Latest Posts

ಡ್ರಗ್ಸ್ ಜಾಲ ಮತ್ತು ಯುವಜನತೆ

ಒಬ್ಬ ವ್ಯಕ್ತಿ ಡ್ರಗ್ಸ್ ವ್ಯಸನಿ ಆದ ಎಂದರೆ , ಆಮೇಲೆ ಅದರಿಂದ ಹೊರತರುವುದು ಅಷ್ಟು ಸುಲಭದ ಕೆಲಸ ಅಲ್ಲವೇ ಅಲ್ಲ.
ಇತ್ತೀಚೆಗೆ ಅಮಲುಪದಾರ್ಥಗಳ ಜಾಲದ ಕುರಿತು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಕಾರಣ, ಅದರ ಹಿಂದೆ ಸಮಾಜದಲ್ಲಿ ಗುರುತಿಸಿಕೊಂಡ ಪ್ರಸಿದ್ಧ ವ್ಯಕ್ತಿಗಳ ಕೈವಾಡ ಇರೋ ಕಾರಣದಿಂದ ಜನರೆಲ್ಲಾ ತಮ್ಮ ಚಾನೆಲ್ ನೋಡುತ್ತಾರೆ ಅನ್ನೋ ಚಪಲ ಅಷ್ಟೇ .


ಅದು ಬಿಟ್ಟು ಯಾವುದೇ ಮಾಧ್ಯಮವಾಗಲಿ, ಅಥವಾ ಇನ್ನಿತರ ಸುದ್ದಿ ಮಾಧ್ಯಮಗಳಾಗಲಿ, ಜನರು ಮಾದಕ ವಸ್ತುಸೇವನೆಯಿಂದ, ದೂರ ಇರಲಿ ಎಂಬ ಕಾಳಜಿಯಿಂದ ಖಂಡಿತಾ ಅಲ್ಲ.
ದೇಶದಲ್ಲಿ ಮದ್ಯಪಾನ ಗಾಂಜಾ ಸಹಿತ ಹಲವಾರು ಮಾದಕವಸ್ತುಗಳಿಂದ ಕೋಟ್ಯಾನುಕೋಟಿ  ಹಣದ ವಹಿವಾಟುಗಳ ಮೂಲಕ ಅದೆಷ್ಟೋ ಕಳ್ಳವ್ಯವಹಾರ ಮಾಡುವ ವ್ಯಕ್ತಿಗಳು, ಹಣವನ್ನ ಬಾಚಿಕೊಂಡು, ಸಮಾಜದ ನಡುವೆ ಗಣ್ಯವ್ಯಕ್ತಿಗಳ ಮುಖವಾಡ ತೊಟ್ಟು, ನಿರ್ಭೀತಿಯಿಂದ, ಯಾವುದೇ ಮುಲಾಜಿಲ್ಲದೆ ತಲೆಎತ್ತಿ ನಡೆಯುತ್ತಿದ್ದಾರೆ.


