Latest Posts

ಮೊದಲ ಸ್ವಾತಂತ್ರ್ಯ ಸಂಗ್ರಾಮ ಮತ್ತು ಮುಸ್ಲಿಂ ಹೋರಾಟಗಾರರು

ಫೈಝಾಬಾದ್‌ನ ಕೆಲವು ಸವರ್ಣೀಯರು ಸೇರಿ ಸೂಫೀ ವಿಧ್ವಾಂಸರೂ, ಸೇನಾನಿಯೂ ಆಗಿದ್ದ ಮೌಲವಿ ಅಮೀರ್ ಅಲಿಯವರನ್ನು ವಧಿಸಿದ್ದರು. ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯವಾಗಿತ್ತು. ಆಗಲೇ ದೇಶಾದ್ಯಂತ ಮುಸ್ಲಿಮ್ ಅರಸೊತ್ತಿಗೆಗಳು ಮತ್ತು ಹೋರಾಟಗಾರರು ಬ್ರಿಟಿಷರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಅಸಂಖ್ಯ ವಿಧ್ವಾಂಸರು, ಸೂಫೀಗಳು, ಧಾರ್ಮಿಕ ನಾಯಕರು ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಆ ಪೈಕಿ ಸೂಫೀವರ್ಯರಾಗಿದ್ದ ಅಹ್ಮದುಲ್ಲಾ ಷಾ ಫೈಝಾಬಾದಿಯೂ ಒಬ್ಬರಾಗಿದ್ದರು. ಅಮೀರ್ ಅಲಿಯವರ ಕೊಲೆಯ ವಿಷಯ ತಿಳಿದ ಮೌಲವಿ ಷಾ ಮತ್ತು ಶಿಷ್ಯಂದಿರು ಫೈಝಾಬಾದ್‌ಗೆ ಧಾವಿಸಿ ಕೊಲೆಗಡುಕರ ವಿರುದ್ದ ಸಮರ ಸಂಘಟಿಸಿದರು. ಅಷ್ಟರಲ್ಲಿ ಅಲ್ಲಿನ ಜಿಲ್ಲಾ ಮೆಜಿಸ್ಟ್ರೇಟರ್ ಹಂತಕರಾದ ಸವರ್ಣೀಯರ ನೆರವಿಗೆ ಬಂತು. ಪೋಲೀಸರು ಬಲಪ್ರಯೋಗಿಸಿ ಮೌಲವಿ ಮತ್ತು ಶಿಷ್ಯಂದಿರನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಘರ್ಷಣೆಯಲ್ಲಿ ಅವರ ಇಬ್ಬರು ಶಿಷ್ಯಂದಿರು ಗುಂಡೇಟಿಗೆ ಹುತಾತ್ಮರಾದರು. ಮೌಲವಿಯವರು ಗುರುತರವಾಗಿ ಗಾಯಗೊಂಡರು. ಅವರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಆದರೆ ಸಂಘರ್ಷವನ್ನು ಬ್ರಿಟಿಷರು ಹಿಂದೂ ಮುಸ್ಲಿಂ ಗಲಭೆಯಾಗಿ ಚಿತ್ರೀಕರಿಸಿದರು. ಮೌಲವಿಯನ್ನು ಹಿಂದೂ ವಿರೋಧಿಯಾಗಿ ಬಿಂಬಿಸಲು ಪ್ರಯತ್ನಿಸಿದರು.

ಮೌಲವಿಯವರ ಬಂಧನ ಊರಿಡೀ ಸಂಚಲನವನ್ನೇ ಮೂಡಿಸಿದವು. ಹಿಂದೂ ಮುಸ್ಲಿಮರೆಂಬ ಭೇಧವಿಲ್ಲದೆ ಅಸಂಖ್ಯ ಜನರು ಮೌಲವಿಯವರ ಬಿಡುಗಡೆಗಾಗಿ ಬೀದಿಗಿಳಿದರು. 1857ರ ಜೂನ್ ಎಂಟಕ್ಕೆ ಫೈಝಾಬಾ ದ್‌ನಾದ್ಯಂತ ಬೃಹತ್ ಪ್ರತಿಭಟನೆಯೇ ಭುಗಿಲೆದ್ದವು. ಪ್ರತಿಭಟನಾಕಾರರು ಕಾರಾಗೃಹದ ಮೇಲೆ ದಾಳಿ ಮಾಡಿ ಖೈದಿಗಳನ್ನು ಬಂಧಮುಕ್ತಗೊಳಿಸಿದರು. ಜತೆಗೆ ಮೌಲವಿಯೂ ಬಿಡುಗಡೆಯಾದರು. ಹೊರ ಬಂದ ಮೌಲವಿಯರನ್ನು ಹಿಂದೂ ಮುಸ್ಲಿಮರು ಒಟ್ಟು ಸೇರಿ ಸ್ವಾಗತಿಸಿದರು. ತಮ್ಮ ಹೋರಾಟದ ಸಾರಥ್ಯವನ್ನು ಅವರಿಗೆ ವಹಿಸಿದರು. ಜನರಲ್ಲಿ ಸ್ವರಾಜ್ಯ ಪ್ರೇಮವನ್ನು ಬಡಿದೆಬ್ಬಿಸಿದ ಮೌಲವಿ ಅಹ್ಮದುಲ್ಲಾ ಶಾಹ್‌ರವರು ಒಂದು ಶಿಸ್ತು ಬದ್ದ ಪಡೆಯನ್ನು ಕಟ್ಟಿದರು. ಕೊಳ್ಳೆ ಮತ್ತು ಲೂಟಿ ಹೊಡೆಯುವ ಸಿಪಾಯಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರು. ಹೋರಾಟದ ಹೆಸರಲ್ಲಿ ಅಮಾಯಕರ, ಮಹಿಳೆಯರ, ಮಕ್ಕಳ ಮೇಲೆ ದೌರ್ಜನ್ಯ ನಡೆಸಬಾರದೆಂದು ತೀಕ್ಷ್ಣ ತಾಕೀತು ನೀಡಿದರು. ದೌರ್ಜನ್ಯ ಮತ್ತು ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಲು ಹಲವೆಡೆ ತನ್ನ ಸ್ವಂತ ಖರ್ಚಿನಲ್ಲಿ ಪೋಲೀಸ್ ಪೋಸ್ಟ್‌ಗಳನ್ನು ಏರ್ಪಾಟು ಮಾಡಿದರು.

ಹೀಗೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾರಥ್ಯವನ್ನು ನೀಡಿ ಬ್ರಿಟಿಷ್ ಚಳುವಳಿಯನ್ನು ಸಶಕ್ತ ಗೊಳಿಸಿದ ಈ ವೀರ ಸೇನಾನಿ, ಸ್ವಾತಂತ್ರ್ಯ ಸಮರ ಚರಿತ್ರೆಯಲ್ಲಿ ರಾರಾಜಿಸಬೇಕಿತ್ತು. ದುರಂತವೆಂದರೆ ಅವರು ಚರಿತ್ರೆಯ ಅವಜ್ಞೆಗೊಳಗಾದರು.  ಅವರ ಚರಿತ್ರೆಯನ್ನು ಪ್ರಜ್ಞಾಪೂರ್ವಕ ಮರೆಮಾಚಿಡಲಾಯಿತು. ಬಲಪಂಥೀಯ ಮತ್ತು ಸಾಂಪ್ರದಾಯಿಕ ಚರಿತ್ರೆಗಾರರು ಸೃಷ್ಟಿಸಿದ ಭ್ರಾಮಕ ಅಸತ್ಯದ ಮುಂದೆ ಮೌಲವಿ ಶಾಹ್‌ರಂಥ ಹಲವು ವೀರ ಸೇನಾನಿಗಳು ಹಿನ್ನೆಲೆಗೆ ಸರಿಯಲ್ಪಟ್ಟರು.

ನಾನಾಸಾಹೇಬ್, ಝಾನ್ಸಿ ರಾಣಿ‌ ಮೊದಲಾದವರಷ್ಟೇ ತುಂಬಿಕೊಂಡಿರುವ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮೌಲವಿ ಫೈಝಾಬಾದ್‌ರಂಥವರು ದಾಖಲಾಗದೇ ಹೋದದ್ದು ವಿಪರ್ಯಾಸದ ಸಂಗತಿ. ಝಾನ್ಸಿ ರಾಣಿ ಹೋರಾಟಕ್ಕೆ ಧುಮುಕಲು ಸ್ಪಷ್ಟ ಕಾರಣವಿತ್ತು. ಅವರ ಪತಿ ತೀರಿಹೋದಾಗ ಉತ್ತರಾಧಿಕಾರಿಯಾಗಬೇಕಾದದ್ದು ಅವರ ಪುತ್ರರು. ಆದರೆ ರಾಜ್ಯಭಾರ ಮಾಡಬೇಕಾದ ಪುತ್ರರಿಲ್ಲದ್ದರಿಂದ ಅವರ ರಾಜ್ಯ ಬ್ರಿಟಿಷರ ಪಾಲಾಗುವ ಸಂಭವವಿತ್ತು. ತನ್ನ ‘ಝಾನ್ಸಿ’ ಪ್ರಾಂತ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಅನಿವಾರ್ಯವಾಗಿ ಲಕ್ಷ್ಮೀ ಬಾಯಿಗೆ ಅಖಾಡಕ್ಕೆ ಇಳಿಯಬೇಕಾಯಿತು. ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುರುತಿಸಲ್ಪಡುವ ಮತ್ತೊಬ್ಬ ವ್ಯಕ್ತಿಯೆಂದರೆ ನಾನಾ ಸಾಹೇಬ್. ಅವರಿಗೆ ಸರಕಾರದಿಂದ ಮಾಸಿಕ ವೇತನ ಸಿಗುತ್ತಿದ್ದವು. ಅದನ್ನು ಬ್ರಿಟಿಷ್ ಸರಕಾರ ರದ್ದು ಮಾಡಿತು. ಇದರಿಂದ ನೊಂದ ನಾನಾ ಸಾಹೇಬ್ ಬ್ರಿಟಿಷರ ವಿರುದ್ದ ಸಿಡಿದ್ದೆದ್ದರು. ನಾನಾರು ಯಾವಾಗ ಹೋರಾಟಕ್ಕಿಳಿದರೋ ಆಗಷ್ಟೇ ತಾಂದಿಯಟೋಪಿ ಚಳುವಳಿಗೆ ಧುಮುಕಿದ್ದು. ಆದರೆ ಮೌಲವಿ ಫೈಝಾಬಾದ್‌ರಿಗೆ ಈ ರೀತಿಯ ಯಾವುದೇ ವೈಯಕ್ತಿಕ ಹಿತಾಸಕ್ತಿಗಳಿರಲಿಲ್ಲ. ಮೊದಲನೇ ಸ್ವಾತಂತ್ರ್ಯ ಸಮರದಲ್ಲಿ ಸ್ವಂತದ ಲಾಭಕ್ಕಾಗಿ ಹೋರಾಡದ, ಮತ್ತು ಬ್ರಿಟಿಷರೊಂದಿಗೆ ವೈಯಕ್ತಿಕ ಧ್ವೇಷ ತೀರಿಸದ ಏಕೈಕ ವ್ಯಕ್ತಿಯಾಗಿದ್ದರು ಮೌಲವಿ ಶಾಹ್ ಅಹ್ಮದುಲ್ಲಾ. ಅವರ ಹೋರಾಟದ ರಿವಾಜು ಕ್ರಾಂತಿಕಾರಿಯಾಗಿತ್ತು. ಜನರ ಜಮೀನು, ಆಸ್ತಿ, ಮತ್ತು ಬದುಕನ್ನು ಅತಿಕ್ರಮಿಸಿ ಅಸ್ತಿತ್ವ ಸ್ಥಾಪಿಸಿದ ಬ್ರಿಟಿಷರ ನಿಲುವನ್ನು ಮೌಲವಿಯವರು ತೀವ್ರವಾಗಿ ಖಂಡಿಸಿದರು. ಈ ಕಾರಣಕ್ಕಾಗಿ ಚಳುವಳಿಯ ಆರಂಭದಿಂದಲೇ ಅವರು ಬ್ರಿಟಿಷರ ಬದ್ದ ವೈರಿಯಾಗಿ ಮಾರ್ಪಟ್ಟಿದ್ದರು. ಅವರನ್ನು ವಧಿಸುವವರಿಗೆ ಅಥವಾ ಬಂಧಿಸಿ ಒಪ್ಪಿಸುವವರಿಗೆ 50,000 ರೂ ಇನಾಮು ಪ್ರಕಟಿಸಿತು ಬ್ರಿಟಿಷ್ ಸರಕಾರ.

