Latest Posts

ಇತಿಹಾಸದಲ್ಲಿ ಕಣ್ಮರೆಯಾದಮುಸ್ಲಿಂ ಸೇನಾನಿಗಳ ಪಾತ್ರ

-ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

ವೈವಿದ್ಯಮಯ ಭಾಷಾ-ವೇಶಗಳ ಕವಲಾಗಿರುವ ನಮ್ಮ ಭಾರತವು ಹಲವು ಧರ್ಮಗಳ ಹಾಗೂ, ಅವುಗಳ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಯಾದಿಗಳಿಂದ ಜಗತ್ತಿನಲ್ಲೇ ಮಾದರಿಯೆನಿಸಿದೆ. ವಿಶಿಷ್ಟ‌ ವರ್ಣ ವರ್ಗಗಳು, ವಿವಿಧ ಆಚಾರ ವಿಚಾರಗಳು, ವಿಭಿನ್ನ ನಂಬಿಕೆಗಳನ್ನು ಹೊಂದಿರುವ ಭಾರತವು ಪುರಾತನ ಕಾಲದಿಂದಲೇ ತನ್ನದೇ ಆದ ವೈಭವವನ್ನು ಉಳಿಸಿ ಕೊಂಡು ಬಂದಿದೆ. ಭಾರತದ ಸಾಂಸ್ಕೃತಿಕ ಮೆರುಗಿಗೆ ಪ್ರತಿಯೊಂದು ಧರ್ಮಗಳ ಕೊಡುಗೆಯೂ ಮಹತ್ವದ್ದಾಗಿದೆ. ಇಲ್ಲಿನ ಕಲೆ, ಸಾಹಿತ್ಯಗಳಿಗೆ ಪ್ರತಿಯೊಂದು ಧರ್ಮಗಳೂ ಸಮಾನ ಕೊಡುಗೆಯನ್ನು ನೀಡಿದೆ.
ಭಾರತದಂತೆ ವಿವಿಧ ಧರ್ಮಗಳ ಸಂಸ್ಕೃತಿಯ, ಭಾವೈಕ್ಯತೆಯ ಸಂಗಮಗಳು,  ಬೇರೆ ಯಾವ ದೇಶದ ಇತಿಹಾಸದಲ್ಲೂ ಎತ್ತಿ ತೋರಿಸಲು ಸಾಧ್ಯವಿಲ್ಲ. ನೈಸರ್ಗಿಕ ಖನಿಜಗಳಿಂದ ನಮ್ಮ ನೆಲವು ಯಾವ ರೀತಿಯಲ್ಲಿ ಸಂಪನ್ಮೂಲಗೊಂಡಿತ್ತೋ ಅದೇ ರೀತಿ ಇಲ್ಲಿನ ಹೃದಯಗಳೂ ಸಂಪನ್ನಗೊಂಡಿತ್ತು. ಧರ್ಮಗಳು ಅವರವರ ನಂಬಿಕೆಗಳಿಗಿರುವ ವೃತ್ತಾಂತವಾಗಿತ್ತೇ ಹೊರತು ಪ್ರೀತಿ-ಭಾತೃತ್ವಗಳ ನಡುವೆ ತಲೆ ಎತ್ತಿದ ಗೋಡೆಯಾಗಿರಲಿಲ್ಲ. ಆದ್ದರಿಂದ ಅವರು ಯಾವುದೇ ಸಂಧಿಗ್ಧತೆ ಸಂಭವಿಸಿದರೂ‌ ಧರ್ಮ, ಜಾತಿಗಳ ಚರಮ‌ ಸೀಮೆಗಳನ್ನು ಸೀಳಿ ಹೋರಾಟಕ್ಕೆ ಇಳಿಯುತ್ತಿದ್ದರು.‌ ದೇಶದ ಅಖಂಡತೆಗೆ ಹಾಗೂ ಭಧ್ರತೆಗೆ ಅವರ ಸಾಮರಸ್ಯವೇ ಬುನಾದಿಯಾಗಿತ್ತು.

