Latest Posts

ಐಪಿಎಲ್ ಎಂಬ ಆಟದ ಹಿಂದಿರುವ ಜೂಜಾಟ!!!

ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ  ಕ್ರಿಕೆಟ್ಆಟಕ್ಕೆ ಹೊಸ ಮೆರುಗು ತಂದು ಕೊಟ್ಟದ್ದೇ ಇಂಡಿಯನ್ ಪ್ರೀಮಿಯಂ ಲೀಗ್(IPL).
ಸರಳವಾಗಿ ಹೇಳಬೇಕಾದ್ರೆ, ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ  ಖರೀದಿಸಿ, ಇಂತಿಷ್ಟೇ ವರುಷಗಳ ಕರಾರಿನೊಂದಿಗೆ 20 ಓವರ್ ಗಳ  ಕ್ರಿಕೆಟ್ ಎಂಬ ಅಖಾಡದಲ್ಲಿ ಕಾದಾಟ ನಡೆಸಿ ,ಲಾಭ ನಷ್ಟಗಳ ಲೆಕ್ಕಾಚಾರ ನಡೆಸುವ, ಒಂದು ದೊಡ್ಡ ಬ್ಯುಸಿನೆಸ್.
ಸರಕಾರ , ಅಥವಾ ತಮಗಿಷ್ಟವಾದ ದೊಡ್ಡ ದೊಡ್ಡ ರಾಜಕಾರಣಿಗಳನ್ನು ಹಣದ ಗಂಟಿನ ಮೂಲಕವೇ ತೃಪ್ತಿಪಡಿಸುವ ದೊಡ್ಡ ದೊಡ್ಡ ಉದ್ಯಮಿಗಳೇ, ಈ IPL ನ ಮಾಲಕರು ಎಂದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರವೇ.
IPL ಕೇವಲ ಮನೋರಂಜನೆಗಾಗಿ ಮಾತ್ರ ಎಂದು ಭಾವಿಸಿದರೆ, ನಮ್ಮಷ್ಟು ದೊಡ್ಡ ಮೂರ್ಖರು ಈ ಪ್ರಪಂಚದಲ್ಲಿ ಇರಲಿಕ್ಕಿಲ್ಲ.
ಇದೇ IPL ಹಿಂದೆ ಕೋಟ್ಯಾನುಕೋಟಿ ವ್ಯವಹಾರ ಇದೆ, ಬೆಟ್ಟಿಂಗ್ ನ ದೊಡ್ಡ ದಂಧೆಯೇ ಇದೆ.
ಬೆಟ್ಟಿಂಗ್ ಗೆಂದೆ, ಅಧಿಕೃತ ಜೂಜಾಟ ಆಡಲು ತಯಾರಾಗುವ ಸೈಟ್ ಗಳಿಗೆ ವಿದ್ಯಾವಂತರು ಬಲಿಯಾದ್ರೆ, ಬಾಯಿ ಮಾತಿನಲ್ಲೋ, ಬುಕ್ಕಿಗಳ ಮುಖಾಂತರವೋ ಐಪಿಲ್ ಎಂಬ ಆಟದ ಹಿಂದಿರುವ ಮೊಸದಾಟಕ್ಕೆ ಅವಿದ್ಯಾವಂತರೂ, ಕೂಡ ಬಲಿಯಾಗುತ್ತಿದ್ದಾರೆ.