ದೊಡ್ಡದೊಡ್ಡ ಕುಳದ ಯುವಕರು, ಹೆರಾಯಿನ್ ಅಫೀಮು ಚರಸ್ ಗಳ ಹಿಂದೆ ಹೋದರೆ, ಸಾಮಾನ್ಯ ಹಾಗೂ ಬಡ ಯುವಕರು ಗಾಂಜಾದ ದಾಸರಾಗಿ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ .
ಮಹಾನಗರಿಗಳಾದ ಮುಂಬಯಿ ಬೆಂಗಳೂರು ಕೋಲ್ಕತಾಗಳ ಸ್ಲಮ್ ಏರಿಯಾದ ಯುವಕರಲ್ಲಿ ಅತ್ಯಧಿಕ ಯುವಕರ ನಶೆಯಲ್ಲಿಯೇ ಇರುತ್ತಾರೆ, ದುಡಿಮೆಯೂ ಕೂಡ ಮಾದಕವಸ್ತುಗಳ ಸೇವನೆಗೆಂದೆ ಸೀಮಿತವಾಗಿರುತ್ತೆ.
ಹತ್ತಿರದಲ್ಲಿ ನೋಡೋದಾದ್ರೆ ಮಂಗಳೂರು ಉಡುಪಿಗಳಲ್ಲಿ ಕೂಡ ಗಾಂಜಾ ಹಾಗೂ ಇತ್ತಿತರ ಡ್ರಗ್ಸ್ ಗಳ ಬಹುದೊಡ್ಡ ಜಾಲವೆ ಇದೆ.
ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳೇ ಇಂತಹಾ ಜಾಲಗಳ ಮುಖ್ಯಗುರಿಯಾಗಿರುತ್ತೆ.
ಭವಿಷ್ಯ ರೂಪಿಸುವ ವಿದ್ಯಾರ್ಥಿಗಳು ಡ್ರಗ್ಸ್ ನ ಹಿಂದೆ ಹೋಗಿ ತಮ್ಮ ಭವಿಷ್ಯವನ್ನೇ ಕಳೆದುಕೊಂಡು, ಆತ್ಮಹತ್ಯೆ ,ಅಸಹಜಸಾವಿಗೆ ಗುರಿಯಾಗುತ್ತಲೇ ಇದ್ದಾರೆ.