ಭಾರತದ ಮೇಲೆ ಪರಕೀಯರ ಕಣ್ಣು ಬೀಳಲು ಪ್ರಧಾನ ಕಾರಣ ಇಲ್ಲಿನ ನೈಸರ್ಗಿಕ ಖನಿಜಗಳಾಗಿದ್ದರೂ, ಈ ನೆಲದ ಮನುಷ್ಯರ ಹೃದಯ ಸಂಪನ್ನತೆ, ಮುಗ್ಧತೆ, ಮತ್ತು ಅವರ ಸಂಸ್ಕಾರ ಸಂಸ್ಕೃತಿಗಳು ಪ್ರಧಾನ ಕಾರಣವೆಂಬುದರಲ್ಲಿ ಸಂದೇಹವಿಲ್ಲ. ಹಲವು ಧರ್ಮದ ಆಚಾರ ವಿಚಾರಗಳಿಂದ ವೈಭವಗೊಂಡ ಇಲ್ಲಿನ ಕಲೆ, ಚಿತ್ತಾರಗಳ ಹವಿಸ್ಸು ಪರಕೀಯರನ್ನು ಆಕರ್ಷಿಸಿತು. ಅದರಲ್ಲೂ ಬ್ರಿಟಿಷರು ವ್ಯಾಪಾರಕ್ಕೆಂದು ಬಂದು ಭಾರತದ ಮೇಲೆ ವಸಾಹತುಶಾಹಿತ್ವವನ್ನು ಸ್ಥಾಪಿಸುವ ಮೂಲಕ ಇಲ್ಲಿನ ರಾಜಾಡಳಿತವನ್ನು ಪಲ್ಲಟಗೊಳಿಸಿದರಲ್ಲದೆ ಪ್ರಜೆಗಳ ಮೇಲೆ ದಬ್ಬಾಳಿಕೆಯನ್ನು ನಡೆಸತೊಡಗಿದರು.
ಭಾರತದ ಮೇಲೆ ನಿರಂತರ ದಾಳಿ ನಡೆಸುವ ಮೂಲಕ ಇಲ್ಲಿನ ಪ್ರಜೆಗಳನ್ನು ನಿರ್ಣಾಮ ಮಾಡಲು ಪಣತೊಟ್ಟ ಬ್ರಿಟೀಷ್ ಸಂಹಾರ ಮನಸ್ಥಿತಿಯ ವಿರುದ್ದ ಭಾರತೀಯರು ಧರ್ಮ, ಜಾತಿಗಳನ್ನು ಮರೆತು ಹೋರಾಟಕ್ಕೆ ಇಳಿದರು.ನೆತ್ತರನ್ನು ಹರಿಸಿ ಭಾರತದ ಸಂರಕ್ಷಣೆಗೆ ಟೊಂಕಕಟ್ಟಿದರು. ಬಿಳಿಯರ ಕರಾಳ ಕೈ ಯಲ್ಲಿ ಬಂಧಿಯಾಗಿ ನೆನಗುದಿಗೆ ಬಿದ್ದಿದ್ದ ವ್ಯಕ್ತಿ ಸ್ವಾತಂತ್ರ್ಯವನ್ನು ಮರಳಿ ಪಡೆದಾಗ ಭಾರತದ ಮುಸ್ಲಿಂ ಇತಿಹಾಸಕ್ಕೆ ಎದುರಾದದ್ದು ಮಾತ್ರ ಘೋರ ವಂಚನೆಯಾಗಿತ್ತು. ಯಾಕೆಂದರೆ ಸ್ವಾತಂತ್ರ್ಯ ಸೆನಸಾಟದಲ್ಲಿ ಪ್ರಧಾನ ಪಾತ್ರ ವನ್ನು ವಹಿಸಿದ್ದ ಮುಸ್ಲಿಮರನ್ನು ಇತಿಹಾಸದಿಂದಲೇ ಎತ್ತಂಗಡಿ ಮಾಡಲಾಗಿತ್ತು. ಇತಿಹಾಸದ ಈ ಘೋರ ವಂಚನೆಯ ವಿರುದ್ದ ಎತ್ತಿದ ‘ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರ’ ಎಂಬ ಧ್ವನಿಯು ನಮ್ಮ ದೇಶದ ಇತಿಹಾಸಕಾರರ ಆಷಾಢಭೂತಿತನವನ್ನು ಕೆಣಕು(ಅಣಕ)ವುದಾಗಿದೆ. ಅಲ್ಲದೇ ಪ್ರಸ್ತುತ ಆಂಬೋಣವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಮತೀಯ ಸಾಮರಸ್ಯತೆಯನ್ನು ಪ್ರಶ್ನಿಸುತ್ತದೆ. ಪ್ರಜಾ ಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದ ಭಾರತದಲ್ಲಿ ಇದೇ ದೇಶಕ್ಕಾಗಿ ಪ್ರಾಣ ತರ್ಪಣವನ್ನು ಮಾಡಿದ ಮುಸ್ಲಿಮರನ್ನು ಚರಿತ್ರೆಯ ಸೀಮೆಯಿಂದ ಹೊರಗಿಡುವುದು ನಿಜಕ್ಕೂ ಈ ದೇಶದ ದುರಂತವೆನ್ನಲೇ ಬೇಕು.

