Latest Posts

ಸಾಮ್ರಾಜ್ಯ ಕಳೆದುಕೊಂಡ ಸುಲ್ತಾನ್- ಅನ್ಸಾರ್ ತಂಬಿನಮಕ್ಕಿ

ಚೆಂಗೀಸ್‌ಖಾನ್ ಒಬ್ಬ ವಸ್ತ್ರ ಮೋಹಿಯಾಗಿದ್ದ. ಉನ್ನತ ದರ್ಜೆಯ, ವಿಶಿಷ್ಟ ವಿನ್ಯಾಸಗಳ ವಸ್ತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ. ಅಂದು ಇಂಥ ಪ್ರತಿಷ್ಟಿತ ವಸ್ತ್ರಗಳ ಮಾರಾಟ ಹಾಗೂ ಉತ್ಪಾದನೆ ನಡೆಯುತ್ತಿದ್ದುದು ಮುಸ್ಲಿಂ ರಾಷ್ಟ್ರಗಳಲ್ಲಾಗಿತ್ತು. ವಸ್ತ್ರ ಖರೀದಿಗಾಗಿ ಚೆಂಘೀಸ್ ಖಾನ್ ತನ್ನ ಬಂಟರನ್ನು ಖುವಾರಿಸಿಂಗೆ ಕಳುಹಿಸಿದ್ದ. ಆದರೆ ಮಾಂಗೋಲಿಯನ್ ಮೂಲದ ಅಪರಿಚಿತ ವ್ಯಕ್ತಿಗಳನ್ನು ಕಂಡ ಸೈನಿಕರು ಅವರೇನೋ ಚೆಂಗೀಸ್‌ಖಾನನಿಗೆ ಗೂಢಾಚಾರಿಕೆ ನಡೆಸುತ್ತಿದ್ದಾರೆಂದು ಬಗೆದು ಬಂಧಿಸಿ ಸುಲ್ತಾನ್‌ರ ಮುಂದೆ ಹಾಜರು ಪಡಿಸಿದರು. ಪೂರ್ವಾಪರ ವಿಚಾರಿಸದ ಸುಲ್ತಾನ್ ದೇಶದ್ರೋಹದ ಹೆಸರಲ್ಲಿ ಅವರನ್ನು ವಧಿಸಿಬಿಟ್ಟರು. ಚೀನಾದಲ್ಲಿ ಯುದ್ದ ನಿರತನಾಗಿದ್ದ ಚೆಂಘೀಸ್‌ ಸುದ್ದಿ ತಿಳಿದು ಕನಲಿ ಹೋದ. ತಕ್ಷಣ ಆ ಯುದ್ದವನ್ನು ಅರ್ಧಕ್ಕೆ ನಿಲ್ಲಿಸಿ ತನ್ನ ಬೃಹತ್ ಸೇನೆಯೊಂದಿಗೆ ಮುಸ್ಲಿಂ ರಾಷ್ಟ್ರಗಳೊಳಗೆ ದಾಳಿ ನಡೆಸಿದ. ಆ ಆಕ್ರಮಣಗಳು ಸರಿಸುಮಾರು ಮುಂದಿನ ನೂರು ವರ್ಷಗಳ ಕಾಲ ಮುಂದುವರೆದವು. ಹಾಗೆ ನುಗ್ಗಿದ ಮಾಂಗೋಲಿಯನ್ ಸೇನೆ ಬಳಿಕ ಮರಳಿ ಹೋಗಲೇ ಇಲ್ಲ. ಒಂದೊಂದೇ ರಾಷ್ಟ್ರಗಳನ್ನು ತಮ್ಮ ಕಪಿಮುಷ್ಟಿಯಲ್ಲಿರಿಸುತ್ತಾ ಮುಂದುವರೆದರು.