ಮೌಲವಿಯವರು 1787ರಲ್ಲಿ  ದಖ್ಖನಿನ (ಕೆಲವು ಮಾಹಿತಿಗಳ ಪ್ರಕಾರ ಮದ್ರಾಸ್ ಎಂದೂ, ಮತ್ತೆ ಕೆಲವು ದಾಖಲೆಗಳ ಪ್ರಕಾರ ಮಧ್ಯಪ್ರದೇಶದ ಮುಲ್ತಾನ್ ಎಂದೂ ವ್ಯತ್ಯಸ್ಥ  ಅಭಿಪ್ರಾಯವೂ ಇದೆ.) ಒಂದು ಕುಲೀನ ಕುಟುಂಬದಲ್ಲಿ ಜನಿಸಿದರು. (ಟಿಪ್ಪು ಸುಲ್ತಾನರ ಸಂಬಂಧಿಯೆಂದೂ ಹೇಳಲಾಗುತ್ತದೆ) ಅವರ ತಂದೆ ಊರ ಪ್ರಮುಖರಾಗಿದ್ದರು. ಮೌಲವಿಯವರು ಹಲವು ವಿಧ್ವಾಂಸರಿಂದ ಧಾರ್ಮಿಕ ಶಿಕ್ಷಣ‌ ಪಡೆದರು.  ಬಳಿಕ ಮಿಹ್ರಾಬ್ ಷಾ ಎಂಬ ಸೂಫೀ ವರ್ಯರೊಬ್ಬರ ಶಿಷ್ಯ ನಾಗಿ ಹಲವು ಕಾಲ ಗ್ವಾಳಿಯರ್‌ನಲ್ಲಿ ಕಳೆದರು. ಇವರು ತನ್ನ ಹದಿನಾರನೇ ವಯಸ್ಸಿನಲ್ಲೇ ಇಂಗ್ಲೆಂಡ್, ರಷ್ಯಾ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳನ್ನು ಸುತ್ತಾಡಿ ಬಂದಿದ್ದರು. ಮೌಲವಿಯವರು ಲಕ್ನೋಗೆ ಬಂದದ್ದು ಒಬ್ಬ ಸೂಫೀ ಪ್ರಬೋಧಕರಾಗಿ. ಅಲ್ಲಿ ಅನೇಕ ಮಂದಿ ಅವರ ಶಿಷ್ಯತ್ವ ಸ್ವೀಕರಿಸಿದರು. ಕರಾಟೆಯಂಥ ಕದನ ಕಲೆಗಳಲ್ಲಿ  ಮೌಲವಿಯವರು ನಿಪುಣರಾಗಿದ್ದರು. ಬೆಂಕಿಯುಗುಳುವ ಕಲೆಯೂ ಅವರಿಗೆ ಕರಗತ ವಾಗಿತ್ತು. ಮೌಲವಿ ಮತ್ತು ಶಿಷ್ಯಂದಿರು ಲಕ್ನೋದ ಬೀದಿಗಳಲ್ಲಿ ಕರಾಟೆ ಪ್ರದರ್ಶಿಸುತ್ತಿದ್ದರು. ಅವರು ತನ್ನ ಶಿಷ್ಯಂದಿರೊಂದಿಗೆ ಯಾವುದಾದರು ಊರಿಗೆ ತೆರಳುತ್ತಿದ್ದರೆ ಮದ್ದಳೆಯ ಮೂಲಕ ತಮ್ಮ ಆಗಮನವನ್ನು ತಿಳಿಸುತ್ತಿದ್ದರು. ಈ ಕಾರಣದಿಂದಾಗಿ ‘ಸಂಘಾಷಾ’ ಎಂಬ ಹೆಸರಿನಲ್ಲಿ ಮೌಲವಿ ಗುರುತಿಸಲ್ಪ ಡುತ್ತಿದ್ದರು. ಕಾಲೋನಲ್ ಜಿ.ಬಿ ಮಲ್ಲೇಸನ್ ಅಹ್ಮದುಲ್ಲಾರನ್ನು “ವಿವಿಧ ಸಾಮರ್ಥ್ಯವುಳ್ಳ ವ್ಯಕ್ತಿ, ಶಕ್ತಿಶಾಲಿ, ಛಲವಾದಿ, ಬಂಡುಕೋರರಲ್ಲಿ ಶ್ರೇಷ್ಠ ಸೈನಿಕ” ಎಂದು ಹೊಗಳಿದ್ದ. ಅವರ ಧೈರ್ಯ, ಶೌರ್ಯ, ವರ್ಚಸ್ಸು ಮತ್ತು ಸಾಂಸ್ಥಿಕ ಸಾಮರ್ಥ್ಯಗಳ ಬಗ್ಗೆ ಬ್ರಿಟಿಷ್ ಅಧಿಕಾರಿಗಳಾದ ಬ್ರೂಸ್ ಮೆಲ್ಲೇಷನ್, ಥಾಮಸ್ ಸಾಟನ್ ಮುಂತಾದವರೇ ಶ್ಲಾಘನೆ‌ ವ್ಯಕ್ತಪಡಿಸಿದ್ದರು.

ಲಕ್ನೋದಲ್ಲಿದ್ದ ಬ್ರಿಟಿಷ್ ರೆಸಿಡೆನ್ಸಿಯನ್ನು ಕೆಡುಹುವುದು ಮೌಲವಿಯವರ ಆದ್ಯ ಇರಾದೆಯಾಗಿತ್ತು. ರೆಸಿಡೆನ್ಸಿ ಉರುಳಿದರೆ ಲಕ್ನೋದಲ್ಲಿ ಬ್ರಿಟಿಷರು ಅಸ್ತಿತ್ವ ಕಳೆದು ಕೊಳ್ಳುವುದರಲ್ಲಿದ್ದರು.  ಹತ್ಯಾರದೊಂದಿಗೆ ಬಂದ ಮೌಲವಿ ಮತ್ತು ಸಂಗಡಿಗರು ರೆಸಿಡೆನ್ಸಿಯ ಸಮೀಪ ತಲುಪಿದ್ದಂತೆ ಬ್ರಿಟಿಷರು ತಡೆದರು. ಈ ಘರ್ಷಣೆಯಲ್ಲೂ ಮೌಲವಿ ಗಾಯಗೊಂಡರು. ಮೌಲವಿಯವರ ಸಾರಥ್ಯವು ಅನುಯಾಯಿಗಳಲ್ಲಿ ಹೊಸ ಹುರುಪು ಮತ್ತು ಆವೇಶವನ್ನು ತುಂಬಿದವು. ಸ್ವರಾಜ್ಯ ಹೋರಾಟದಲ್ಲಿ ಮೌಲವಿಯನ್ನು ಒಬ್ಬ ‘ದಿವ್ಯಾವತಾರ’ ವಾಗಿ ಅವರು ಕಂಡರು. ಬ್ರಿಟಿಷ್ ಮೇಧಾವಿತ್ವದ ಅಂತ್ಯ ಆಗಮಿಸಿದೆಯೆಂದೂ, ಈ ಬಗ್ಗೆ ಲಂಡನ್ ನಗರದ ಬೀದಿಗಳಲ್ಲಿ ಮದ್ದಲೆ ಬಾರಿಸಿ ಸಾರಲಾಗುವುದೆಂದೂ ಅವರು ಘೋಷಿಸಿದರು. ಸೂಫಿ ವರ್ಯರಾಗಿದ್ದ ಮೌಲವಿಯವರ ಭಾಷಣ, ನಾಯಕತ್ವ ಜನರಲ್ಲಿ ಉತ್ತೇಜನ ಮತ್ತು ಸ್ಪೂರ್ತಿಯನ್ನು ತುಂಬಿದವು.