ಸ್ವಾತಂತ್ರ್ಯ ಸಂಗ್ರಾಮದ ಸಂಧರ್ಭದಲ್ಲಿ ಈ ದೇಶವು ಯಾವುದೇ ಧರ್ಮದ ಸೊತ್ತಾಗಿರಲಿಲ್ಲ. ಈ ದೇಶದಿಂದ ಬಿಳಿ ನಾಯಿಗಳ ದಬ್ಬಾಳಿಕೆ ಅಂತ್ಯವಾಗಬೇಕಿದ್ದಿದ್ದರೆ ಎಲ್ಲಾ ಧರ್ಮೀಯರು ತಮ್ಮ ಧರ್ಮವನ್ನು ತೊಡೆದು ಹಾಕಿ ಸಂಗ್ರಾಮದಲ್ಲಿ ಅನಿವಾರ್ಯವಾಗಿ ತೊಡಗಲೇ ಬೇಕಿತ್ತು‌. ಅಂದು ಧರ್ಮದ ಹಂಗು ಇರಲಿಲ್ಲ. ಹೊರತು ಅವರಿಗಿದ್ದ ಏಕ ಧರ್ಮವು ಭಾರತೀಯತೆ ಮಾತ್ರವಾಗಿತ್ತು. ಅಪ್ಪಟ ಬ್ರಾಹ್ಮಣ ಗಾಂಧೀಜಿ, ಗಡ್ಡ ಟೋಪಿಯಿಟ್ಟ ಮೌಲಾನಾ ಆಜಾದ್ ರಂತಹಾ ಘಟಾನುಘಟಿಗಳೇ ಸಂಗ್ರಾಮದ ನಾಯಕತ್ವವನ್ನು ವಹಿಸಿದಾಗ ಧರ್ಮಗಳ ಗೋಡೆಗೆ ಆಸ್ಪದವೇ ಇರಲಿಲ್ಲ. ದೇಶದ ಆಸ್ಮಿತೆಯನ್ನು ಉಳಿಸುವ, ಪರಕೀಯ ಶಕ್ತಿಗಳನ್ನು ನಿಷ್ಕ್ರಿಯಗೊಳಿಸುವ ವಿಷಯದಲ್ಲಿ ಸಿಡಿದೆದ್ದು ದೇಶದ ಬಗ್ಗೆ ಕಾಳಜಿಯಿರುವ ನಾಗರಿಕ ವಲಯವಾಗಿತ್ತು.  ಏಕ‌ರಾಷ್ಟ್ರೀಯ ತಳಹದಿಯಲ್ಲಿ ನಡೆದ ಪ್ರಸ್ತುತ ಸಮರದಲ್ಲಿ ಪ್ರತಿಯೊಂದು ಧರ್ಮೀಯರೂ ತಮ್ಮ ಧಾರ್ಮಿಕ ಬಲವನ್ನು ಪ್ರದರ್ಶಿಸಲು ಹೋರಾಡದೆ, ಸಾರ್ವಭೌಮತೆಯ ಅಂತ್ಯಕ್ಕಾಗಿ ಮತ್ತು ತಾಯಿ ನೆಲದ ಮುಕ್ತಿಗಾಗಿ ಮಾತ್ರ ಹೋರಾಡಿದ್ದಾರೆ. ಇದು ಸ್ವಾತಂತ್ರ್ಯ ಸಂಗ್ರಾಮ ಚರಿತ್ರೆಯ ಹೃದಯಂಗಮ ಚಿತ್ರಣವಾಗಿದೆ.

