Latest Posts

ತೊಡಿಕಾನ ಅಬ್ದುಲ್ಲಾರೆಂಬ ನಿರಾಡಂಬರ ಸಾಹಿತಿ:

-ವಿಷ್ಣು ಕನ್ನಡಗುಳಿ

ಸುಮಾರು ನಲ್ವತ್ತೈದು ವರುಷಗಳ ಹಿಂದಿನ ಸಂಗತಿ.ಒಂದು ಮದುವೆ ಮನೆ.ಮದುವೆಯ ಹಿಂದಿನ ದಿನ.ಮನೆಯ ಮುಂದೆ ದೊಡ್ಡ ಚಪ್ಪರ.ನೆಂಟರಿಷ್ಟರು ಬಹಳಷ್ಟು ಜನ ಸೇರಿದ್ದಾರೆ.ಒಂದು ಕಡೆ ಹಿರಿಯರು ಹರಟೆ ಹೊಡೆಯುತ್ತಿದ್ದರೆ, ಇನ್ನೊಂದು ಕಡೆ  ಸ್ವಾಭಾವಿಕವಾಗಿ ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದಾರೆ.ಚಪ್ಪರದ ಕಂಬಕ್ಕೆ ಒಂದು ಆಡನ್ನು ಕಟ್ಟಲಾಗಿದೆ. ಮಕ್ಕಳೊಂದಿಗೆ ಅದು ತಲೆಯನ್ನು ಅತ್ತಿತ್ತ ಆಡಿಸುತ್ತಾ ಸಂಭ್ರಮ ದಲ್ಲಿ ಪಾಲ್ಗೋಂಡಿದೆ.ಮರುದಿನ ಮದುವೆ ಸಂಭ್ರಮ ದಲ್ಲಿ ಕಂಬಕ್ಕೆ ಕಟ್ಟಿದ ಆಡಿಲ್ಲ!.ಕೇಳಿದಾಗ ಅದರದ್ದೇ ಆದಿನದ ಊಟಕ್ಕೆ ಸ್ಪೆಶಲ್!. ಹುಡುಗನೊಬ್ಬ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.ಜತೆಗೆ ಶಪಥವೊಂದನ್ನು ಮಾಡಿದ ಇನ್ನೆಂದೂ ಯಾವುದೇ ಮಾಂಸಾಹಾರ ಸೇವನೆ ಮಾಡುವುದಿಲ್ಲ.!!. ಅದೇ ವ್ಯಕ್ತಿ   ಸಾಹಿತಿ ತೊಡಿಕಾನ ಅಬ್ದುಲ್ಲಾ.
ಕರಾವಳಿಯಲ್ಲಿ ತೊಡಿಕಾನ ಅಬ್ದುಲ್ಲಾರ ಹೆಸರು ಕೇಳದವರು ವಿರಳ.ಜತೆಗೆ ವಿಪರ್ಯಾಸ ವೆಂದರೆಅವರ ಮುಖ ಪರಿಚಯದವರು ಇನ್ನೂ ವಿರಳ!!.ಇದರಿಂದಾಗಿ ಅವರು ಅನೇಕ ಸಲ ಇಕ್ಕಟ್ಟಿಗೆ ಸಿಲುಕ್ಕಿದ್ದು ಇದೆ.ಅವರಸನ್ಮಾನ ಸಮಾರಂಭದಲ್ಲಿಯೇ ಅವರನ್ನು ತಡೆದದ್ದು ಇದೆ.ಇಂತಹ ಸರಳತೆ.ಇವರದು’ಎಲೆಯ ಮರೆಯೊಳರಲಿ ನಗುವ ಸುಮನ ರಾಶಿಯಂದದಿ,’ಪ್ರಚಾರ ಬಯಸದ ಅಪರೂಪದ ವ್ಯಕ್ತಿತ್ವ.