ಸಮರ್ಖಂದ್‌ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಚೆಂಗೀಸ್‌ಖಾನ್ ಆ ನಗರದ ವೈಭವ, ವೈಯ್ಯಾರಕ್ಕೆ ಮಾರು ಹೋದ. ಆ ನಾಡನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಬಗ್ಗೆ ಯೋಚಿಸಿದ. ಅಲ್ಲಿನ ದೊರೆಯಾಗಿದ್ದವರು ಮುಹಮ್ಮದ್ ಖವಾರಿಸಿಂ ಷಾ. ತನ್ನ ಬಂಟರ ಕೊಲೆಗೆ ಮುಯ್ಯಿ ಎಂಬಂತೆ ಅವರನ್ನು ಕೊಲ್ಲಲು ತೀರ್ಮಾನಿಸಿದ‌ ಚೆಂಗೀಸ್. ಆತ ಎಷ್ಟರ ಮಟ್ಟಿಗೆ ನಿರ್ದಯಿಯೋ ಆತನ ನಿರ್ಧಾರವೂ ಅಷ್ಟೇ ಉಗ್ರ ರೂಪದ್ದಾಗಿತ್ತು. ಅದಕ್ಕಾಗಿ ಇಪ್ಪತ್ತು ಸಾವಿರ ಸೈನಿಕರನ್ನೊಳಗೊಂಡ ಬೃಹತ್ ಸೇನೆಯೊಂದನ್ನು ರಾಜಧಾನಿ ಓರ್ಜಿಂಟಗೆ ಕಳುಹಿಸಿದ.

ಖವಾರಿಝ್ಮಿಗಳ ರಾಜಧಾನಿಯಾದ ಓರ್ಜಿಂಟ ನಗರವು ಜೈಹೂನ್ ನದಿಯ ಪಶ್ಚಿಮ ಭಾಗಕ್ಕಿತ್ತು. ಮಾಂಗೋಲನ್ನರು ಈ ನದಿಯ ಪೂರ್ವ ಭಾಗದಿಂದ ದಾಳಿ ನಡೆಸಿದರು. ಆ ಬೃಹತ್ ಸರೋವರನ್ನು ದಾಟುವ ಹಡಗು ಅಥವಾ ಇತರ ಪರಿಕರಗಳು ಮಾಂಗೋಲರ ಬಳಿ ಇರಲಿಲ್ಲ. ಆದ್ದರಿಂದ ಮಾಂಗೋಲಿಯನ್ನರಿಂದ ಓರ್ಜಿಂಟ ನಗರ ಸುರಕ್ಷಿತವೆಂದು ಅಲ್ಲಿ ಮುಸ್ಲಿಮರು ನೆಮ್ಮದಿಯಿಂದಿದ್ದರು. ಮುಂದೆ ಬಂದೆರಗಲಿದ್ದ ಘೋರ ಆಕ್ರಮಣವನ್ನು ಅವರು ನಿರೀಕ್ಷಿಸಲೇ ಇಲ್ಲ‌. ಆದರೆ ಯುದ್ದ, ದಾಳಿ, ಆಕ್ರಮಣದಲ್ಲಿ ಪ್ರಾವೀಣ್ಯರಾಗಿದ್ದ ಮಾಂಗೋಲಿಯನ್ ಪಡೆಗೆ ಇದೇನೂ ದೊಡ್ಡ ಸಮಸ್ಯೆಯಾಗಿರಲಿಲ್ಲ. ಮರಗಳನ್ನು ಜೋಡಿಸಿ ಕಟ್ಟಿ ಸಣ್ಣ ಸಣ್ಣ ತೆಪ್ಪಗಳನ್ನಾಗಿ ಮಾಡಿ ಆಯುಧಗಳೊಂದಿಗೆ ಜೈಹೂನ್ ನದಿಯನ್ನು ದಾಟಿಯೇ ಬಿಟ್ಟರು. ಓರ್ಜಿಂಟ ನಗರದಲ್ಲಿ, ಖವಾರಿಝಿಂ ಷಾರ ಅರಮನೆಯನ್ನು ಮುತ್ತಿಗೆ ಹಾಕಲು ಮುಂದೆ ಸಾಗಿದರು.