ಪರಕೀಯರ ಕ್ರೂರ ಕೈಗಳು ಮೊದಲು ಕೆಣಕಿದ್ದೂ ಮುಸ್ಲಿಮರನ್ನಾಗಿತ್ತು. ಕಡಲ ದಾರಿಯಲ್ಲಿ ಬಂದ ವಾಸ್ಕೋ ಡಗಾಮ ಮತ್ತು ಆತನ ಕಿಂಕರರು ಮುನ್ನೂರಕ್ಕೂ ಅಧಿಕ ಹಜ್ ಯಾತ್ರಾರ್ಥಿಗಳನ್ನು ಕಡಲ ನಡುವೆಯೇ ಹಡಗಿಗೆ ಬೆಂಕಿ ಹಚ್ಚುವ ಮೂಲಕ ಕೊಂದು ಹಾಕಿದರು. ಆದರೆ ಇಂದು ಯಾವ ಪಠ್ಯ  ಪುಸ್ತಕದಲ್ಲೂ ಗಾಮಾ ನಡೆಸಿದ ಈ ರುಧ್ರ ನರಮೇಧವನ್ನು ಉಲ್ಲೇಖಿಸಿದ್ದನ್ನು ಕಾಣಲು ಸಾಧ್ಯವಿಲ್ಲ. ಹೊರತು ಆತ ಕಡಲು ದಾರಿ ಕಂಡು ಹಿಡಿದ ಜನಕನಾಗಿಯಷ್ಟೇ ಇತಿಹಾಸ ಆತನನ್ನು ಗುರುತಿಸುವುದು. ಆ ವೇಳೆಯಲ್ಲೇ ಸಾಮ್ರಾಜ್ಯ ಶಕ್ತಿಗಳ ಈ ರುಧ್ರ ದಾಳಿಯನ್ನು ಖಂಡಿಸಿ ಕೇರಳದ ವಿದ್ವಾಂಸರು ಹಲವು ಗ್ರಂಥಗಳನ್ನೂ ರಚಿಸಿದ್ದರು. ಅದರಲ್ಲಿ ‘ತುಹ್ಫತುಲ್‌ ಮುಜಾಹಿದ್’ ಎಂಬ ಅರಬಿ ಗ್ರಂಥವು ಪರಕೀಯರ ದಾಳಿಯನ್ನು ಖಂಡಿಸಿ ವಿರಚಿತಗೊಂಡ ಮೊದಲ ಕೃತಿಯಾಗಿತ್ತು.

ಆದರೆ ಇಂದು ವರ್ತಮಾನ ಜಗತ್ತಿಗೆ  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರು ವಹಿಸಿದ್ದ  ಪಾತ್ರವನ್ನು ಹೇಳಬೇಕಾದ ಪರಿಸ್ಥಿತಿ ಎದುರಾಗಿರುವುದು ನಿಜಕ್ಕೂ ವಿಪರ್ಯಾಸವೆನ್ನಲೇ ಬೇಕು. ನಿಜವಾಗಿ ಹೇಳುವುದಾದರೆ ಸ್ವಾತಂತ್ರ್ಯ ಹೋರಾಟಕ್ಕೆ ಮೊದಲನೆಯದಾಗಿ ಇಳಿದವರು ಮುಸ್ಲಿಮರಾಗಿದ್ದಾರೆ.1757ನ ಪ್ಲಾಸೀ ಕದನದಿಂದ 1857ರ ಸಿಪಾಯಿ ದಂಗೆಯ ತನಕದ ಹೋರಾಟವು ಮುಸ್ಲಿಮರಿಂದಲೇ ಶುರುವಾಯಿತೆಂದರೆ ಅತಿಶಯವಿಲ್ಲ. ಕಲ್ಕತ್ತಾದಲ್ಲಿ‌ ಬ್ರಿಟಿಷ್ ಆಧಿಪತ್ಯ ನಡೆಯುತ್ತದೆಂದು ಅರಿತ ಬಂಗಾಲದ ನವಾಬ ಸಿರಾಜುದ್ದೌಲ ಪ್ಲಾಸೀ ಕದನದ ಮೂಲಕ ಅವರನ್ನು ದಂಗುಬಡಿದ. ಇದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಆರಂಭವಾಗಿತ್ತು. ಹೈದರ್ ಅಲಿ, ಟಿಪ್ಪೂ ಕೂಡಾ ಬ್ರಿಟಿಷ್ ಚೇಲಾಗಳ ವಿರುದ್ದ ಸೆಣೆಸಾಡಿ ಧೀರ ಮರಣ ಹೊಂದಿದ ರಾಜರುಗಳಾಗಿದ್ದಾರೆ .ದೇಶಕ್ಕಾಗಿ ಬ್ರಿಟಿಷ್ ಬಿಳಿ ಪಿಪಾಸುಗಳ ಕೈಯಲ್ಲಿ ತನ್ನ ಮಕ್ಕಳನ್ನೂ ಒತ್ತೆಯಿಟ್ಟ ಟಿಪ್ಪುವಿನ ದೇಶ ಪ್ರೇಮವು ಪ್ರಸ್ತುತ ಸನ್ನಿವೇಶದಲ್ಲಿ ಬಹಿರ್ದೆಸೆಗೆ ಬಲಿಯಾಗಿರುವುದು ನಮ್ಮ ದೇಶದ ದುರಂತ ಎಂದೇ ಹೇಳಬೇಕು.