ಇವರ ಜನನ ೧೯೬೦ರಲ್ಲಿ ಕೇರಳದ ಕಾಸರಗೋಡುನ ಪೆರ್ಲ ಸಮೀಪದ ಬೆಂಗಪದವಿನಲ್ಲಿ.ತಂದೆ ಅದ್ರಾಮ ಬ್ಯಾರಿ.ತಾಯಿ ಅವ್ವಮ್ಮ.ಬಾಲ್ಯವೆಲ್ಲ ಸುಳ್ಯದ ತೊಡಿಕಾನದಲ್ಲಿ.ಶಿಕ್ಷಣ ಕೇವಲ ಪ್ರಾಥಮಿಕ ಶಾಲೆ ಮಾತ್ರ.ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕಲಿತದಕ್ಕಿಂತ ಅನುಭವ ಶಾಲೆಯಲ್ಲಿ ಕಲಿತದ್ದು ಹೆಚ್ಚು.ಆ ಕಾಲದಬಡತನ, ಮುಸ್ಲಿಂ ಸಮುದಾಯದ ಸ್ತ್ರೀ ಶೋಷಣೆ, ತಲಾಕ್, ಸ್ತ್ರೀ ಶಿಕ್ಷಣಕ್ಕೆ ಇದ್ದ ತಡೆ ಇವುಗಳೆಲ್ಲ ಇವರ ಸಾಹಿತ್ಯಕ್ಕೆ ಸರಕುಗಳಾದವು. ಆಗಿನಯಕ್ಷಗಾನ ಕಲಾವಿದರಾದ ತೊಡಿಕಾನ ಬಾಬು ಗೌಡ,ಮಾವಿನಕಟ್ಟೆ ತಿಮ್ಮಪ್ಪ ಗೌಡ ಬರವಣಿಗೆಗೆ ಪ್ರೋತ್ಸಾಹ ನೀಡಿದರು.ಅದೇ ಊರಿನ ಪ್ರಸಿದ್ಧ ಸಾಹಿತಿ ಸಿ.ಎನ್.ರಾಮಚಂದ್ರ ಬೆನ್ನೆಲುಬಾಗಿ ನಿಂತರು.ಸಾಹಿತಿಗಳಾದ ಬೊಳುವಾರು ಮಹಮದ್ ಕುಂಞಿ,ಪಕೀರ್ ಮುಹಮ್ಮದ್ ಕಟಪಾಡಿಯವರ ಬರಹಗಳು ಇವರಿಗೆ ಸ್ಪೂರ್ತಿ ನೀಡಿದವು. .ಇದರೆಲ್ಲ ಫಲವಾಗಿ ಬಾಲ್ಯದಲ್ಲೇ ಸಾಹಿತ್ಯದಲ್ಲಿ ತೊಡಗಲು ಇವರಿಗೆ ಸಾಧ್ಯವಾಯಿತು.
ಒಂದು ಕಡೆ ಬಡತನ ಇನ್ನೊಂದೆಡೆ ಸಾಹಿತ್ಯದ ಸೆಳೆತ.ಸಾಹಿತ್ಯಕ್ಕೆ ಬಡತನವೇ ಮೂಲಧಾತು ವಾದ್ದರಿಂದ  ಹಿಂಜರಿಯದೆ ಬದುಕನ್ನು ಕಟ್ಟಿಕೊಂಡರು .
ಹದಿನೆಂಟನೇ ವಯಸ್ಸಿನಲ್ಲಿ ಮೊದಲ ಲೇಖನ ಸಂತೋಷ ಮಾಸಪತ್ರಿಕೆ ಯಲ್ಲಿ ಪ್ರಕಟವಾಯಿತು.ಅದೇಉತ್ಸಾಹದಲ್ಲಿ ಕಥೆಯೊಂದನ್ನು ಬರೆದರು ಅದು ಇಂಚರ ಮಾಸಪತ್ರಿಕೆ ಯಲ್ಲಿ ಬೆಳಕು ಕಂಡಿತು.ಇದು ಇವರ ಸಾಹಿತ್ಯ ಕೃಷಿ ಹುಲುಸಾಗಿ ಬೆಳೆಯಲು ನೀರು ಗೊಬ್ಬರ ವಾಯಿತು.ಅಲ್ಲಿಂದ ಆರಂಭಿಸಿದ ಓಟ ನಿಂತಿಲ್ಲ.ಮುಸ್ಲಿಂ ಕಂದಾಚಾರದಿಂದ ಆರಂಭವಾದ ಬರವಣಿಗೆ ಮತ್ತೆ ಧರ್ಮಾತೀತ ವಾಯಿತು.ಸಮಾನ ನಾಗರೀಕ ಸಂಹಿತೆ, ಸ್ತ್ರೀ ಸ್ವಾತಂತ್ರ್ಯ, ಪ್ರಾಣಿ ಹಿಂಸೆ, ಮೂಢನಂಬಿಕೆ, ಕೋಮು ಸಾಮರಸ್ಯ,ಹೀಗೆ ಪ್ರೌಢ ಲೇಖನಗಳು ಅವರ ಲೇಖನಿಯಿಂದ ಈಗ ಮೂಡಿಬಂದವು. ಜೊತೆಗೆ ಜೊತೆಗೆ ಸಣ್ಣ ಕಥೆಗಳು, ಧಾರಾವಾಹಿಗಳು,ಕವನಗಳು ಸೇರಿಕೊಂಡವು.