ಸುದ್ದಿ ತಿಳಿದ ಸುಲ್ತಾನ್ ಮುಹಮ್ಮದ್ ಖವಾರಿಝಿಂ ಷಾ ಪ್ರಾಣ ಸಂಕಟಕ್ಕೊಳಗಾದರು. ಈಗ ಅವರ ಮುಂದಿದ್ದ ಏಕೈಕ ದಾರಿಯೆಂದರೆ ಪರಾರಿಯಾಗುವುದು. ಅಷ್ಟರ ಮಟ್ಟಿಗೆ ಪರಿಸ್ಥಿತಿ ಪ್ರತಿಕೂಲವಾಗಿತ್ತು. ಸಮರ್ಥವಾದ ಸೇನೆಯಿರಲಿಲ್ಲ. ಸುಸಜ್ಜಿತ ಶಸ್ತ್ರಗಳಿರಲಿಲ್ಲ. ಹತ್ತಿರದ ಸುಲ್ತಾನರ ನೆರವನ್ನೂ ನಿರೀಕ್ಷಿಸುವಂತಿರಲಿಲ್ಲ. ಆ ಮಟ್ಟಿಗೆ ಅವರ ಕಚ್ಚಾಟ, ಗುಂಪುಗಾರಿಕೆ, ಭಿನ್ನಮತ ಪರಾಕಾಷ್ಠೆಗೇರಿತ್ತು. ಇಂಥ ಸಂಧಿಗ್ಧ ಸಮಯದಲ್ಲಿ ಮಾಂಗೋಲಿಯನ್ನರಿಂದ ತಪ್ಪಿಸಿ ಪಾರಾಗಿ, ಸುರಕ್ಷಿತ ಸ್ಥಳದಲ್ಲಿ ತಂಗಲು ಸುಲ್ತಾನ್ ತೀರ್ಮಾನಿಸಿದರು.ತನ್ನ ಕುಟುಂಬ ಹಾಗೂ ಅಂಗರಕ್ಷಕರೊಂದಿಗೆ ನೈಸಾಬೂರ್‌ಗೆ ಹೊರಟರು.

ಆದರೆ ಮಂಗೋಲನ್ನರು ಷಾರ ಬೆನ್ನು ಬಿದ್ದರು. ವಿಷಯ ತಿಳಿದ ಸುಲ್ತಾನ್ ಷಾ ನೈಸಾಬೂರ್‌ನಿಂದ ನೇರವಾಗಿ ಮಾಸಿಂತಾನ್ ನಗರಕ್ಕೆ ಪಲಾಯಣಗೈದರು. ಅಲ್ಲಿಗೂ ಮಾಂಗೋಲನ್ನರು ತನ್ನನ್ನು ಅಟ್ಟಿಸುತ್ತಾ ಬರುತ್ತಿದ್ದಾರೆಂದು ತಿಳಿದ ಷಾ ರಯ್ಯ್ ಪಟ್ಟಣಕ್ಕೂ ಆ ಬಳಿಕ ಹಮದಾನ್‌ಗೂ ಪಯಣ ಬೆಳೆಸಿದರು. ಷಾರನ್ನು ಹಿಂಬಾಲಿಸುವ ದಾರಿಯುದ್ದಕ್ಕೂ ಮಾಂಗೋಲನ್ನರು ಪಾಶವೀ ಕೃತ್ಯಗಳನ್ನು ನಡೆಸಿದರು. ಮಸೀದಿ, ವಿದ್ಯಾಲಯಗಳನ್ನು ಧ್ವಂಸಗೈದರು. ಮನೆ, ಮಠಗಳನ್ನು ಮನಸೋಇಚ್ಚೆ ಲೂಟಿಗೈದರು. ಜನರನ್ನು ಬರ್ಬರವಾಗಿ ಹತ್ಯೆಗೈದರು. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರು. ಒಟ್ಟಿನಲ್ಲಿ ನಾಡಿನುದ್ದಕ್ಕೂ ಪಲಾಯನಗೈಯ್ಯುತ್ತಾ ಪರೋಕ್ಷವಾಗಿ ಸುಲ್ತಾನ್ ಆ ನಾಡನ್ನು ನಾಶ ಪಡಿಸುತ್ತಿದ್ದರು.