ಅಲ್ಲದೆ ಹಲವಾರು ವಿದ್ವಾಂಸರು, ಉಲೆಮಾಗಳು ಸ್ವಾತಂತ್ರ್ಯ ಸಮರದಲ್ಲಿ ಸ್ವಯಂ ಪಾಲ್ಗೊಂಡು ಜನರನ್ನೂ ಪ್ರೇರೇಪಿಸಿದ್ದಾರೆ. ಶಾಹ್ ವಲಿಯುದ್ದಹ್ಲವೀ, ಮೌಲಾನ ಹುಸೈನ್ ಮುಹಮ್ಮದ್ ಮದನೀ, ಅಹ್ಮದ್ ಇರ್ಫಾನ್ ಬರೇಲ್ವಿ ಮುಂತಾದ ಅತಿರಥ ಮಹಾರಥ ವಿದ್ವಾಂಸರು ‘ಮುಸ್ಲಿಮರು‌ ಕಡ್ಡಾಯವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿಯಬೇಕೆಂಬ’ ಅಧಿಕೃತ ಫತ್ವಾವನ್ನೂ ಹೊರಡಿಸಿದರು.  ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ವಾಗಿ ಭಾಗವಹಿಸಿದ್ದು ಮತ್ತು ಸಾರಥ್ಯ ವಹಿಸಿದ್ದು ಉಲಮಾ ಸಂಘಟನೆಯಾಗಿತ್ತು. ಇತ್ತ ದಕ್ಷಿಣ ಭಾರತದ ಪ್ರಸಿದ್ದ ಮುಸ್ಲಿಂ ಧಾರ್ಮಿಕ ವಿದ್ಯಾಲಯವಾಗಿದ್ದ ಬಾಕಿಯಾತ್ ನಲ್ಲಿ ವಿದ್ಯಾರ್ಜನೆ ಗೈಯ್ಯುತ್ತಿದ್ದ ಯುವ ವಿದ್ವಾಂಸರು ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯ ಸೇನಾನಿಗಳಾಗಿ ಪಾಲ್ಗೊಂಡಿದ್ದರು.

ಉತ್ತರ ಭಾರತದ ವಿದ್ವಾಂಸರು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಎಷ್ಟರ ಮಟ್ಟಿಗೆ ಹೇವರಿಕೆಯನ್ನು ಹೊಂದಿದವರಾಗಿದ್ದರೆಂದರೆ ಬ್ರಿಟಿಷರು ಧರಿಸುತ್ತಿದ್ದ ಕಾಲರ್ ಇರುವ ಶರ್ಟನ್ನೂ ಕೂಡಾ ಅವರು ಧರಿಸುತ್ತಿರಲಿಲ್ಲ.

ಸುಭಾಷ್ ಚಂದ್ರ ಬೋಸರು ಆರಂಭಿಸಿದ ಆಜಾದ್ ಹಿಂದ್ ಎಂಬ ಕ್ರಾಂತಿಕಾರಿ ಕಾರ್ಯಚಟುವಟಿಕೆ ಗಳಲ್ಲಿ ಮುಸ್ಲಿಮರ ಪಾತ್ರವು ಗಣನೀಯವಾಗಿತ್ತು. ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಮುಸ್ಲಿಮರು, ಚೌರಾಚೌರಿಯವರ ಹಿಂಸಕ ಘಟನೆಗಳಿಂದ ವಿಷಣ್ಣರಾಗಿ ಅದರಿಂದ ಹಿಂಜರಿದರು.

