ಶಾಲೆಯ ಫೀಸ್ ಕಡಿಮೆ ಮಾಡಿ ಪ್ಲೀಸ್…
ಅಂತ ಕೈ ಮುಗಿದು ಗೋಗರೆಯೊ ಬದಲು ಈ ವರ್ಷ ನಮ್ಮ ಮಕ್ಕಳನ್ನು ಸ್ವಾಭಿಮಾನದಿಂದ ಸರ್ಕಾರಿ ಶಾಲೆಗೆ ಸೇರಿಸ್ತಿವಿ ಅಂತ ತೀರ್ಮಾನ ಮಾಡಬಾರದೇಕೆ..?
ಸರ್ಕಾರಿ ಶಾಲೆಗಳೂ ಕೂಡ ಗುಣಮಟ್ಟದಲಿ ತೀರಾ ಹಿಂದುಳಿದಿಲ್ಲ. ಹಾಗೆ ನೋಡಿದ್ರೆ ಖಾಸಗಿ ಶಾಲೆಗಳಲ್ಲಿರೋ ಬಹುಪಾಲು ಹಿರಿಯ ಶಿಕ್ಷಕರೆಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದಿ ಬಂದವರೇ.. ಸರ್ಕಾರಿ ಶಾಲೆಗಳಲ್ಲಿ ಓದಿದವರೆಲ್ಲಾ ದಡ್ಡರಾಗ್ತಾರೆ, ಅಲ್ಲಿ ಟೀಚಿಂಗ್ ಸರಿ ಇಲ್ಲ, ಲ್ಯಾಬ್ ಇಲ್ಲ, ಸ್ಕೂಲ್ ಚೆನ್ನಾಗಿಲ್ಲ ಅಂತ ಸಾವಿರ ಸಾವಿರ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ ಬಿಟ್ಟಿದ್ದಾರೆ. ಫೀಸು ಅನ್ನೊ ಶೂಲಕ್ಕೆ ಮಧ್ಯಮವರ್ಗದ ಪೋಷಕರು ಕುತ್ತಿಗೆಯೊಡ್ಡಿದ್ದಾರೆ.
ಎಲ್ಲಿವರೆಗೂ ಪ್ರೈವೇಟ್ ಸ್ಕೂಲ್ಗಳಲ್ಲಿ ಹೆಚ್ಚಿನ ಫೀಸು ಕೊಟ್ಟು ನಮ್ಮ ಮಕ್ಕಳನ್ನು ಓದಿಸುವುದೇ ನಮ್ಮ ಪ್ರತಿಷ್ಟೆ ಅಂತ ಪೋಷಕರು ಅಂದ್ಕೋತಾರೊ ಅಲ್ಲಿವರೆಗೂ ಶಿಕ್ಷಣ ವ್ಯಾಪಾರವಾಗೆ ಇರುತ್ತೆ. ಇದರಿಂದ ಹೊರಬರೋಕೆ, ಒಂದು ಮನ್ವಂತರ ಘಟಿಸಬೇಕು.
ಅದಕ್ಕೀಗ ಸಕಾಲ. ಈ ವರ್ಷದಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸ್ತೀವಿ ಅನ್ನೋ ತೀರ್ಮಾನ ಮಾಡಿದ್ರೆ ಖಾಸಗಿ ಸಂಸ್ಥೆಗಳು ಉಳಿಯೋದೆಲ್ಲಿಂದ.
ಶಾಲೆಯಲ್ಲಿ ಮಕ್ಕಳೇ ಇಲ್ಲ ಅಂತ ಬಾಗಿಲು ಮುಚ್ತಿರೊ ಸರ್ಕಾರಿ ಶಾಲೆಗಳನ್ನು ಉಳಿಸೋಣ.. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸೋಣ. ನಾವೆಲ್ಲರೂ ಸೇರಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸೋಣ.
ಕಂಪ್ಯೂಟರ್ ಗೊತ್ತಿರುವವರು ಶಾಲೆಗಳಿಗೆ ಹೋಗಿ ಕಂಪ್ಯೂಟರ್ ಹೇಳಿಕೊಡೋಣ, ಇಂಗ್ಲೀಷ್ ಗೊತ್ತಿರೋರು ಇಂಗ್ಲೀಷ್ ಹೇಳಿ ಕೊಡೋಣ,
ನಾಟಕ ಬಲ್ಲವರು, ಸಾಹಿತ್ಯ ಅರಿತವರು ಕಲಿಸಿ ಬರೋಣ.. ದುಡ್ಡಿದ್ದವರು ಶಾಲೆಗೊಂದು ಬೆಂಚು ಕೊಡಿಸೋಣ.. ಸಮಯವಿದ್ದವರು ಮಕ್ಕಳಿಗೊಂದು ಹಾಡು ಕಲಿಸಿ ಬರೋಣ.. ಯಾಕಂದ್ರೆ
ಇದು ನಮ್ಮಸ್ಕೂಲು.. ಬನ್ನಿ ನಮ್ಮ ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚೋಣ
-ಕೆ.ಎಚ್.ಇಕ್ಬಾಲ್ ಕಿತ್ತಲೆಗಂಡಿ