Latest Posts

ನೀತಿ ನ್ಯಾಯ ವ್ಯವಸ್ಥೆ ಕೊಲ್ಲಲ್ಪಟ್ಟಿತೇ…!!?

ಸಂವಿಧಾನವನ್ನು ಮಲಿನೀಕರಿಸಿದ ಸರ್ಕಾರದ ವಿರುದ್ಧ ಒಂದು ಮಾತನ್ನಾಡಲಾದರೂ ಅವರಿಗೆ ಸಾಧ್ಯವಾಯಿತೇ?

ಭಾರತಾಂಬೆಯ ಮಡಿಲಲ್ಲಿ  ಜೀವಿಸುವ ಪ್ರತಿಯೊಬ್ಬನ ಹೃದಯಾಂತರಾಳಕ್ಕೆ ಚಾಕುವಿನಿಂದ ತಿವಿಯುವ ಪ್ರವರ್ತಿ ಮಗದೊಮ್ಮೆ ಆವರ್ತಿಸಿದೆ. ಲೋಕವೇ ಬೆರಗಾಗಿ ನೋಡುವಂತಹ ತೀರ್ಪು ಆ ತಾಯಿಯನ್ನು ಕೊಲ್ಲುವ ಹಾಗಿದೆ. ನೀತಿಯ ಚಿತ್ರಭಾನು ದಿಗಂತದಂಚಿನಲ್ಲಿ ಕಪ್ಪು ಕಿರಣವನ್ನು ಚಾಚಿ ಇನ್ನೆಂದೂ ಬಾರೆನೆಂಬ ರೀತಿಯಲ್ಲಿ ಅಸ್ತಮಿಸಿದೆ. ಸಂವಿಧಾನವೆಂಬ ವಿಶಾಲವಾದ ಸಾಗರವು ಚಲನವಿಲ್ಲದೆ ನಿಂತು ಹೋಗಿದೆ. ನೀತಿ ನ್ಯಾಯ ವ್ಯವಸ್ಥೆಯು ಕೊಲ್ಲಲ್ಪಟ್ಟಿದೆ. ಧಾರ್ಮಿಕ ಅಸಹಿಷ್ಣುತೆಯ ರಾಕ್ಷಸೀಯ  ನರ್ತನವು ತಾಂಡವವಾಡುತ್ತಿದೆ. ಹೆಣ್ಣುಮಕ್ಕಳ ಸುರಕ್ಷತೆಯು ಬೇಟೆಗಾರರಿಗೆ ಎರೆಯಾಗಿದೆ. ಇದನ್ನೆಲ್ಲಾ ವರದಿ ಮಾಡಬೇಕಾದ ಮಾಧ್ಯಮಗಳು ಹೇಡಿತನದಿಂದ ಮಾಡಿದ ಆತ್ಮಹತ್ಯೆಯ ಸೂತಕದ ಛಾಯೆಯು ವ್ಯಾಪಕವಾಗಿದೆ.

ಹೌದು.. ಇದು ವಿವಿಧತೆಯಲ್ಲಿ ಏಕತೆ ಎಂಬ ಉತ್ಕೃಷ್ಟ ಪದವಿಯನ್ನು ಹೊಂದಿದ ಭವ್ಯ ಭಾರತದ ದಾರುಣ ಕಥೆ.! ಮೊನ್ನೆ ತಾನೆ ಹೊರಬಂದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ನೀತಿ ಮಾತೆಯ ನಿಸ್ಸಹಾಯಕತೆಯನ್ನು ತೋರಿಸುತ್ತಿದೆ. ಶತಮಾನಗಳ ಇತಿಹಾಸವಿರುವ ಪವಿತ್ರ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದನ್ನು ಸುಪ್ರೀಂಕೋರ್ಟ್ ಅಪರಾಧ ವೆಂದು ಹೇಳಿದ್ದರೂ, ಅಪರಾಧಿಗಳಾಗಿ ಒಬ್ಬರೂ ಇಲ್ಲದಿರುವುದು ವಿಪರ್ಯಾಸವಲ್ಲದೆ ಮತ್ತಿನ್ನೇನು? ಲಿಬರ್ಹಾನ್ ಆಯೋಗವು ಮಸೀದಿ ಧ್ವಂಸದ ಹಿಂದೆ ಪಿತೂರಿಯಿದೆ ಎಂದು ವರದಿ ಸಲ್ಲಿಸಿದ್ದರೂ ಸಿಬಿಐ ನ್ಯಾಯಾಲಯದ ನೀತಿ ದೇವತೆಯ  ಕಣ್ಣುಗಳಿಗೆ ಕಟ್ಟಿದ ವಸ್ತ್ರವು ನ್ಯಾಯವನ್ನೇ ದರ್ಶಿಸಿದ ಹಾಗೆ ಮಾಡಿದೆ. ಅಡ್ವಾಣಿಯವರು ಅಂದು ಮಾಡಿದ ರಥಯಾತ್ರೆ, ವಿಹಾರ ಯಾತ್ರೆಯಾಗಿರಬಹುದು. ಅಂದು ಮಾಡಿದ ಪ್ರಸಂಗಗಳು ಕೇವಲ ವಿನೋದ  ಪ್ರಸಂಗಗಳಾಗಿರಬಹುದು.  ಇದನ್ನೆಲ್ಲಾ ಚಿಂತಿಸದೆ ಇರಲು ನ್ಯಾಯಾಧೀಶರ ಚಿಂತಾಮಂಡಲಗಳಿಗೆ ಬಲವಾದ ಏಟು ಬಿದ್ದಿರಬಹುದು. ಕಾಣದ ಕರಗಳ ಸೇವೆಯನ್ನೂ ಸವಿದಿರಬಹುದು.