          ಹೆಸರುವಾಸಿಯಾದ ಯಾವುದೇ ವ್ಯಕ್ತಿಯ ಚಿತ್ರಣ ನಮ್ಮದೇ ಕಲ್ಪನೆ ಯಲ್ಲಿ ನಮ್ಮ ಚಿತ್ತಭಿತ್ತಿಯಲ್ಲಿ ಮೂಡುವುದು ಇದೆ.ಆದರೆ ತೊಡಿಕಾನ ಅಬ್ದುಲ್ಲಾರ ಚಿತ್ರಣವನ್ನು ಅವರನ್ನು ನೋಡದೆ ಕಲ್ಪಿಸುವುದು ಅಸಾಧ್ಯ!.ಅವರು ಅಷ್ಟೊಂದು ಸರಳ.ಆದರೆ ಅವರ ಲೇಖನಿಯಿಂದ ಸೃಷ್ಟಿ ಗೊಂಡ ಬರಹಗಳು ಅನೇಕ ನೂರು.ಪತ್ರಿಕೆಗಳಲ್ಲಿ ಪ್ರಕಾಶಗೊಂಡದ್ದು ಮುನ್ನೂರ ಕ್ಕಿಂತಲೂ ಅಧಿಕ.ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟಗೊಂಡು ಲಕ್ಷಾಂತರ ಮಂದಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.ಹೊಸದಿಗಂತ, ಉದಯವಾಣಿ,ತರಂಗ, ಉತ್ಥಾನ,ಮನ್ವಂತರ,ರಾಗಸಂಗಮ, ಕ್ರೈಂ ಕಾದಂಬರಿ,ತುಷಾರ,ಜನವಾಹಿನಿ, ವಿಜಯಕರ್ನಾಟಕ,ಜನಾತರಂಗ, ವಾರಪತ್ರಿಕೆ, ಸುದ್ದಿ ಸಂಗಾತಿ,ಸುದ್ದಿ ಬಿಡುಗಡೆ,ಉಷಾಪತ್ರಿಕೆ,ಗೆಳತಿ,ಕರವೇ ನಲ್ನುಡಿ ಮೊದಲಾದ ದಿನ,ವಾರ, ಪಾಕ್ಷಿಕ,ಮಾಸ ಮತ್ತು
   ವಿಶೇಷಾಂಕಗಳಲ್ಲಿ ಇವರ ಬರಹಗಳು ಬೆಳಕು ಕಂಡಿದೆ.ಮದರಂಗಿ ಎಂಬ ಮಾಸಿಕ ಪತ್ರಿಕೆ ಯಲ್ಲಿ ಸತತ ಹತ್ತು ವರ್ಷಗಳ ಕಾಲ ಇವರ ಕಥೆಗಳು ಧಾರಾವಾಹಿಗಳಾಗಿ ಪ್ರಕಟಗೊಂಡವು.ಮದರಂಗಿ(ಸಣ್ಣ ಕಥೆ ಗಳು),ಓ ಲೈ ಲಾ.(ಪ್ರಣಯ ಕಾದಂಬರಿ) ಪುಸ್ತಕ ರೂಪದಲ್ಲಿ ಹೊರಬಂದಿವೆ.
          ಆಕಾಶವಾಣಿ ಯಲ್ಲಿ ಕಥೆಗಳು,ಭಾಷಣ ಗಳು ತುಳು ಮತ್ತು ಕನ್ನಡ ಭಾಷೆಯಲ್ಲಿ ಪ್ರಸಾರವಾಗಿದೆ.ವಿವಿಧಧಾರ್ಮಿಕ ಕ್ಷೇತ್ರಗಳ ಬಗ್ಗೆ ಬರೆದ ಭಕ್ತಿಗೀತೆ ಕ್ಯಾಸೆಟ್,ಸಿ.ಡಿಗಳಾಗಿ ಬಿಡುಗಡೆಗೊಂಡಿವೆ.