ಹಳ್ಳಿಯಿಂದ ದಿಲ್ಲಿಯವರೆಗೆ ಹಬ್ಬಿದ IPL ಹುಚ್ಚಿನಲ್ಲಿ, ಪಡೆದುಕೊಂಡವರಿಗಿಂತ ಕಳೆದುಕೊಂಡವರೆ ಹೆಚ್ಚು.
ಒಬ್ಬ RCB ಅಭಿಮಾನಿ ಆದ್ರೆ, ಮತ್ತೊಬ್ಬ CSK ಅಭಿಮಾನಿ, ಮುಂಬಯಿ ಇಂಡಿಯನ್ ಅಭಿಮಾನಿ, ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಪ್ರತಿಯೊಂದು ಬಾಲ್ ನ ಮೇಲೆ ಕೂಡ ಬೆಟ್ಟಿಂಗ್ ವ್ಯವಹಾರ ನಡೆಯುತ್ತೆ, ಒಂದೊಂದು ಸಿಕ್ಸರ್ ಬೌಂಡರಿಗೂ , ಲಕ್ಷಗಟ್ಟಲೆ ಜೂಜು ಕಟ್ಟುತ್ತಾರೆ, 10 ರೂಪಾಯಿಂದ ಕೋಟಿ ರೂಪಾಯಿ ತನಕ ನಡೆಯುವ ದಂಧೆಯಲ್ಲಿ, ದೇಶದ ಯಾವುದೋ ಮೂಲೆಯಲ್ಲಿ ಕುಳಿತು, ಆಟದೊಳಗೆ ಆಟವಾಡಿಸಿ, ಕೋಟಿಕೋಟಿ ಬಾಚಿಕೊಳ್ಳುವ  ಕಣ್ಣಿಗೆ ಕಾಣದ  ಲೂಟಿಕೋರರು ಜನರ ಮೂರ್ಖತನವನ್ನು ನೆನೆದು ನಗುತ್ತಿರುತ್ತಾರೆ.


ಒಂದು ಕಡೆ ತಾನು ಬಹುದೊಡ್ಡ ಮಟ್ಟಕ್ಕೆ ಹರಾಜಾಗಿದ್ದೇನೆ, ಉತ್ತಮವಾಗಿ ಆಟವಾಡಬೇಕು ಎಂಬ ಒತ್ತಡದಲ್ಲಿ ಆಟಗಾರ ಆಡುತ್ತಾ ಇರಬೇಕಾದ್ರೆ, ಇನ್ನೊಂದೆಡೆ, ಅದರ ಮಾಲಕರು, ನಮ್ಮ ಆಟಗಾರರು ಆಡದೆ ಕೈಕೊಟ್ರೆ ಏನು ಮಾಡೋದು ಅನ್ನೋ ಚಿಂತೆಯಲ್ಲಿ ಇರುತ್ತಾರೆ. ಯಾವುದೋ ತಂಡವನ್ನು ನಂಬಿ ಬೆಟ್ ಕಟ್ಟಿದ್ದ ಜನಸಾಮಾನ್ಯ  ಕೂಡ ಆತಂಕದಿಂದ  ಇರುತ್ತಾನೆ.
ಇದರ ಮಧ್ಯೆ , ಬುಕ್ಕಿಗಳು ಮಾತ್ರ ನಿರಾಳವಾಗಿರುತ್ತಾರೆ, ಯಾರು ಸೋತರೂ ಯಾರು ಗೆದ್ದರೂ ಇವರ ಸಂಪಾದನೆಗೆ ಯಾವುದೇ ಹೊಡೆತ ಕೂಡ ಬೀಳೋದಿಲ್ಲ.
IPL ಎಷ್ಟು ಮನೋರಂಜನೆ ಕೊಡುತ್ತೋ, ಅದರ ಮೂರುಪಾಲು ಮನೋವೇದನೆ ಕೊಟ್ಟಿರೋದು ಮಾತ್ರ ಸತ್ಯ.