ಅವಧ್‌ನ ರಾಣಿ ಬೇಗಂ ಹಝ್ರತ್ ಮಹಲ್ ಕೂಡಾ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದಳು. ಹಾಗೆ ನೋಡಿದರೆ ರಾಣಿ ಝಾನ್ಸಿಯದ್ದೇ ಸ್ಥಿತಿಯಾಗಿತ್ತು ಬೇಗಂಳದ್ದು. ಗಂಡ ತೀರಿ ಕೊಂಡಾಗ ದತ್ತಾಪಹಾರ ಕಾನೂನನ್ನು ಬಳಸಿಕೊಂಡ ಬ್ರಿಟಿಷರು ಆಕೆಯ ಪ್ರಾಂತ್ಯದ ಮೇಲೆ ಪಾರುಪತ್ಯ ಸ್ಥಾಪಿಸಲಾರಂಭಿಸಿದರು. ಬೇಗಂಳ ಸೈನ್ಯವು ಮೌಲವಿಯವರ ಪಾಳಯದೊಂದಿಗೆ ಸೇರಿಕೊಂಡರು. ಮೌಲವಿಯವರ ಹೋರಾಟದ ವೈಖರಿ ಮತ್ತು ಜನಪ್ರಿಯತೆ  ಬೇಗಂಳಲ್ಲಿ ಆತಂಕವನ್ನುಂಟು ಮಾಡಿತು. ಈಗಾಗಲೇ ಎದ್ದಿರುವ ಮೌಲವಿಯವರ ಪ್ರಭಾವಳಿಯು ತನ್ನ ಅಧಿಕಾರದ ಮೇಲೆ ಪರಿಣಾಮ ಬೀರಬಹುದೇ  ಎಂಬ ಭೀತಿ ಆಕೆಯನ್ನು ಕಾಡದೇ ಇರಲಿಲ್ಲ. ಆಕೆಯ ಈ ವ್ಯಾಕುಲತೆ ಮೌಲವಿಯವರ ಶತ್ರುವನ್ನಾಗಿ ಮಾರ್ಪಡಿಸಿತು. ತನ್ನ ಆಪ್ತನೂ, ಮಂತ್ರಿಯೂ ಆಗಿದ್ದ ಶರಫುದ್ದೌಲ ಮತ್ತು ಮಮ್ಮೂಖಾನರ ನೆರವು ಪಡೆದು ಮೌಲವಿಯವರ ಪಾಳಯದಲ್ಲಿ ಭಿನ್ನಮತ ಸೃಷ್ಟಿಸಲು ಯೋಜನೆ ಹಾಕಿದಳು. ನಿಸ್ವಾರ್ಥ ಹೋರಾಟಗಾರ ರಾಗಿದ್ದ ಮೌಲವಿಯವರಿಗೆ ರಾಣಿ ಹೂಡಿದ ಈ ವಂಚನಾತ್ಮಕ ಸಂಚು ಅತೀವ ಬೇಸರವನ್ನು ತರಿಸಿತು. ಬೇಗಂಳನ್ನು ಮಣಿಸಿ ಹತ್ತಿಕ್ಕುವ  ಶಕ್ತಿಮೌಲವಿ ಪಾಳಯಕ್ಕಿತ್ತು. ಆದರೆ ಅದು ತಮ್ಮ ಸ್ಥಾಪಿತ ಉದ್ದೇಶಕ್ಕೆ ವಿರುದ್ದವೆಂದು ಆ ನಿರ್ಧಾರದಿಂದ ಹಿಂಜರಿದು ತಮ್ಮ ಸೇನಾ ನೆಲೆಯನ್ನು ಲಕ್ನೋದಿಂದ ಅವಧ್‌ನ ಗಡಿಯಾದ ಹಕೀಂ ಮಂಡೀ ಕೇಸರಾಯ್ ಎಂಬಲ್ಲಿಗೆ ವರ್ಗಾಯಿಸಿದರು.