ವಿವಾದಿತ ಸ್ಥಳದಲ್ಲಿ ಬಾಬರಿ ಮಸೀದಿ ಇತ್ತು ಎಂಬುದಕ್ಕೆ ಸ್ಪಷ್ಟವಾದ ಪುರಳೆಗಳೂ, ಚಿತ್ರಗಳೂ,ಅದನ್ನು ಧ್ವಂಸಗೊಳಿಸುವ ದೃಶ್ಯಗಳೂ ಇರುವಾಗ, ಅಲ್ಲಿ ಮಂದಿರವಿತ್ತು ಮಾತ್ರವಲ್ಲ ಅದು ಮತ್ತೊಬ್ಬರ ಜನ್ಮ ಸ್ಥಳ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಅದನ್ನು ಮಂದಿರಕ್ಕಾಗಿ ಕೊಡಬೇಕೆಂದು ಅನ್ಯಾಯವಾದ ತೀರ್ಪು ನೀಡಿದ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ನ್ಯಾಯಾಲವೆನ್ನಬೇಕೇ? ಅನ್ಯಾಯಾಲಯವೆನ್ನಬೇಕೇ? ಈ ತೀರ್ಪಿನ ಹಿಂದೆಯೂ ಪಿತೂರಿ ಇತ್ತೇ ಎಂಬ ಪ್ರಶ್ನೆ ಈಗಲೂ ಉಳಿದಿದೆ. ತಮ್ಮ ಕಣ್ಣ ಮುಂದೆ ತಮ್ಮ ಆರಾಧನಾಲಯದ ಎದೆಯನ್ನು ಸೀಳಿ ಅದನ್ನು ಛಿದ್ರ ಮಾಡಿದಾಗಲೂ, ಮಾತ್ರವಲ್ಲ ಆ ಸ್ಥಳವನ್ನು ಛಿದ್ರ ಮಾಡಿದ ಅಕ್ರಮಿಗಳಿಗೇ ಕೊಡಬೇಕೆಂದು ನ್ಯಾಯಾಲಯವು ಹೇಳಿದಾಗಲೂ, ಛಿದ್ರ ಮಾಡಿರುವುದು ಅಪರಾಧವಾಗಿದ್ದರೂ  ಅದನ್ನು ಮಾಡಿದವನು ಅಪರಾಧಿಯಲ್ಲವೆಂದು  ನ್ಯಾಯಾಲಯವು ಅನ್ಯಾಯವಾದ ತೀರ್ಪು ಕೊಟ್ಟಾಗಲೂ, ಎದೆಯಲ್ಲಿ ಉಕ್ಕಿಬರುವ ರೋಷ, ಕುದಿಯುತ್ತಿರುವ ರಕ್ತವನ್ನು ಆತ್ಮ ಸಂಯಮನ ವೆಂಬ ಸಮಾಧಾನದ, ಸಹಿಷ್ಣುತೆಯ ಮಾರ್ಗವನ್ನು ಸ್ವೀಕರಿಸಿದ ಭಾರತದ  ಅಲ್ಪಸಂಖ್ಯಾತರಾದ ಮುಸ್ಲಿಮರಲ್ಲವೇ ನಿಜವಾದ ಪ್ರಜೆಗಳು? ಅಂತಹ ಅಪ್ಪಟ ದೇಶಪ್ರೇಮಿಗಳಾದ ಮುಸ್ಲಿಮರನ್ನು ದೇಶದಿಂದ ಹೊರದೂಡಲು ಹೊಂಚು ಹಾಕುತ್ತಿರುವ ನರಿಗಳು ಮತ್ತೊಂದು ಕಡೆಯಿದ್ದಾರೆ.! ಬುದ್ಧಿಯನ್ನು ಫ್ಯಾಸಿಸ್ಟ್ ವರ್ಗದ ಕಚೇರಿ ಗಳಲ್ಲಿ ಅಡವಿಟ್ವರಿಗಲ್ಲದೆ ಯಾರಿಗಾದರೂ ಇಂತಹ ಕೃತ್ಯವೆಸಗಲು ಸಾಧ್ಯವೇ?