          ಶಾಲಾ ವಾರ್ಷಿಕೋತ್ಸವಗಳಿಗೆ, ಪ್ರತಿಭಾ ಕಾರಂಜಿ ಗಳಿಗೆ ಅನೇಕ ನಾಟಕಗಳನ್ನು, ಹಾಡುಗಳನ್ನು ಬರೆದು ಕೊಡುತ್ತಿದ್ದಾರೆ.ಇವುಗಳಿಗೆಲ್ಲಾ ಪತ್ನಿ ಬಿಫಾತುಮ್ಮಾ ಫೆಮಿನಾ ರ ಪ್ರೋತ್ಸಾಹ ಇದೆ ಎನ್ನುವುದನ್ನು ಹೇಳಲು ಮಾತ್ರ ಅವರು ಮರೆಯುವುದಿಲ್ಲ.
          ಪ್ರಶಸ್ತಿ, ಪುರಸ್ಕಾರಗಳು:-ಸುಳ್ಯ ಜೇ.ಸಿ.ಯಿಂದ out standing younman award, ಸುಳ್ಯದಲ್ಲಿ ನಡೆದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ದಲ್ಲಿ ಕುರುಂಜಿ ವೆಂಕಟ್ರಮಣ ಗೌಡ ಪ್ರತಿಭಾ ಪುರಸ್ಕಾರ,ಸುಳ್ಯ ತಾಲೂಕು೨೦ನೇ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಕನ್ನಡ ಸಿರಿ ಸನ್ಮಾನ.ಬಂಟ್ವಾಳ ತಾಲೂಕು ಕಂದಾಯ ಇಲಾಖೆಯಿಂದ ನವೆಂಬರ್ ಒಂದರಂದು ಸನ್ಮಾನ,ಮಾಣಿಲ ಶ್ರೀ ಕ್ಷೇತ್ರ ಶ್ರೀಧಾಮ ದಿಂದ ಸನ್ಮಾನ, ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೇತ್ರದಿಂದ ಸನ್ಮಾನ, ಮಂಗಳೂರಿನ ಹನಿ ಪ್ರಕಾಶನದಿಂದ ಗೌರವ, ಕರ್ನಾಟಕ ರಕ್ಷಣಾ ವೇದಿಕೆ”ಕರವೇ ನಲ್ನುಡಿ”ಪತ್ರಿಕೆ ವತಿಯಿಂದ “ಕಥಾ ರಚನಾ”ಪುರಸ್ಕಾರ.ಇನ್ನು ಅನೇಕ.
          ತೊಡಿಕಾನ ಅಬ್ದುಲ್ಲಾರದ್ದು ಪ್ರಶಸ್ತಿಯ ಹಿಂದೆ ಓಡುವ ಜಾಯಮಾನವಲ್ಲ.ಅರ್ಜಿಹಾಕಿ ವಶೀಕರಣ ಗೊಳಿಸಿ ದೊಡ್ಡ ಸಾಹಿತಿ ಎನ್ನುವ ಹಮ್ಮು ಇಲ್ಲ.ಆತ್ಮತೃಪ್ತಿಗೆ ಬರೆಯುವ ಇವರು ಅದೊಂದನ್ನು ಬಿಟ್ಟು ಗಳಿಸಿದ್ದು ಜನರ ಪ್ರೀತಿ ಮಾತ್ರ.
          ಆರ್ಥಿಕ ವಾಗಿ ತುಂಬಾ ಹಿಂದಿರುವ ಇವರು ೬೦ಸಂವತ್ಸರಗಳನ್ನು ಸವೆಸಿ ದ್ದರೂ ಇಂದು ಕೂಡ ಅಲ್ಪಕೃಷಿಯೊಂದಿಗೆ ಸಮಯಾವಕಾಶ ಸಿಕ್ಕಾಗಲೆಲ್ಲಾ ಕಲ್ಲಿನಕೊರೆಯಲ್ಲಿ, ತೆಂಗಿನಕಾಯಿ ಸುಲಿಯುವ ಕಾಯಕವನ್ನು ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ.ಕೂಡುಕುಟುಂಬದಲ್ಲಿ ತಮ್ಮಂದಿರೊಂದಿಗೆ ಸೌಹಾರ್ದ ಬಾಳುವೆ ನಡೆಸುತ್ತಾ, ಕಳೆದ ಇಪ್ಪತ್ಮೂರು ವರ್ಷಗಳಿಂದ ಮಾಣಿಲದಲ್ಲಿ ವಾಸಿಸುತ್ತಿದ್ದಾರೆ.ಇವರ ಇನ್ನಷ್ಟು ಉನ್ನತಿ ಗೆ ನಮ್ಮ ಹಾರೈಕೆ ಇರಲಿ.

Share this on:
error: Content is protected !!