ಅಷ್ಟರಲ್ಲಿ ಲಕ್ನೋದಲ್ಲಿ ಬೇಗಂಳ ಸೈನ್ಯ ಮತ್ತು ಬ್ರಿಟಿಷ್ ಸೈನ್ಯದ ನಡುವೆ ರುಧ್ರ ಹಣಾಹಣಿಯೇ ನಡೆದು ಹೋಯಿತು. ಸುದ್ದಿ ತಿಳಿದ ಮೌಲವಿಯವರು ಬೇಗಂಳಲ್ಲಿದ್ದ ಎಲ್ಲಾ ಮನಸ್ತಾಪಗಳನ್ನು ಮರೆತು ತನ್ನ ಸೇನೆಯನ್ನು ಲಕ್ನೋಗೆ ಮುನ್ನಡೆಸಿದರು. ಲಕ್ನೋದ ಪಾಲಿಗೆ ಆ ಯುದ್ದ ಅತ್ಯಂತ ನಿರ್ಣಾಯಕವಾಗಿತ್ತು. ಯುದ್ದದಲ್ಲಿ ಬೇಗಂಳ ಸೈನ್ಯ ಸೋತರೆ ಇಡೀ ಲಕ್ನೋ ಬ್ರಿಟಿಷರ ಹಿಡಿತಕ್ಕೆ ಸೇರುತ್ತಿದ್ದವು. ಬ್ರಿಟಿಷರು ಈ ನೆಲದ ಮೇಲೆ ಹಿಡಿತ ಸ್ಥಾಪಿಸುವುದನ್ನು ಸಹಿಸದ ಮೌಲವಿಯವರು ಬೇಗಂಳ ಸೈನ್ಯದೊಂದಿಗೆ ರಣಾಂಗಣಕ್ಕೆ ಧುಮುಕುವಂತೆ ತನ್ನ ಪಾಳಯಕ್ಕೆ ಸೂಚಿಸಿದರು. ಯುದ್ದ ಆಸ್ಪೋಟಿಸಿತು. ನಾಡಿಡೀ ಯುದ್ದದ ಕಾವು ಹರಡಿಕೊಂಡವು. ಘೋರ ಯುದ್ಧದ ಬಳಿಕ ಅಂತಿಮವಾಗಿ ಬ್ರಿಟೀಷರೇ ಗೆಲುವು ಕಂಡರು. ಖಾಝಿ ಅಲಿ ಜೋನ್‌ಪುರಿ, ಫಳುಲುಲ್ ಹಖ್ ಖೈರಾಬಾದಿಯಂಥ ಹಲವು ನೇತಾರರು, ವಿಧ್ವಾಂಸರು ಜೈಲುಪಾಲಾದರು. ಆ ಪೈಕಿ ಹಲವರನ್ನು ನೇಣಿಗಂಭಕ್ಕೇರಿಸಿದರೆ ಮತ್ತೆ ಕೆಲವರನ್ನು ಅಂಡಮಾನ್ ಜೈಲಿಗೆ ದಸ್ತಗಿರಿ ಮಾಡಲಾಯಿತು. ಅಧಿಕಾರ ಕಳೆದುಕೊಂಡ ಬೇಗಂ ಹಝ್ರತ್ ಮಹಲ್ ನೇಪಾಳಕ್ಕೆ ಪಲಾಯಣಗೈದರು. ಉಳಿದ ಮಂದಿ ಪ್ರಾಣಾಪಾಯದಿಂದ ಕಾಲ್ಕಿತ್ತರು.  ಆದರೆ ಮೌಲವಿಯವರು ಲಕ್ನೋದಿಂದ ಹಿಂಜರಿಯಲಿಲ್ಲ. ವಿಚಲಿತನಾಗದೇ ಲಕ್ನೋದಲ್ಲೇ ತಂಗಿದರು. ಅವರಿಗಾಗಿ ಬ್ರಿಟಿಷರು ಬಲೆ ಬೀಸಿದರಾದರೂ ಅವರ ಬಂಧನ ನಡೆಯಲಿಲ್ಲ. ಈ ಸೋಲು ಮೌಲವಿಯವರಲ್ಲಿ ನಿರಾಶೆಯನ್ನುಂಟು ಮಾಡಲಿಲ್ಲ. ಮತ್ತಷ್ಟು ಪ್ರಬಲವಾಗಿ ಮುನ್ನುಗ್ಗಲು ಈ ಸೋಲು ಅವರನ್ನು ಉತ್ತೇಜಿಸಿತು. ಜನರಿಗೆ ಅವರು ಒಬ್ಬ ಕೇವಲ ಕ್ರಾಂತಿಕಾರಿ ಮಾತ್ರವಾಗದೇ ಒಬ್ಬ ಆಧ್ಯಾತ್ಮಿಕ ನೇತಾರರೂ ಆಗಿದ್ದರು. ಚಳುವಳಿಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರೂ ಜನರ ಅಹವಾಲನ್ನು ಆಲಿಸಲು, ಅದಕ್ಕೆ ಆಧ್ಯಾತ್ಮಿಕವಾಗಿ ಪರಿಹಾರ ಸೂಚಿಸಲು ಅವರು ಸಮಯ ಕಂಡುಕೊಳ್ಳುತ್ತಿದ್ದರು. ಕೇವಲ ಮುಸ್ಲಿಮರಷ್ಟೇ‌ ಅಲ್ಲದೆ ಇತರ ಧರ್ಮೀಯರೂ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅವರನ್ನು ಸಮೀಪಿಸುತ್ತಿದ್ದರು. ಇದು ಧರ್ಮಗಳ ನಡುವೆ  ಸೌಹಾರ್ಧದ ಬೆಸುಗೆಗೂ ಕಾರಣವಾಗಿತ್ತು. ಆತ್ಮಶುದ್ಧಿ, ನೈತಿಕಬಲ, ಸ್ನೇಹದ ಬೆಸುಗೆ, ಮತ್ತು ನಿಷ್ಕಳಂಕ ದೇಶನಿಷ್ಟೆ, ಇವುಗಳಿಂದ ಮನುಷ್ಯನಿಗೆ ಗುಲಾಮಗಿರಿಯ ಸಂಕೋಲೆಯಿಂದ ಬಿಡಿಸಿಕೊಳ್ಳಬಹುದು ಎಂಬ ಅಧ್ಯಾತ್ಮದ ಅನುಸಂಧಾನವನ್ನು ಚಳುವಳಿಯಲ್ಲಿ ಪ್ರಯೋಗಿಸಲು ಮೌಲವಿ ಮುಂದಾದರು. 1857ರ ದಂಗೆಯ ವೇಳೆ ಅವರಿಗೆ ಅರುವತ್ತು ವರ್ಷ ವಯಸ್ಸಾಗಿತ್ತು. ಅವರ ಇಳಿ ವಯಸ್ಸು ಮತ್ತು ವಯೋ ಸಹಜ ದಣಿವು ಕ್ರಾಂತಿಕಾರಿ ಚಟುವಟಿಕೆಯ ಮೇಲೆ ಕ್ಷೀಣ ಬೀರಲಿಲ್ಲ.