ಇದೆಲ್ಲಕ್ಕಿಂತಲೂ ಅದ್ಭುತ ವಾಗಿರುವ ಸಂಗತಿ ಏನೆಂದರೆ ಮೈಯನ್ನು ಮಾರಿಕೊಂಡ ಮಾಧ್ಯಮಗಳು.! ಸತ್ಯವನ್ನು ಅಸತ್ಯ ಮಾಡಿ ಅದನ್ನು ಬಿತ್ತರಿಸುವ ಅವರ  ಕಾರ್ಯ ವೈಖರಿಯನ್ನು ಪ್ರಶಂಸಿಸಲೇಬೇಕು. ನ್ಯಾಯದ ಪರವೆಂದು ತಮ್ಮನ್ನೇ ತಾವೇ ಕರೆದುಕೊಳ್ಳುವುದರಲ್ಲಿಯೇ ಅವರು ಆತ್ಮ ಸಂತೃಪ್ತಿಯನ್ನು  ಪಡೆದುಕೊಳ್ಳುವುದನ್ನು ವರ್ಣಿಸಲಸಾಧ್ಯ.
ಸಂವಿಧಾನವನ್ನು ಮಲಿನೀಕರಿಸಿದ ಸರ್ಕಾರದ ವಿರುದ್ಧ ಒಂದು ಮಾತನ್ನಾಡಲಾದರೂ ಅವರಿಗೆ ಸಾಧ್ಯವಾಯಿತೇ?

ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಂಬ ರಾಷ್ಟ್ರಕವಿಯ ಮಾತುಗಳನ್ನು ಸುಳ್ಳುಮಾಡುವ ಲಜ್ಜೆಗೆಟ್ಟ ಫ್ಯಾಸಿಸ್ಟ್ ವರ್ಗದ ಕುತಂತ್ರ ಬುದ್ಧಿಗಳಿಗೆ ಇನ್ನು ಯಾವಾಗ ಸತ್ಯದ ಹಾದಿ ಕಾಣುವುದು? ಅದು ಅಸಾಧ್ಯ.! ಸತ್ಯದ ದಾರಿ ತೋರಿಸುವ ಒಬ್ಬನಾದರೂ ಜೀವಂತ ವಿರ ಬೇಡವೇ? ದಾರಿ ತೋರಿಸಬೇಕಿದ್ದ ಅವರ ದೈವವನ್ನೇ ಅಧರ್ಮದಲ್ಲಿ ಸ್ಥಾಪಿಸಿ ಅವನನ್ನೇ ನಿಸ್ಸಹಾಯಕನನ್ನಾಗಿ ಮಾಡಿದವರಿಗೆ ಸತ್ಯಪಥ ತೋರಿಸುವವರಾರು?

    ಈ ಅಜ್ಞಾನಿಗಳು ಎಸಗಿದ ನೀಚ ಕೃತ್ಯದ ಫಲ ಭಾರತದ ಮುಂದಿನ ಜನಾಂಗದ ಮಕ್ಕಳು ಅನುಭವಿಸುವರು ಎಂಬುದನ್ನು ನಾವೆಲ್ಲರೂ ಚಿಂತಿಸಬೇಕು. ಭವಿಷ್ಯದ ಮಕ್ಕಳು ಪರಸ್ಪರ  ಹಗೆತನ ಸಾಧಿಸಿ ಸರ್ವನಾಶವಾಗುವುದನ್ನು ಭಾರತ ಮಾತೆಯು ಕಾಣದಿರಲಿ.

ನ್ಯಾಯಾಲಯದ  ಅನ್ಯಾಯವಾದ ತೀರ್ಪಿನಲ್ಲಿ ತೃಪ್ತಿಇಲ್ಲದಿದ್ದರೂ ಸರ್ವಶಕ್ತನ ನ್ಯಾಯದ  ತೀರ್ಪು ಒಂದು ದಿನ ಬರಲಿದೆ ಎಂಬ ಪ್ರತೀಕ್ಷೆಯೊಂದಿಗೆ..

ಮುಹಮ್ಮದ್  ರಫೀಕ್ ಬಾಖವಿ ಮೂಡಬಿದ್ರೆ (ಪ್ರೊಫೆಸರ್,  ಪಯ್ಯಕ್ಕಿ ಉಸ್ತಾದ್  ಇಸ್ಲಾಮಿಕ್ ಅಕಾಡೆಮಿ)

Share this on:
error: Content is protected !!