ಅಲ್ಲದೆ ಹಲವಾರು ಕ್ರಾಂತಿಕಾರಿಗಳು ಕೂಡಾ ಮುಸ್ಲಿಂ ಪಾಳಯದಲ್ಲಿದ್ದರು. ಅಬ್ದುಲ್ ಕಲಾಂ ಆಜಾದ್, ಆಬಿದುಲ್ಲಾ, ಪ್ರೋ ಬರಕತುಲ್ಲಾ, ಮೌಲಾನಾ ಅನ್ವರ್ ಷಾ ಕಾಶ್ಮೀರಿ ಮುಂತಾದವರ ಸಮರವು ಬ್ರಿಟಿಷ್ ಪಾಳಯದಲ್ಲಿ ಒಡಬಾಗ್ನಿಯಾಗಿ ಪರಿಣಮಿಸಿತ್ತು.

ಇಷ್ಟೆಲ್ಲಾ ಐತಿಹ್ಯ ಸಾಕ್ಷಾಧಾರಗಳ ಜೀವಂತಿಕೆಯನ್ನು ನಿಷ್ಕ್ರಿಯಗೊಳಿಸಿ ಇತಿಹಾಸದ ಮುಖ್ಯವಾಹಿಣಿಯಿಂದ ಮುಸ್ಲಿಮರನ್ನು ಹೊರಗಿಡುವ ಪ್ರಯತ್ನ ನಡೆದರ ಹಿಂದೆ ಅಂದಿನ ರಾಜಕೀಯ ಬೆಳವಣಿಗೆ ಪ್ರಧಾನ ಕಾರಣವೆಂಬುದನ್ನು ನಾವು ಅರಿಯದೇ ಹೋಗಿದ್ದೇವೆ.

ಕೆಲವು ಪಾನ್ ಇಸ್ಲಾಮಿ ನಾಯಕರು ಕಾಬೂಲಿನಲ್ಲಿ ನಿಶ್ಕಿಶಾತ್ ಇಸ್ಲಾಮೀ ರಾಜ್ಯವನ್ನು ಸ್ಥಾಪಿಸಲು ಸಿದ್ದರಾದಾಗ ಮಹೇಂದ್ರ ಪ್ರತಾಪರು    ಅಧ್ಯಕ್ಷರೂ, ಡಾ| ಮಾಥುರ್ ಸಿಂಹ ಕ್ಯಾಬಿನೆಟ್ ಮಂತ್ರಿಯಾಗಿದ್ದರೆಂಬುದು ಗಮನಾರ್ಹ. ಅಲ್ಲದೆ ಇದನ್ನು ಮುಸ್ಲಿಂ ಮೇಧಾವಿಗಳೂ, ವಿದ್ವಾಂಸರೂ ವಿರೋಧಿಸಿದ್ದರು. ಇದಕ್ಕೆ ಸಹಜವಾಗಿಯೇ ಹಿಂದುಗಳು ಅಸಮಾಧಾನವನ್ನು ಪ್ರಕಟಿಸಿದ್ದರು. ಆದರೆ ನಂತರ ನಡೆದ ಹಿಂದೂ-ಮುಸ್ಲಿಂ ದಂಗೆಯನ್ನು ಖಿಲಾಫತ್ ಆಂದೋಲನದ ಪರಿಣಾಮ ಎನ್ನುವುದು ಐತಿಹಾಸಿಕ ಧೃಷ್ಟಿಯಲ್ಲಿ ಔಚಿತ್ಯವೆನಿಸುವುದಿಲ್ಲ. ಈ ಖಿಲಾಫತ್ ಆಂದೋಲನದ ಬಿಸಿ ತಟ್ಟಿದ ಬ್ರಿಟಿಷರು ಮುಸ್ಲಿಮರು ತಮ್ಮ ಧರ್ಮವನ್ನು ಬಲ ಪಡಿಸುತ್ತಿದ್ದಾರೆಂದೂ, ದಂಗೆಯ ಮೂಲಕ ಹಿಂದುಗಳ ವಿರುದ್ದವೇ ತಿರುಗಿ ಬಿದ್ದಿದ್ದಾರೆಂಬ ವದಂತಿಯನ್ನು ಹರಡುವ ಮೂಲಕ ಹಿಂದು-ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸವನ್ನು ಮಾಡಿದರು.
ಆದರೆ ಖಿಲಾಫತ್ ಆಂದೋಲನ ಆರಂಭವಾಗುವ ಮುನ್ನವೇ ಬಿಹಾರದಲ್ಲಿ ಅತ್ಯಂತ ಭೀಕರ ದಂಗೆಗಳು ನಡೆದಿದ್ದವು. ಶುದ್ದಿ ಆಂದೋಲನದ ಮೂಲ ಪ್ರೇರಣೆಯ ನಿರ್ಧಾರಗಳು ಆಘಾತಕಾರಿಯಾಗಿದ್ದವು. ಅಲ್ಲದೆ ಲಾರ್ಡ್ ರೀಡಿಂಗ್ ಭಾರತಕ್ಕೆ ಬಂದ ನಂತರ ಉಧ್ಭವಿಸಿದ ಪರಿಸ್ಥಿತಿಗಳ ಅವಲೋಕನ ಬಹಳ ಮಹತ್ವದ್ದಾಗಿದೆ.