ಬಳಿಕ ಲಕ್ನೋದಿಂದ ಸುಮಾರು ಇಪ್ಪತ್ತೈದು ಮೈಲು ದೂರದ ‘ಬರೀ’ ಎಂಬ ಪುಟ್ಟ ಗ್ರಾಮಕ್ಕೆ ತೆರಳಿದ ಮೌಲವಿಯವರು ಅಲ್ಲಿ ಬ್ರಿಟಿಷರ ವಿರುದ್ದ ಜನರನ್ನು ಒಗ್ಗೂಡಿಸಿದರು. ವಿಷಯ ಅರಿತ ಬ್ರಿಟಿಷರು ಮಿಸ್ಟರ್ ಹೋವ್ ಗ್ರಾಂಟೀನ್‌ನ ನೇತೃತ್ವದಲ್ಲಿ 3000 ಸೈನ್ಯವನ್ನು ಬರೀಗೆ ಕಳುಹಿಸಿದರು. ತಮ್ಮೊಂದಿಗೆ ಕಾದಾಡಲು ಬಂದ ಬ್ರಿಟಿಷ್ ಸೈನ್ಯವನ್ನು ಮೌಲವಿ ಮತ್ತು ಸಂಗಡಿಗರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು. ‘ಬರೀ’ನಿಂದ ಮೌಲವಿ ಮತ್ತು ಪಾಳಯವು ರೋಹಲ್‌ಖಂಡ್‌ಗೆ ತೆರಳಿದರು. ಅಲ್ಲಿನ ಬ್ರಿಟಿಷ್ ಸೇನಾ ಮೇಧಾವಿಯಾಗಿದ್ದ ಸರ್ಕೋಳ್ ಕಾಂಬೈನ್ ಬರೇಲ್ವಿಯ ನವಾಬ ಖಾನ್ ಬಹಾದೂರ್‌ನನ್ನು ಸೋಲಿಸಿ ಆಧಿಪತ್ಯ ಸ್ಥಾಪಿಸುವ ಸಿದ್ದತೆಯಲ್ಲಿದ್ದ. ಆದ್ದರಿಂದ ನವಾಬನಿಗೆ ನೆರವಾಗುವ ಬಗ್ಗೆ ಮೌಲವಿಯವರು ತೀರ್ಮಾನಿಸಿದರು. ಬ್ರಿಟಿಷ್ ಸೈನ್ಯ ರೋಹಲ್‌ಖಂಡ್ ದಾರಿಯಾಗಿ ಹೋದ ತಕ್ಷಣ ಹಿಂಬದಿಯಿಂದ ಆಕ್ರಮಿಸುವುದು ಮೌಲವಿಯವರ ಯೋಜನೆಯಾಗಿತ್ತು. ಇದಕ್ಕಾಗಿ ಮರಾಠಿ ನಾಯಕರಾಗಿದ್ದ ನಾನಾ ಸಾಹೇಬರ ನೆರವಿನೊಂದಿಗೆ ಶಾಹಜಾನ್ ಪುರದಲ್ಲಿ ಒಂದು ಪ್ರತ್ಯೇಕ ಸೈನ್ಯವ್ಯೂಹವನ್ನು ಸನ್ನಾಹಗೊಳಿಸಿದರು. ಬರೇಲ್ವಿಗೆ ಹೊರಟಿದ್ದ ಬ್ರಿಟಿಷ್ ಸೈನ್ಯ 1858ರ ಮೇ ಹನ್ನೆರಡಕ್ಕೆ ಶಾಹಜಾನ್‌ಪುರಕ್ಕೆ ತಲುಪಿತು. ಅಲ್ಲಿದ್ದ ಎಲ್ಲಾ ಬ್ರಿಟಿಷರ ಕಟ್ಟಡಗಳನ್ನೂ ಮೌಲವಿಯವರ ಸೇನೆ ನೆಲಸಮ ಗೊಳಿಸಿತು. ಇಲ್ಲದಿದ್ದರೆ ದಾಳಿಯ ವೇಳೆ ಬ್ರಿಟಿಷರು ಇಲ್ಲಿ ತಲೆಮರೆಸಿಕೊಳ್ಳುವ ಸಾಧ್ಯತೆಯಿತ್ತು. ಮೌಲವಿಯವರ ಪಾಳಯ ತಮ್ಮ ಮೇಲೆ ಆಕ್ರಮಣ ನಡೆಸುವುದು ಕೋಳಿನ್‌ಗೆ ಖಚಿತವಿತ್ತು. ಆದ್ದರಿಂದ ‘ಹಲೆ’ ಎಂಬಾತನ ನೇತೃತ್ವದಲ್ಲಿ ಒಂದು ಸಣ್ಣ ಸೈನ್ಯವನ್ನು ಶಾಹಜಾನ್‌ಪುರ ದಲ್ಲಿ ನಿಲ್ಲಿಸಿ ಕೋಳಿನ್ ಆದಷ್ಟು ಬೇಗ ಬರೇಲ್ವಿಗೆ ತೆರಳಿದ. ಇದೇ ಸಂಧರ್ಭವನ್ನು ಬಳಸಿಕೊಂಡ ಮೌಲವಿಯವರ ಸೈನ್ಯ ಹಲೆನೊಂದಿಗೆ ಕಾದಾಟಕ್ಕೆ ನಿಂತಿತು. ಬ್ರಿಟಿಷ್ ಸೈನ್ಯದಿಂದ ಹಲವರು ಈ ಕಾದಾಟದಲ್ಲಿ ಕೊಲ್ಲಲ್ಪಟ್ಟರು. ಇದು ಬ್ರಿಟಿಷ್ ಸೇನಾ ಮೇಧಾವಿಯನ್ನು ಕೆರಳುವಂತೆ ಮಾಡಿತು. ಕೋಳಿನ್‌ನ ಸೈನ್ಯ ಬರೇಲ್ವಿಯಲ್ಲಿ ಯುದ್ದ ಆರಂಭಿಸಿದೆಯೆಂಬ ಸುದ್ದಿ ಅರಿತ ಮೌಲವಿಯವರು ಒಂದು ಸೈನ್ಯವನ್ನು ಅತ್ತ ಕಳುಹಿಸಿದರು. ದಾರಿಯುದ್ದಕ್ಕಿದ್ದ ಬ್ರಿಟಿಷ್ ಕಾರಾಗೃಹವನ್ನು ಸಂಪೂರ್ಣ ಹೊಡೆದುರುಳಿಸಿದರು. ಪರಿಭ್ರಾಂತನಾದ ಹಲೆ ತುರ್ತಾಗಿ ಸೇನೆಯೊಂದನ್ನು ಕಳುಹಿಸುವಂತೆ ಕೋಳಿನ್‌ನ್ನು ಕೋರಿಕೊಂಡ. ಆತ ತಕ್ಷಣ ಬ್ರಿಗೇಡಿಯರ್ ಜಾನ್ಸನ್‌ನ ನೇತೃತ್ವದ ಒಂದು ಸೇನೆಯನ್ನು ಅತ್ತ ಕಳುಹಿಸಿದ.‌ ಮೌಲವಿಯ ಸೈನ್ಯವನ್ನು ಸೋಲಿಸಿದ ಈ ಸೈನ್ಯವು ಹಲೆಯನ್ನು ಕಾಪಾಡಿತು.

