇ ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನಿ ಗಿರಿಯಲ್ಲಿ ಮೆರೆಯುತ್ತಾರೆ ಎಂದರೆ ದೇಶದ ಕಾನೂನು ವ್ಯವಸ್ಥೆ, ಪ್ರಜಾಪ್ರಭುತ್ವವು ಆತಂಕದಲ್ಲಿದೆ ಎನ್ನುವುದು ಅರ್ಥವಾಗುತ್ತದೆ. ಧರ್ಮ ಮತ್ತು ವರ್ಗ ನೋಡಿ ಆರೋಪಿಗಳನ್ನು ತೀರ್ಮಾನಿಸುವ ಅತ್ಯಂತ ಹೀನವಾದ ಸನ್ನಿವೇಶ ಇಲ್ಲಿ ನಿರ್ಮಾನವಾಗುತ್ತಿದೆ.

ಭಾರತದಾದ್ಯಂತ ನಡೆದ ಬಾಂಬ್ ಸ್ಫೋಟ ಮತ್ತು ಭಯೋತ್ಪಾದನಾ ದಾಳಿಯ ಬಗ್ಗೆ ಸಮರ್ಥವಾಗಿ ತನಿಖೆ ನಡೆಸಲು ಸಾಧ್ಯವಾಗದೇ ಅದನ್ನು ಒಂದು ಸಮುದಾಯದ ಮೇಲೆ ಕಟ್ಟುವ ಮೂಲಕ ಆರೋಪ ಪಟ್ಟಿಯಲ್ಲಿ ಆ ಸಮುದಾಯವನ್ನು ನಿಲ್ಲಿಸಲಾಗುತ್ತದೆ. ದೇಶದಲ್ಲಿ ನಡೆದ ಎಲ್ಲಾ ಸ್ಪೋಟಗಳ ಹಿಂದಿನ ರುವಾರಿಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅರಿವಿದ್ದರೂ ಅವರನ್ನು ಬಂದಿಸುವ ಬುದ್ದಿ ತೋರಿಸುವುದಿಲ್ಲ. ವರ್ಗ ವಿವೇಚನೆ ನಡೆಸುವುದನ್ನು ಕಟುವಾಗಿ ವಿರೋಧಿಸುವ ಸಂವಿದಾನಕ್ಕೆ ಯಾವುದೇ ಬೆಲೆ ನೀಡದೇ ಏಕಸ್ವಾಮ್ಯಾಡಲಿತವು ದೇಶದಲ್ಲಿ ಮುಂದುವರಿಯುತ್ತಿದೆ. ಧರ್ಮಾಧಾರಿತವಾದ ಒಂದು ದೇಶದ ಕನಸು ಕಾಣುವ ಆಡಲಿತ ವರ್ಗವು ಅಲ್ಪಸಂಖ್ಯಾತ ಸಮುದಾಯದ ನಿರ್ನಾಮವನ್ನು ಗುರಿಯಾಗಿಟ್ಟು ಕೊಂಡು ಕೆಲಸ ಮಾಡುತ್ತಿದೆ. ನಿರಪರಾದಿಗಳಾದ ಮುಸ್ಲಿಂ ಯುವಕರನ್ನು ಬಂಧಿಸಿ, ಕರಾಳ ಕಾನೂನುಗಳನ್ನು ಅವರ ಮೇಲೆ ಹೊರಿಸಲಾಗುತ್ತದೆ. ತಮ್ಮ ಅಮೂಲ್ಯವಾದ ಜೀವನದ ಅರ್ಧದಷ್ಟು ಭಾಗವನ್ನು ಜೈಲಲ್ಲೇ ಕಳೆಯಬೇಕಾದ ದುಸ್ಪರಿಸ್ಥಿತಿಯಲ್ಲಿ ಜೀವಿಸುವವರಾಗಿದ್ದಾರೆ ಅವರು. ಹೈದರಾಬಾದ್, ದೆಹಲಿ, ಉತ್ತರ ಪ್ರದೇಶ, ಕೋಲ್ಕತಾ, ಬೆಂಗಳೂರು, ಅಹ್ಮದಾಬಾದ್ ಮುಂತಾದ ಸ್ಥಳಗಳಲ್ಲಿ ನಿರಪರಾದಿಗಳಾದ ಮುಸ್ಲಿಂ ಯುವಕರನ್ನು ಹಿಡಿದು ಭಯೋತ್ಪಾದನಾ ಪಟ್ಟ ನೀಡಿ ಜೈಲಿಗಟ್ಟುವ ಪೋಲಿಸ್ ನಾಟಕಗಳು ದೇಶದ ಅಲ್ಪಸಂಖ್ಯಾತ ಸಮುದಾಯದ ಅರಕ್ಷಿತಾವಸ್ಥೆಯನ್ನು ಸೂಚಿಸುತ್ತದೆ.