ಕೇವಲ ಮನೋರಂಜನೆಗೆ IPL ನೋಡುವವರಿಗಿಂತ ಅಧಿಕ ಜನ, ತಾನು ಕಟ್ಟಿದ ಹಣಕ್ಕೋಸ್ಕರ ನೋಡುತ್ತಾರೆ.
ಹಣ ಕಳೆದುಕೊಂಡವ, ಆತ್ಮಹತ್ಯೆಯ ದಾರಿ ಹಿಡಿದ ಉದಾಹರಣೆ ನಾವು ನೋಡಿರಬಹುದು, ಅಥವಾ ಕೇಳಿ ತಿಳಿದುಕೊಂಡಿರಲೂಬಹುದು.
ಇಂದಿನ ಯುವಜನತೆ ಕ್ರಿಕೆಟ್ ಮೇಲೆ ಆಸಕ್ತಿ ಕಳೆದುಕೊಂಡಿದ್ದರೂ, IPL ವ್ಯಾಮೋಹ ಮಾತ್ರ ಬಿಟ್ಟಿಲ್ಲ, ಒಂದೊಂದು ತಂಡಕ್ಕೂ ಅಭಿಮಾನಿ ಬಳಗ ಇದೆ. ಅವರವರ ಮಧ್ಯೆ ಮುಸುಕಿನ ಗುದ್ದಾಟ  ಕೂಡ ನಡೆಯುತ್ತಾ ಇರುತ್ತೆ.
ಆದರೆ ಯಾವಾಗ IPL ಎಂಬ ಆಟ, ಜೂಜಾಟದ  ರೂಪ ಪಡೆಯಿತೋ, ಅಲ್ಲಿಂದ  ಶುರುವಾಯಿತು IPL ಎಂಬ ಮೋಹದ ಮಾಯಾಜಾಲ.
ಎಲ್ಲೋ ಸಿಂಗಲ್ ನಂಬರ್, ಮಟ್ಕಾ, ಹೀಗೆ ಜೂಜಾಟದ ನಾನಾ ವಿಭಾಗದಲ್ಲಿ ಹಣ ಕಳೆದುಕೊಳ್ಳುತ್ತಿದ್ದವ, IPL ಗೆ ಅದರ ದುಪ್ಪಟ್ಟು ಹಣ ಹಾಕಿ ಕಳೆದುಕೊಳ್ಳತೊಡಗಿದ.
ಮನೆಮಠ ಮಾರಿ, ಸಿಕ್ಕಿದ್ದೆಲ್ಲಾ ಅಡವಿಟ್ಟು ಆತ್ಮಹತ್ಯೆಗೆ ಶರಣಾಗಿ, ತಾನು ಸತ್ತರೂ, ಮನೆಯವರನ್ನು ಸಾಲದಲ್ಲಿ ಮುಳುಗಿಸಿ, ಕುಟುಂಬದ ನೆಮ್ಮದಿಯನ್ನು  ಹಾಳುಮಾಡಿದ ಅದೆಷ್ಟೇ ಜನರು ನಮ್ಮ ನಿಮ್ಮ ಮಧ್ಯದಲ್ಲಿ ಇರಬಹುದು.


ಹೇಳಿಕೇಳಿ ತುಂಬಾ ಶ್ರೀಮಂತ ಕ್ರೀಡೆ IPL. ಕೊರೊನಾ ಎಂಬ ಮಹಾಮಾರಿಯ ಮದ್ಯೆ ಕೂಡ ವಿದೇಶದಲ್ಲಿ ಇದೀಗ ನಡೆಯುತ್ತಿದೆ.
ಕೋಟಿಕೋಟಿ ಹಣ  ನೀರಿನಂತೆ ಖರ್ಚಾಗುತ್ತಿದೆ.
ಅಭಿಮಾನಿಗಳ ಹುಚ್ಚು ಅಭಿಮಾನ ಮಿತಿಮೀರುತ್ತಿದೆ, ಬುಕ್ಕಿಗಳು ಹಣ ಮಾಡೋದಕ್ಕೆ ಬಕಪಕ್ಷಿಯಂತೆ ಕಾಯುತ್ತಾ ಇದ್ದಾರೆ.
ಈ ಸೀಸನ್ ನಲ್ಲಿ ಅದೆಷ್ಟು ಮಂದಿ ಮನೆಕಳೆದುಕೊಂಡು ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ ಎಂದು ನೋಡಬೇಕಷ್ಟೆ.
ಕ್ರಿಕೆಟ್ ಬಗ್ಗೆ ಅಭಿಮಾನವಿರಲಿ, ಆದರೆ ಅತಿಯಾಗೋದು ಬೇಡ, ಅದರ ಹೆಸರಲ್ಲಿ, ಹಣ ಹೂಡಿಕೆ ಮಾಡೋ ದುಸ್ಸಾಹಸವಂತೂ ಖಂಡಿತಾ ಬೇಡ.
ಇಲ್ಲಿ ಯಾರು ಗೆದ್ದರೂ ಸೋತರೂ, ದೇಶಕ್ಕೆ ಯಾವುದೇ ಉಪಯೋಗ ಇಲ್ಲ ಎಂಬುವುದನ್ನು ಅರಿಯೋಣ.

✍️ ಅಮೀರ್ ಬೆಳಪು

Share this on:
error: Content is protected !!