ಸತತವಾಗಿ ಬ್ರಿಟಿಷ್ ಸೇನೆಯ ಮುಂದೆ ಸೋಲಬೇಕಾಗಿ ಬಂದರೂ ಮೌಲವಿಯವರು ಧೃತಿಗೆಡಲಿಲ್ಲ. ತನ್ನ ಅನುಯಾಯಿಗಳಿಗೆ ಸ್ಥೈರ್ಯ ತುಂಬುತ್ತಿದ್ದರು. ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಪಾಲ್ಗೊಳ್ಳಲು ಜನರನ್ನು ಹುರಿದುಂಬಿಸುತ್ತಿದ್ದರು. 5000 ಮಂದಿಯನ್ನೊಳಗೊಂಡ ಕುದುರೆ ಸೈನ್ಯ, ಒಂದು ಯೂನಿಟ್ ಕಾಲಾಳುಪಡೆ ಮತ್ತು ಒಂಬತ್ತು ಬಂದೂಕು ಗಳಷ್ಟೇ ಆಗ ಮೌಲವಿ ಸೈನ್ಯದಲ್ಲಿದ್ದುದು. ಬ್ರಿಟಿಷ್ ಸೈನ್ಯ ಇದಕ್ಕಿಂತಲೂ ಪ್ರಬಲವಾಗಿದ್ದವು. ಆದ್ದರಿಂದ ಮೌಲವಿಯವರು ಮುಹಮ್ಮದಿ ಎಂಬಲ್ಲಿ ತಮ್ಮ ಸೇನಾ ನೆಲೆಯನ್ನು ಸ್ಥಾಪಿಸಿ, ಅಲ್ಲಿ ಒಂದು ಸಶಕ್ತವಾದ ಕೋಟೆಯೊಂದನ್ನು ನಿರ್ಮಿಸಿದರು. ಕೋಟೆಯ ಗೋಡೆಯಲ್ಲಿ ಹದಿನೈದು ರಂಧ್ರಗಳನ್ನು ಮಾಡಿ ಪ್ರತೀ ರಂಧ್ರದಲ್ಲೂ ಬಂದೂಕನ್ನು ಇರಿಸಿದರು. ಬ್ರಿಟಿಷರ ಮತ್ತು ಅವರಿಗೆ ನೆರವು ನೀಡುವವರ ವಿರುದ್ದ ಯುದ್ದ ಸಾರಲಾಗುವುದೆಂದೂ ಮೌಲವಿ ಘೋಷಿಸಿದರು. ಪಾಲಿ ಎಂಬ ಪ್ರದೇಶವನ್ನು ವಶಪಡಿಸಿ ಮೂರಿಯ ಎಂಬಲ್ಲಿ ಸೇನಾದಳವನ್ನು ನಿಯಮಿಸಿದರು. ಬ್ರಿಟಿಷರಿಗೆ ಕುಮ್ಮಕ್ಕು ನೀಡುತ್ತಿದ್ದ ಸ್ಥಳೀಯ ಸಾನ್‌ಡೀ, ಪೋವನ್ ಮುಂತಾದ ಸ್ಥಳೀಯ ಪ್ರಭುಗಳಿಗೆ ತಕ್ಕ ಶಾಸ್ತಿ ಕಲಿಸಲು ಮುಂದಾದರು. ಆದರೆ‌ ಪೋವನ್‌ನಲ್ಲಿ ತನಗೆ ದಾರುಣ ಅಂತ್ಯ ಕಾದಿದೆ ಎಂಬ‌ ಕಹಿ ಸತ್ಯ ನಿಸ್ವಾರ್ಥಿ ಮೌಲವಿಯವರಿಗೆ ಗೊತ್ತಿರಲಿಲ್ಲ.