ಸ್ವರಾಜ್‌ವಾದಿ ಮೋತಿಲಾಲ್ ನೆಹರು ಹಾಗೂ ಉದಾರವಾದಿ ಮಾಲವೀಯ ಮತ್ತು ಚಿಂತಾಮಣಿಯವರ ರಾಜಕೀಯ ಬೆಳವಣಿಗೆ ಮತ್ತು ಚುನಾವಣಾ ಕಿತ್ತಾಟಗಳು ಹಿಂದೂ-ಮುಸ್ಲಿಮರ ನಡುವೆ ಧ್ವೇಷ, ವೈಮನಸ್ಸು ಹುಟ್ಟಲು ಕಾರಣವಾಯಿತು. ಆ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟವು ಧರ್ಮಗಳ ಪೈಪೋಟಿಯಾಗಿ ಮಾರ್ಪಟ್ಟಿತಲ್ಲದೆ ದೇಶದ ಸಾಮರಸ್ಯ ಕ್ಕೆ ಕೊಡಲಿಯೇಟನ್ನೂ ನೀಡುವ ಮೂಲಕ ಭಿನ್ನತೆಯನ್ನು ಸೃಷ್ಟಿಸಿತು. ಈ ವಿದ್ಯಾಮಾನಗಳನ್ನು 1923ರ ನಂತರದ ಗೃಹ ಇಲಾಖೆಯ ಕಡತಗಳು ಪುಷ್ಟೀಕರಿಸುತ್ತದೆ. ಇದರಿಂದ ಲಾರ್ಡ್ ರೀಡಿಂಗ್‌ನ ಕುತಂತ್ರವು ಬಯಲಾಗುತ್ತದೆ. ಅಲ್ಲದೆ ಪಂಜಾಬ್‌ನಲ್ಲಿ ಭೂ ಸುಧಾರಣೆಯ ಹೆಸರಲ್ಲಿ ಹಿಂದೂ-ಮುಸ್ಲಿಮರೆಡೆಯಲ್ಲಿ ವಿಧ್ವೇಷದ ಬೀಜವನ್ನು ಬಿತ್ತುವಲ್ಲಿ ಅವರು ಯಶಸ್ವಿಯಾದರು.