ಮುಹಮ್ಮದ್ ಷಾ ಪುನಃ ಮಾಸಿಂತಾನ್‌ಗೆ ತಲುಪಿದರು. ಮುಂದೊತ್ತಿ ಬರುತ್ತಿರುವ ಸೈನ್ಯದ ಭೀತಿಯಿಂದಾಗಿ ಅಲ್ಲೂ ನಿಲ್ಲಲಾಗದ ಪರಿಸ್ಥಿತಿ ಎದುರಾಯಿತು. ಕೊನೆಗೆ ಗತ್ಯಂತರವಿಲ್ಲದೆ ಕಾಪ್ಸ್ಟೀನಿಯನ್ ಕಡಲ ತೀರವಾಗಿ ತ್ವಬರಿಸ್ಥಾನ್‌ಗೆ ಪಯಣ ಬೆಳೆಸಲು ತೀರ್ಮಾನಿಸಿದರು. ತಾಕತಾಳೀಯವೆಂಬಂತೆ ಅಲ್ಲಿ ದೋಣಿಯೊಂದನ್ನು ಲಂಗರು ಹಾಕಲಾಗಿತ್ತು. ಅದರಲ್ಲಿ ಹತ್ತಿದ ಸುಲ್ತಾನ್ ಪಲಾಯನಗೈದರು. ಮಾಂಗೋಲರು ಕಡಲು ತೀರಕ್ಕೆ ತಲುಪಿದಾಗ ಸುಲ್ತಾನ್‌ರನ್ನು ಹೊತ್ತ ದೋಣಿ ತೀರ ಬಿಟ್ಟು ದೂರಕ್ಕೆ ತಲುಪಿತ್ತು. ಮಾಂಗೋಲನ್ನರಲ್ಲಿ ಸಮುದ್ರವನ್ನು ಹಾಯುವ ದೋಣಿ, ಹಡಗು ಯಾವುದೂ ಇರಲಿಲ್ಲ. ಆದ್ದರಿಂದ ಕೇವಲ ಅಂತರದಲ್ಲಿ ಅವರ ಕೈಯಿಂದ ಸುಲ್ತಾನ್ ಪಾರಾದರು.

ಇರಾಖ್‌ನಿಂದ ಪಾಕಿಸ್ತಾನದ ತನಕ ಹಬ್ಬಿಕೊಂಡಿದ್ದ ವಿಶಾಲ ಭೂಪ್ರದೇಶದ ಚಕ್ರವರ್ತಿಯಾಗಿದ್ದರು ಮುಹಮ್ಮದ್ ಷಾ. ಅದರೆ ಅವರ ಅಧಿಕಾರ ಮೋಹ, ಸಾಮ್ರಾಜ್ಯ ವಿಸ್ತರಣೆಯ ತಹತಹಿಕೆ, ಪರಸ್ಪರ ಕಚ್ಚಾಟ, ಪ್ರಜೆಗಳ ಕುರಿತಾದ ಅನಾಸ್ಥೆಗಳಿಂದಾಗಿ ಸುಸಜ್ಜಿತ ಸೇನೆಯನ್ನು ಕಟ್ಟಿ ಬಾಹ್ಯಶತ್ರುಗಳನ್ನು ಮಟ್ಟಹಾಕುವಲ್ಲಿ ವಿಫಲರಾದರು. ಸುಲ್ತಾನ್‌ರನ್ನು ಸಾಗಿಸಿದ ದೋಣಿ ಕಾಪ್ಸ್ಟಿಯನ್ ಸಾಗರದ ಆಬ್ಸಕೂನ್ ದ್ವೀಪವನ್ನು ಸೇರಿಕೊಂಡಿತು. ಅಂಗರಕ್ಷರನ್ನೂ, ಪರಿವಾರವನ್ನೂ, ಪ್ರತಾಪ-ಪ್ರೌಢಿಯೆಲ್ಲವನ್ನೂ ಕಳೆದು ಕೊಂಡ ಸುಲ್ತಾನ್ ಆ ವಿಕ್ಷಿಪ್ತ ದ್ವೀಪದಲ್ಲಿ ಅಜ್ಞಾತವಾಗಿ ಉಳಿದರು. ಕೊನೆಗೆ ಹಸಿವು ತಾಳಲಾರದೆ ಹಿ.617 ಕ್ರಿ.ಶ 1220ರಲ್ಲಿ ಬದುಕು ಮುಗಿಸಿದರು. ದೈತ್ಯಸಾಮ್ರಾಜ್ಯವೊಂದರ ಅಧಿಪತಿ ತನ್ನ ಅಂತ್ಯ ಯಾತ್ರೆಯ ವೇಳೆ ಅಕ್ಷರಸಃ ಅನಾಥವಾಗಿ ಬಿಟ್ಟಿದ್ದರು.

-ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

Share this on:
error: Content is protected !!