1858ರ ಜೂನ್ ಹದಿನೈದಕ್ಕೆ ಇನ್ನೂರು ಮಂದಿಯ ತಂಡದೊಂದಿಗೆ ಮೌಲವಿಯವರು ಪೋವೇನ್‌ಗೆ ಬಂದರು. ಅವಧ್ ಮತ್ತು ರೋಹಿಲ‌ಖಂಡದ ಸರಹದ್ದಿನಲ್ಲಿರುವ ಪುಟ್ಟ ರಾಜ್ಯವಾಗಿತ್ತು ಪೋವೇನ್. ಅಲ್ಲಿನ ರಾಜ ಜಗನ್ನಾಥ್ ಸಿಂಗ್ ಬ್ರಿಟಿಷ್ ಅನುಭಾವಿಯಾಗಿದ್ದ. ಬ್ರಿಟಿಷ್ ವಿಧೇಯತ್ವವನ್ನು ತ್ಯಜಿಸಿ ಸಾಮ್ರಾಜ್ಯಶಾಹಿತ್ವ ವಿರುದ್ದದ ಹೋರಾಟಕ್ಕೆ ಕೈ ಜೋಡಿಸುವಂತೆ ರಾಜನಲ್ಲಿ ಭಿನ್ನವಿಸಿಕೊಳ್ಳುವುದಾಗಿತ್ತು ಮೌಲವಿಯವರ ಆಗಮನದ ಉದ್ದೇಶ. ಆದರೆ ರಾಜ ಜಗನ್ನಾಥ್ ಸಿಂಗ್, ಬ್ರಿಟಿಷ್ ಬಾಂಧವ್ಯವನ್ನು ಮುರಿಯಲು ಮುಂದಾಗಲಿಲ್ಲ. ಆದರೂ ಮೌಲವಿಯವರನ್ನು ಬರಲು ಒಪ್ಪಿಗೆ ನೀಡಿದ. ತನ್ನ ಸಹೋದರ ಬುಲ್ದಿಯೋ ಸಿಂಗ್‌ನ್ನು ಮೌಲವಿಯೊಂದಿಗೆ ಮಾತುಕತೆ ನಡೆಸಲು ಕಳಹಿಸಿದ. ಧೂರ್ತ ಬುಲ್ದಿಯೋ ಸಿಂಗ್ ಮೌಲವಿಯವರ ಮಾತನ್ನು ಸಂಪೂರ್ಣ ಕೇಳುವ ವ್ಯವಧಾನ ತೋರಲಿಲ್ಲ. ಮೌಲವಿಯನ್ನೂ, ಅನುಯಾಯಿಗಳನ್ನೂ ಬಹಿರಂಗವಾಗಿ ಅಪಹಾಸ್ಯಗೈದ. ಇದಕ್ಕೆ ಪ್ರತಿಕ್ರಿಯಿಸಿದ ಮೌಲವಿ ಪಾಳಯದ ಮೇಲೆ ಬಂದೂಕಿನ ದಾಳಿ ನಡೆಸಿದ. ಜಗನ್ನಾಥನ ಸೈನ್ಯಕ್ಕೂ ಮೌಲವಿ ಬಳಗಕ್ಕೂ ಘರ್ಷಣೆ ನಡೆಯಿತು. ಗಾಯಗೊಂಡ ಮೌಲವಿ ನೆಲಕ್ಕುರುಳಿದರು. ಅವರ ಶಿರಸ್ಸನ್ನು ಬೇರ್ಪಡಿಸುವಂತೆ ಬುಲ್ದಿಯೋ ಸಿಂಗ್ ಆಜ್ಞಾಪಿಸಿದ. ಅವರ ಶರೀರದಿಂದ ಆತ್ಮ ಹೊರಡುವ ಮೊದಲೇ ಆತನ ಕಿಂಕರರು ಮೌಲವಿಯವರ ತಲೆಯನ್ನು ಕೊಯ್ದು ಬಿಟ್ಟರು. ನೆತ್ತರು ಹರಿಯುತ್ತಿದ್ದ ಮೌಲವಿಯವರ ಶಿರವನ್ನು ತೆಗೆಯುತ್ತಾ ಬುಲ್ದಿಯೋ ಸಿಂಗ್ ಮತ್ತು ಕಿಂಕರರು ಶಾಜಹಾನ್‌ಪುರದ ಜಿಲ್ಲಾ ಮೆಜಿಸ್ಟ್ರೇಟ್‌‌ನತ್ತ ವಕ್ಕರಿಸಿದರು. ಹಲವು ವರ್ಷಗಳಿಂದ ತಾವು ಬಯಸಿದ ಕಾರ್ಯ ಆಗಷ್ಟೇ ಸಾಕಾರವಾದ ಸಂತಸ ಬ್ರಿಟಿಷರಲ್ಲಿತ್ತು. ಬುಲ್ದಿಯೋ ಸೀಂಗನ್ನೂ, ರಾಜ ರಾಜನಾಥ್ ಸಿಂಗ್‌ನ್ನೂ ಆತನ ಕಿಂಕರರನ್ನೂ ಬ್ರಿಟಿಷರು ಅಭಿನಂದಿಸಿದರು. ಆ ಮೊದಲೇ ಬ್ರಿಟಿಷರು ಘೋಷಿಸಿದ್ದ 50,000 ಇನಾಮನ್ನು ಬುಲ್ದಿಯೋ ಸಿಂಗ್ ತನ್ನದಾಗಿಸಿಕೊಂಡ. ದಂಗೆ ಕೋರರಿಗೆ ಮುನ್ಸೂಚನೆಯೆಂಬಂತೆ ಮೆಜಿಸ್ಟ್ರೇಟ್ ಕಛೇರಿಯ ಮುಂಭಾಗದಲ್ಲಿ ಮೌಲವಿಯವರ ಅನಾಥ ಶಿರಸ್ಸನ್ನು ಪ್ರದರ್ಶನಕ್ಕಿಡಲಾಯಿತು. ಶರೀರವನ್ನು ರಹಸ್ಯವಾಗಿ ಸುಡಲಾಯಿತು. ಬಳಿಕ ಅವರ ಶಿರವನ್ನು ಲಂಡನ್‌ಗೆ ಕೊಂಡೋಗಿ‌, ಎರಡನೇ ಮಹಾ ಯುದ್ಧದ ತನಕ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನಲ್ಲಿ ತೆಗೆದಿರಿಸಲಾಗಿತ್ತೆಂದು ಹೇಳಲಾಗುತ್ತದೆ. ತನ್ನ ನೆಲದ ವಿಮೋಚನೆಗಾಗಿ ಹೋರಾಟವನ್ನು ಸಂಘಟಿಸಿ, ಬ್ರಿಟಿಷ್ ಪಾಳಯದಲ್ಲಿ ಭೀತಿಯ ಅಲೆಯನ್ನೇ ಸೃಷ್ಟಿಸಿದ್ದ ಮೌಲವಿಯವರು ಭಾರತದ ಅಮರ ಸೇನಾನಿಗಳ ಪಟ್ಟಿಗೆ ಸೇರಬೇಕಾಗಿತ್ತು. ಆದರೆ ಈ ಕ್ರಾಂತಿಕಾರಿ ಸೇನಾನಿಯನ್ನು ಕೆಲವು ಆಷಾಢಭೂತಿ ಇರಿಹಾಸಗಾರರು ಚರಿತ್ರೆಯಿಂದ ನೇಪಥ್ಯಕ್ಕೆ ಸರಿಸಿದರು. ಬ್ರಿಟಿಷರು ಮೌಲವಿಯವರನ್ನು ಶತ್ರುವಾಗಿ ಕಂಡಂತೆ ಅವರ ಆಸ್ಥಾನ ಗುಲಾಮರಾದ ಸಂಘಿಗಳೂ ಮೌಲವಿಯನ್ನು ಚರಿತ್ರೆಯ ಶತ್ರುವನ್ನಾಗಿ ಮಾರ್ಪಡಿಸಿದರು. ಆ ಕಾರಣಕ್ಕಾಗಿ ಅವರು ನಮ್ಮ ಇತಿಹಾಸದಿಂದ ವಿಸ್ಮೃತಿಗೊಳಗಾದರು. ಅವರ ತ್ಯಾಗ, ಹೋರಾಟ, ಬಲಿದಾನಗಳೆಲ್ಲಾ ಮರೆಗೆ ಸರಿದವು. ಹಾಗೊಮ್ಮೆ ಹೀಗೊಮ್ಮೆ ಕೆಲವು ಇತಿಹಾಸಕಾರರು ಉಲ್ಲೇಖಿಸಿದರೂ ತಮ್ಮ ವಿಷಲಿಪ್ತ ವಿಶ್ಲೇಷಣೆಯಿಂದಾಗಿ ಅವರು ಖಳನಾಯಕರ ಪಾಲಿಗೆ ಸೇರಿದರು. ಇದು ಅವರ ಚಾರಿತ್ರಿಕ ವರ್ಚಸ್ಸಿಗೆ ಮತ್ತಷ್ಟು ಗಾಯಗಳನ್ನುಂಟು ಮಾಡಿದವು. ಇಂಥ ಸೇನಾನಿಗಳ ಬಗ್ಗೆ ವಸ್ತುನಿಷ್ಠ ಅಧ್ಯಯನ, ಸಂಶೋಧನೆಗಳು ನಡೆಯ ಬೇಕಾಗಿರುವುದು ವರ್ತಮಾನದ ಅಗತ್ಯವಾಗಿದೆ.   ಹೀಗಾದರೆ, ಪೂರ್ವಾಗ್ರಹ ಪೀಡಿತ ಇತಿಹಾಸಗಾರರಿಂದ ಸಾಂಸ್ಕೃತಿಕ ಭಾರತಕ್ಕೆ‌ಕವಿದ ಗ್ರಹಣ ಮಾಯಬಹುದೇನೋ..

ಆಕರ:
—–
1)ಭಾರತದ‌ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು : ಆಸಿಫ್ ಅಲಿ ಇಂಜಿನಿಯರ್
2)ಇಂಡಿಯಯಿಲೇ‌ ಮುಸ್ಲಿಂ ಸಾನಿಧ್ಯಂ :ಡಾ|ಹುಸೈನ್ ರಂಡತ್ತಾನಿ
3)Ahmadullah Shah: Hero whose head and body are buried :www.sify.com
4)The Revolt of 1857: Maulavi Ahmadullah Shah, the Rebel Saint of Faizabad : the wire.com
5)Greatest hero of the First war of Indian Independence :heritagetimes.in

~ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

Share this on:
error: Content is protected !!