ಇಷ್ಟೆಲ್ಲಾ ಐತಿಹ್ಯ ವಾಸ್ತವಗಳನ್ನು ಕೇವಲ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ತಿದ್ದುಪಡಿ ನಡೆಸುವುದು ನಿಜಕ್ಕೂ ಸತ್ಯವನ್ನು ನಡೆಸುವ ಕಗ್ಗೊಲೆಯಾಗಿದೆ.
ಬ್ರಿಟಿಷರಿಂದ ಭಾರತಕ್ಕೆ ಹಾದು ಬಂದದ್ದು ಕೇವಲ ಅವರ ಸರಕು,ಪಾಶ್ಚಿಮಾತ್ಯ ಸಂಸ್ಕೃತಿಗಳು ಮಾತ್ರವಲ್ಲ. ಸಂಹಾರಾತ್ಮಕ ವಕ್ರ ಮನಸ್ಥಿತಿಗಳೂ‌ ಹಾದು ಬಂದವು. ಆದ್ದರಿಂದಲೇ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಮೇಲೆ ಸಂಹಾರಾತ್ಮಕ ಕೈಗಳ ತಿದ್ದುಪಡಿ ನಡೆದವು. ‌ವಾಸ್ತವದ ಮೇಲೆ ಕತ್ತರಿ ಪ್ರಯೋಗವಾದವು. ಪರಿಣಾಮ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಸಮರಕ್ಕಾಗಿ ಪ್ರಾಣ ತ್ಯಾಗ ಮಾಡಿ ಮಡಿದ ಮುಸ್ಲಿಮರು ಖಳನಾಯಕರಾಗ‌ಬೇಕಾಯಿತು. ವರ್ತಮಾನದ ವಿದ್ಯಾಮಾನಗಳಲ್ಲಿ ಐತಿಹ್ಯ ವಿಲನ್ ಗಳಾಗಿ ಗುರುತಿಸಿಕೊಳ್ಳಬೇಕಾಯಿತು.

ದೇಶ ವಿಭಜನೆಯ ವಿಚಾರದಲ್ಲಿ ಮುಸ್ಲಿಮರ ಮೇಲೆ ದೇಶ ದ್ರೋಹದ ಮುದ್ರೆಯನ್ನು ಒತ್ತುವ ಪ್ರಯತ್ನಗಳು ಇಂದು ಕೂಡಾ ಅಜಸ್ರವಾಗಿ ನಡೆಯುತ್ತಿದೆ. ಆದರೆ ಗಾಂಧೀಜಿ ಮತ್ತು ನೆಹರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ ಬೇಕೆಂಬ ಬೇಡಿಕೆಗೆ ಸಮ್ಮತಿಸಿದರೂ, ಗಡಿನಾಡಿನ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್, ಮೌಲಾನಾ ಅಬ್ದುಲ್ ಕಲಾಂ ಆಜಾದರು ಖಂಡತುಂಡವಾಗಿ ವಿರೋಧಿಸಿದ್ದರು.

ಹೀಗೆ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವರಾಗಿದ್ದಾರೆ ಭಾರತೀಯ ಮುಸ್ಲಿಮರು. ಆದರೆ ಸ್ವತಂತ್ರ ದೇಶದ ಪ್ರಜೆಗಳೆನಿಸಿಕೊಂಡ ನಾವು  ಇತಿಹಾಸದ ಅವಲಂಬನೆಯಲ್ಲಿ ಇನ್ನೂ ಆಂಗ್ಲರ ಗುಲಾಮರಾಗಿದ್ದೇವೆ. ಆದ್ದರಿಂದಲೇ ನೈಜ್ಯ ಇತಿಹಾಸದ ಮೇಲೆ ಕತ್ತರಿ ಪ್ರಯೋಗ ನಡೆಯುತ್ತಿದೆ.  ಇದುವೇ ದೇಶದ ಸಾಮರಸ್ಯತೆಯ ಅತಂತ್ರಕ್ಕಿರುವ ಮೂಲ ಕಾರಣ. ಆದ್ದರಿಂದ ಇನ್ನಾದರೂ ಇತಿಹಾಸದಲ್ಲಿನ ಧೃಷ್ಟಿಕೋನಗಳು ಬದಲಾಗಬೇಕಿದೆ. ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯರಾಗಿದ್ದ ಎರಡು ಕೋಮುಗಳನ್ನು ತುಚ್ಚೀಕರಣ ಮತ್ತು ತುಷ್ಟೀಕರಣ ನಡೆಸುವ ಮೂಲಕ ಭಿನ್ನತೆಯ ಬೀಜವನ್ನು ಬಿತ್ತುವ ಹೇಯ ಪ್ರವೃತ್ತಿಗೆ ಅಂಕುಶ ಹಾಕಬೇಕಿದೆ. ಇದು ಇತಿಹಾಸದ ಅತ್ಯಾಚಾರ ಎಂಬುದರಲ್ಲಿ ಅನುಮಾನವಿಲ್ಲ.

-ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

Share this on:
error: Content is protected !!