Latest Posts

ಪಟ್ಟಣದೆಡೆಗಿನ ದಾರಿ ಮಧ್ಯೆ…!

ಸಣ್ಣದೊಂದು ಗ್ರಾಮದಲ್ಲಿ ಹುಟ್ಟಿಬೆಳೆದವರಿಗೆ ಪಟ್ಟಣದ ಮೇಲಿನ ಕನಸು ಸಹಜವಾಗಿಯೇ ಇರುತ್ತದೆ. ಗಗನಚುಂಬಿ ಕಟ್ಟಡಗಳು, ರಸ್ತೆಪೂರಾ ವಾಹನಗಳ ಸಾಲು, ವಿಧವಿಧದ ಮಳಿಗೆಗಳು, ಟಾರು ಹೊದಿಸಿದ ವಿಶಾಲ ರಸ್ತೆ, ಸುತ್ತಲುಇ ಜನಜಂಗುಳಿ.. ಹೀಗೆ ಹಳ್ಳಿ ಹುಡುಗ ಸಸಿ ಮರಗಳು ಮತ್ತು ಪ್ರಾಣಿ ಪಕ್ಷಿಗಳೊಂದಿಗಿನ ಬದುಕಿನಿಂದ ಪಟ್ಟಣದ ಕಡೆಗಿರುವ ದಾರಿ ನೋಡುತ್ತಾ ಮನದೊಳಗೇ ಕಾಲ್ಪನಿಕ ನಗರವನ್ನು ಕಟ್ಟಿರುತ್ತಾನೆ. ಸಂಜೆಯಾಗುತ್ತಲೇ  ಸುತ್ತಲೂ ಕತ್ತಲು ತುಂಬಿದ ಹಳ್ಳಿಯ ಕವಲುದಾರಿಗಿಂತ ಬಣ್ಣ ಬಣ್ಣದ ಲೈಟುಗಳಿಂದ ಮಿನುಗಿ ಕಂಗೊಳಿಸುವ ಹೆದ್ದಾರಿಯನ್ನೇ ಮೆಚ್ಚಿಕೊಳ್ಳುತ್ತೇವೆ. ಹೀಗೇ ಹಳ್ಳಿ ಮತ್ತು ಪಟ್ಟಣದ ನಡುವಿನ ದೂರವೇ ಬದುಕು.

ಆಸೆಯಿಲ್ಲದೆ ಬದುಕಿ ಸಿದ್ಧಾರ್ಥ ಬುದ್ಧನಾದಂತೆ ಇಲ್ಲಿ ಎಲ್ಲರೂ ಆಸೆಯನ್ನು ತ್ಯಜಿಸಿಲ್ಲ. ಬುದ್ಧನ ಹಾದಿಗೆ ಕೆಲವೇ ಕೆಲವು ಮಂದಿ ಸಾಗಿದರಲ್ಲದೇ ಉಳಿದವರೆಲ್ಲರೂ ಆಸೆಯ ಮಡುವಿನಲ್ಲಿ ತೇಲಾಡುತ್ತಿದ್ದಾರೆ. ಸಾವಿನ ಕ್ಷಣ ಮೊದಲೂ ಬದುಕನ್ನೇ ಬಯಸುವ ನಮ್ಮ ಆಸೆಯ ಅಗಾಧ ಪ್ರಮಾಣ ಬದುಕಿನುದ್ದಕ್ಕೂ ಮುಂದುವರಿದಿರುತ್ತದೆ. ಹಳ್ಳಿಯವನು ಪಟ್ಟಣದ ಕನಸು ಕಾಣುವಂತೆ, ಪಟ್ಟಣದಲ್ಲೇ ಹುಟ್ಟಿಬೆಳೆದವ ಹಳ್ಳಿಯ ಮೇಲೆ ಪುಳಕಿತನಾಗುವುದೂ ಉಂಟು. ಅಂದರೆ ಮನುಷ್ಯ ತನ್ನಲ್ಲಿಲ್ಲದ್ದನ್ನೇ ಪಡೆಯುವ ಆಕಾಂಕ್ಷೆಯಲ್ಲಿರುತ್ತಾನೆಂದರ್ಥ.