2012 ರ ಸೆಪ್ಟೆಂಬರ್ ತಿಂಗಳಲ್ಲಿ ಹೊರಬಂದ National Crime Records Bureau ದ ಅಂಕಿ ಅಂಶಗಳ ಪ್ರಕಾರ 2011 ದೇಶದ ಒಟ್ಟು1382 ಜೈಲುಗಳಲ್ಲಿ 3,72,926 ವ್ಯಕ್ತಿಗಳಿದ್ದಾರೆ. ಇದರಲ್ಲಿ 75, 053 ಮಂದಿ ಮುಸಲ್ಮಾನರಾಗಿದ್ದಾರೆ . 22,943 (17.8) ಶೇಕಡ ನ್ಯಾಯಾಂಗ ಶಿಕ್ಷೆ ಗೊಳಗಾದವರು. 51,206 ಮಂದಿ ಮುಸ್ಲಿಮರು ವಿಚಾರಣ ಕೈದಿಗಳಾಗಿ ಕಳೆಯುತ್ತಿದ್ದಾರೆ (ಸಾಧಾರಣವಾಗಿ ಹೇಳುವುದಾದರೆ 21.2 ಶೇಕಡ) . ಒಟ್ಟು ಮುಸ್ಲಿಂ ಕೈದಿಗಳಲ್ಲಿ 60 ಶೇಕಡ ಕ್ಕಿಂತಲೂ ಹೆಚ್ಚಿನ ವ್ಯಕ್ತಿಗಳು  ಇಂದು ಕೂಡ ವಿಚಾರಣೆ ನಡೆಸದೇ ಅಥವಾ ವಿಚಾರಣೆಯ ಅವಧಿಯಲ್ಲಿ ಜೈಲಿನಲ್ಲಿ ಕಳೆಯುತ್ತಿದ್ದಾರೆ ಎಂದರ್ಥ.  ಕೇಂದ್ರಾಡಳಿತ ಪ್ರದೇಶಗಳನ್ನು ಕೂಡ ಸೇರಿಸದರೆ ಬಂಧಿತ ಮುಸ್ಲಿಂ ಕೈದಿಗಳ ಸಂಖ್ಯೆಯು ಅಧಿಕವಾಗುತ್ತದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಈ ನಾಲ್ಕು ರಾಜ್ಯಗಳಲ್ಲಿನ ಜೈಲುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ.

ಸಂವಿದಾನದ 14 ರಿಂದ 18 ರವರೆಗಿನ ವಿಧಿಯ ಅನ್ವಯ ಕಾನೂನಿನ ಎದುರಲ್ಲಿ ಸಮಾನತೆ ಮತ್ತು  ಸಂಪೂರ್ಣ ರಕ್ಷಣೆ ವ್ಯವಸ್ಥೆ ಇದೆ. ಜನಾಂಗ, ಜಾತಿ, ಲಿಂಗದ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ. ವಿಭಿನ್ನ ರೀತಿಯ ವಿಭಾಗದವರು ಐಕ್ಯತೆ ಯೊಂದಿಗೆ, ಜಾತ್ಯಾತೀತ ಸಿದ್ದಾಂತಗಳನ್ನು ಪಾಲಿಸಿ, ಸರ್ವ ಪ್ರಜೆಗಳಿಗೆ ಸಮಾನ ನ್ಯಾಯ ಒದಗಿಸುವ ಪ್ರಯೋಗವನ್ನು ಕಾರ್ಯಗತಗೊಳಿಸಲು ಕಲಿಸುವ  ಸಂವಿದಾನ ವಿರುವ ನಮ್ಮ ದೆಡಶದಲ್ಲಿ ಅಸ್ವಸ್ಥತೆ, ಸೈನಿಕ ಬೇಟೆ, ಅಲ್ಪಸಂಖ್ಯಾತ ಶೋಷಣೆ, ಮಾನವ ಹಕ್ಕುಗಳ ಉಲ್ಲಂಘನೆ ನಡೆಯುವುದು ಸಮಂಜವಲ್ಲ. ವಿವಿಧ ರೀತಿಯ ಧರ್ಮ, ಆಚಾರ, ವಿಚಾರ, ಸಂಸ್ಕೃತಿ, ಆಶಯಗಳಲ್ಲಿ ಜೀವಿಸುವ ಎಲ್ಲಾ ಪ್ರಜೆಗಳಿಗೆ ಸಮಾನ ಹಕ್ಕು, ನ್ಯಾಯ ಸಮತ್ವತೆ, ಸಾಮಾಜಿಕ ನ್ಯಾಯವನ್ನು ನೀಡಿದರೆ ಮಾತ್ರ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭವ್ಯ ಭಾರತ ವನ್ನು ನಿರ್ಮಾಣ ಮಾಡಲು ಸಾಧ್ಯ.

ಲೇ. ಶಹನಾಝ್ ಶಾಝ್  (ಶಾನಿಶ) ಕಡಬ.

Share this on:
error: Content is protected !!