ನಶೆಯ  ಕಾರಣದಿಂದ ಶೀಲವನ್ನು ಕಳೆದುಕೊಂಡು ಹೆಣವಾದ  ಉದಾಹರಣೆ ಕೂಡ ನಮ್ಮ ಕಣ್ಣೆದುರಿಗೆ ಇದೆ.
ಒಂದು ಕಡೆ ಮಧ್ಯದ ದಾಸರಾಗಿ ,ಬದುಕು ರೂಪಿಸಲು ಕಷ್ಟಪಡುವ ಜನಸಮೂಹ, ಮತ್ತೊಂದು ಕಡೆ, ಅಮಲುಪದಾರ್ಥ ಸೇವನೆಯಿಂದ ದೇಶದ ಭವಿಷ್ಯತ್ತಿಗೆ ಮಾರಕವಾಗುವ ಯುವಜನತೆ.
ಈ ಮಧ್ಯೆ ಇದನ್ನೇ ವ್ಯವಹಾರ ಮಾಡಿಕೊಂಡ ಕೆಲವೊಂದು ಸುಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ, ನಿಜವಾದ ದೇಶದ್ರೋಹಿಗಳು.
ನಟಿಯೊಬ್ಬಳು ಡ್ರಗ್ಸ್ ವ್ಯವಹಾರದಲ್ಲಿ ಸಾಕ್ಷಿಸಮೇತ ಸಿಕ್ಕಿಬಿದ್ದಾಗ , ಅವಳ ಬಂಧನವಾದಾಗ, ಅವಳ ಮುಖದಲ್ಲಿ ಯಾವುದೇ ಅಪರಾಧಿ ಭಾವನೆ ಕೂಡ ಇಲ್ಲದೆ, ನಗುನಗುತ್ತಾ ಫಿಲಂ ಶೂಟಿಂಗ್ ಗೆ  ಹೋಗೋ ರೀತಿ ಮಾಧ್ಯಮದವರತ್ತ, ಜನರೆಡೆಗೆ ಕೈಬೀಸುತ್ತಾ , ಹೋಗುತ್ತಾಳೆ ಅಂದ್ರೆ, ಅವಳಿಗೂ ಗೊತ್ತಿದೆ ಈ ದೇಶದ ಕಾನೂನಿನ ಕುಣಿಕೆಯಿಂದ ಅತ್ಯಂತ ಸುಲಭವಾಗಿ ತಪ್ಪಿಸಬಹುದೆಂದು .
ಕೆಲವೊಂದು ರಾಜಕೀಯ ಪಕ್ಷಗಳ ಫಂಡ್ ಕೂಡ ಇಂತಹಾ ಡ್ರಗ್ಸ್ ಜಾಲದ ರೂವಾರಿಗಳಿಂದಲೇ ಸಂಗ್ರಹ ಆಗುತ್ತೆ ಎನ್ನೋ ಸಂಶಯ ಕೂಡ ಖಂಡಿತಾ ಮೂಡುತ್ತೆ.
ಗಾಂಜಾವ್ಯಸನದಿಂದಾಗಿ ಇಂದು ಕರಾವಳಿ ಭಾಗದಲ್ಲಿ ಹಲವಾರು ಕೊಲೆ ಕೂಡ ನಡೆದುಹೋಗಿದೆ, ಕೆಲವೊಂದು ಕೊಲೆಗಳು ಕೋಮುಸ್ವರೂಪ ಪಡೆದು , ರಾಜಕೀಯ ಪ್ರವೇಶವಾಗಿ,ಸಮಾಜದ ಸ್ವಾಸ್ಥ್ಯವನ್ನು ಮತ್ತಷ್ಟು ಕೆಡಿಸಿ, ಅದೆಷ್ಟೋ ಯುವಕರ ಭವಿಷ್ಯಕ್ಕೆ ಕೂಡ ಕೊಳ್ಳಿ ಇಟ್ಟಿರೋದು ಕೂಡ ನಮ್ಮ ಕಣ್ಣೆದುರು ನಡೆದಿದೆ.
ಯುವಜನತೆ ಸಂಪೂರ್ಣ ಕೆಟ್ಟುಹೋಗುವದಕ್ಕಿಂತ ಎಚ್ಚೆತ್ತುಕೊಳ್ಳೋಣ, ಗಾಂಜಾ ವ್ಯಸನ, ಡ್ರಗ್ಸ್ ಜಾಲಗಳನ್ನು ಬುಡಸಮೇತ ಕಿತ್ತೊಗೆಯಲು ಅಸಾಧ್ಯ, ಆದರೆ ಅದರ ರೆಂಬೆಕೊಂಬೆಗಳನ್ನು ಕತ್ತರಿಸಿ, ಮತ್ತೆ ಚಿಗುರದ ಹಾಗೆ ಮಾಡೋಕೆ ಸಾಧ್ಯ.
ಡ್ರಗ್ಸ್ ಜಾಲದ ಹಿಂದಿರುವ ದೊಡ್ಡಕುಲಗಳನ್ನು ಒಮ್ಮೆಲೇ ಕಂಡುಹಿಡಿಯಲು ಸಾಧ್ಯವಿಲ್ಲದಿದ್ದರೂ,ತಮ್ಮ ಬುಡಕ್ಕೆ ಬೆಂಕಿಬಿದ್ದಾಗ ತನ್ನಿಂದಾತಾನೆ ಹೊರಗೆ ಬರೋದು ನಿಶ್ಚಿತ.
ಡ್ರಗ್ಸ್ ಜಾಲವನ್ನು ಯಾವುದೋ ಘನಂಧಾರಿ ಕೆಲಸಕ್ಕೆ ಹೋಲಿಸುತ್ತಾ, ದಿನವಿಡೀ ನಟನಟಿಯರ ಚಲನವಲನಗಳನ್ನು ಒಂದಿಂಚೂ ಬಿಡದೆ ಪ್ರಕಟಿಸುವ ನ್ಯೂಸ್ ಚಾನೆಲ್ಗಳನ್ನು ನೋಡೋದು ಆದಷ್ಟು ಕಮ್ಮಿ ಮಾಡೋಣ.
ನಮ್ಮ ಮನೆಯನ್ನು ಡ್ರಗ್ಸ್ ಮುಕ್ತವಾಗಿಸಲು ಪ್ರತಿಯೊಬ್ಬರುಪಣತೊಡುವ ಮೂಲಕ ದೇಶವನ್ನು ರಕ್ಷಿಸಲು ಪ್ರಯತ್ನಿಸೋಣ .

ಅಮೀರ್ ಬೆಳಪು

Share this on:
error: Content is protected !!