ಹಳ್ಳಿಹುಡುಗನೊಬ್ಬ ಬಾಲ್ಯದಲ್ಲಿ ಮನಸ್ಸಿನೊಳಗೇ ಕಟ್ಟಿಕೊಂಡ ನಗರದರಮನೆಯನ್ನು ಮುಂದಕ್ಕೆ ಕಣ್ತುಂಬಿಕೊಳ್ಳುವಲ್ಲಿ ಸಫಲನಾದಲ್ಲಿ, ಬದುಕಿನ ಸಾಕಾರತೆಗೆ ಒಂದು ಹೆಜ್ಜೆ ಮುಂದೆಯಿಟ್ಟಂತೆ ಖುಷಿಯಾಗುತ್ತಾನೆ. ಇಲ್ಲಿ ಬರೀ ಹಳ್ಳಿ ಮತ್ತು ಪಟ್ಟಣದ ನಡುವಿನ ವಿಚಾರಗಳಲ್ಲ. ಇವೆರಡರ ಮಧ್ಯೆ ವಿಶಾಲವಾದ ಜಗತ್ತಿದೆ. ನಮ್ಮ ಜೀವನದ ಪ್ರತಿಯೊಂದು ಸನ್ನಿವೇಶಗಳನ್ನು ಅವಲೋಕಿಸಲು, ಯಶಸ್ಸಿನ ದಾರಿಗೆ ಕೊಡೆ ಹಿಡಿಯಲು ಹಲವಾರು ಅವಕಾಶಗಳು ಕೈಬೀಸಿ ಕರೆಯುತ್ತಿರುತ್ತದೆ. ಸವಾಲು, ಸಂಕಟ, ಸಂಕಷ್ಟ ಎಲ್ಲವನ್ನೂ ದಾಟಿ ನಗರ ತಲುಪಿದರಷ್ಟೇ ಸಂತೋಷದ ಹಬ್ಬ. ಬದುಕಿನ ನೂರು ಪುಟಗಳಲ್ಲಿ ಬಹುವಾಗಿ ದುಃಖದ ಕಣ್ಣೀರೇ ಇದ್ದರೂ ಕೂಡ ಬೆರಳೆಣಿಕೆಯ ನಗುವಿನ ಪುಟವನ್ನೇ ಮತ್ತೆ ಮತ್ತೆ ಓದಿಕೊಳ್ಳಬೇಕು. ನಗು ಬಹುಪಾಲು ನೋವುಗಳನ್ನು ತೊಡೆದುಹಾಕುತ್ತದೆಮಯಂತೆ.

ಹಳ್ಳಿಯಲ್ಲಿ ಉಗಮಿಸಿ ಪಟ್ಟಣದ ಕಡೆಗೆ ಮುಖ ಮಾಡಿದ ಯಶಸ್ಸಿನ ಅಲೆಗಳು ತಾನಾಗಿಯೇ ದಾರಿ ನಿರ್ಮಿಸಿ ಸಾಗಬೇಕೇ ಹೊರತು ದಾರಿ ಹುಡುಕಿ ಹುಡುಕಿ ಹೋಗುವುದಲ್ಲ. ತಾನು ಹೋದದ್ದೇ ದಾರಿ ಎನ್ನುವ ಆತ್ಮವಿಶ್ವಾಸದ ನಡಿಗೆಗಳು ನಿರಾಯಾಸವಾಗಿ ಗುರಿಯ ಗಡಿಯನ್ನು ದಾಟುವಂತಾಗಿಸಬಲ್ಲದು. ದಾರಿ ಮಧ್ಯೆಯ ಏಳುಬೀಳುಗಳು, ಎಡವಟ್ಟುಗಳು, ಅಘಾತಗಳು ಎಲ್ಲವನ್ನೂ ನೆನಪಿನ ಪುಸ್ತಕದಲ್ಲಿ ಬರೆದಿಟ್ಟು ಮುಂದೆ ಸಾಗಿದವನು ಎವರಸ್ಟನ್ನೂ ಹತ್ತಿದ್ದಾನೆ. ಮೊದಲ ಸೋಲಿಗೇ ಕೊರಗಿ ಕುಳಿತವನಿನ್ನೂ ಅಡುಗೆ ಕೋಣೆಯಲ್ಲಿ ಸಕ್ಕರೆ ಡಬ್ಬ ತೆರೆದು ನೋಡುವುದರಲ್ಲೇ ನಿಸ್ಸೀಮನಾಗಿದ್ದಾನೆ. ವಾಸ್ತವದಲ್ಲಿ ಛಲ ಇದ್ದವನಿಗಷ್ಟೇ ಬದುಕು.

-ಹಕೀಂ ಪದಡ್ಕ

Share this on:
error: Content is protected !!