Latest Posts

ಪ್ರತಿ ಮನಸ್ಸಿನ ಭಾವನೆಗಳ ಛಾಯೆ ‘ಪ್ರತಿಬಿಂಬ’

-🖋️ ಶರೀನಾ ಸಲೀಮ್

ಸಂಚಿಕೆ – 1

ಎಲ್ಲೆಲ್ಲೂ ನಿಶ್ಯಬ್ದ ಮೌನ… ನೀರವತೆ ತುಂಬಿ ತುಳುಕಿತ್ತು. ಅದೋ ಆಗಲೇ ಕೇಳಿ ಬಂತು ಆ ಶಬ್ಧ.

“ಇನ್ನು ಕೇವಲ ಹದಿನೈದು ನಿಮಿಷ ಮಾತ್ರವೇ ಬಾಕಿ ಇದೆ..” ಇದನ್ನು ಕೇಳಿದ್ದೇ ತಡ ವಿದ್ಯಾರ್ಥಿಗಳು ತರಾತುರಿಯಲ್ಲಿ ಬರೆಯಲು ಪ್ರಾರಂಭಿಸಿದರು. ಕೆಲವರು ಇನ್ನೂ ಬರೆಯಲಿಕ್ಕೆ ಇದೆ ಆದರೆ ಸಮಯ ಸಾಲುತ್ತಿಲ್ಲ ಎಂಬ ಆತಂಕದಲ್ಲಿ ಇದ್ದರೆ, ಇನ್ನು ಕೆಲವರು ಅಯ್ಯೋ ಇನ್ನೂ ಹದಿನೈದು ನಿಮಿಷ ಕಾಯಬೇಕಲ್ವ…! ಯಾವಾಗ ಒಮ್ಮೆ ಹೊರಗೆ ಹೋಗಿಲ್ಲ ಎನಿಸುತ್ತಿದೆ ಎಂದು ಯೋಚಿಸುತ್ತಿದ್ದರು..

ಬರೆದು ಎಲ್ಲಾ ಮುಗಿಸಿದ ನಂತರ ತನ್ನ ಉತ್ತರ ಪತ್ರಿಕೆಯತ್ತ ನೋಡಿದಳು ಸುರಯ್ಯಾ…. ಬರೆದಿದ್ದು ಎಲ್ಲಾ ಸರಿಯಾಗಿಯೇ ಇದೆಯಲ್ವಾ ಎಂದೊಮ್ಮೆ ಪರಿಶೀಲಿಸಿದಳು.. ಅಷ್ಟರಲ್ಲಿ ಅದಾಗಲೇ ಬೆಲ್ ಹೊಡೆಯಿತು. ಮೇಲ್ವಿಚಾರಕರು ” ಹ್ಞಾಂ, ಸಮಯ ಆಯಿತು ಕೊಡಿ ಕೊಡಿ … ಎಂದು ಎಲ್ಲರ ಪತ್ರಿಕೆ ತೆಗೆದುಕೊಂಡರು.. ವಿದ್ಯಾರ್ಥಿಗಳು ಎಲ್ಲಾ ಒಬ್ಬೊಬ್ಬರಾಗಿ ಅಲ್ಲಿಂದ ತೆರಳಿದರು..

ಹೊರಬಂದ ಸುರಯ್ಯಾ ಅತ್ತಿತ್ತ ನೋಡತೊಡಗಿದಳು… ” ತಮ್ಮ ಕಾಲೇಜು ಪರೀಕ್ಷಾ ಕೇಂದ್ರ ಆಗಿದ್ದುದರಿಂದ ಹಲವು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಎಂದು ಬಂದಿದ್ದರು. ಅವರಲ್ಲಿ ಕೆಲವರು ತನ್ನತ್ತ ನೋಡಿ ಏನೋ ಹೇಳಿ ಮುಸಿ ಮುಸಿ ನಗಾಡುವುದನ್ನು ಆಕೆಯ ಕಂಗಳು ಕಾಣದೇ ಇರಲಿಲ್ಲ. ಮನಸ್ಸಿಗೊಮ್ಮೆ ನೋವಾದರೂ ಅದನ್ನು ತೋರ್ಪಡಿಸದೆ ಮುಂದೆ ಸಾಗಲೆಂದು ಹೆಜ್ಜೆ ಇಡಬೇಕಾದರೆ ಸುರಯ್ಯಾ… ಎಂದು ಕರೆಯುವ ಧ್ವನಿ ಕೇಳಿಸಿತು.

ಯಾರೆಂದು ಹಿಂದೆ ತಿರುಗಿ ನೋಡಲು ಅಲ್ಲಿ ಬಯೋಲಜಿ ಲೆಕ್ಚರರ್ ನಿಂತಿದ್ದರು.

” ಏನಮ್ಮಾ ಸುರಯ್ಯಾ ಹೇಗೆ ಮಾಡಿದ್ದಿ ಪರೀಕ್ಷೆ ಎಲ್ಲಾ… ನೀನು ಚೆನ್ನಾಗಿ ಬರೆದಿರುವೆ ಎಂಬ ನಂಬಿಕೆ ಇದೆ.. ಆದರೂ ಒಂದು ಮಾತು ಕೇಳಬೇಕು ಅಲ್ವಾ… ಹಾಗೆ ಕೇಳಿದೆ.”

” ಹ್ಞಾಂ ಸರ್… ಬರೆದಿದ್ದೇನೆ.. ನನ್ನ ಕೈಲಿ ಆದ ಪ್ರಯತ್ನ ನಾನು ಮಾಡಿದ್ದೇನೆ. ಮತ್ತೇನಿದ್ದರೂ ಫಲಿತಾಂಶ ಬಂದ ಮೇಲಲ್ಲವೇ ತಿಳಿಯೋದಲ್ವಾ ಸರ್…”

” ಹ್ಞಾಂ ಹೌದಮ್ಮಾ.. ನೀನು ಒಳ್ಳೆಯ ಅಂಕ ಪಡೆದು ಹೆತ್ತವರಿಗೆ ಹಾಗೂ ಕಲಿತಂತಹ ಕಾಲೇಜಿಗೆ ಕೀರ್ತಿ ತರಬೇಕು.. ಎಷ್ಟೆ ಕಷ್ಟ ಆದರೂ ಸರಿ ವಿಧ್ಯಾಭ್ಯಾಸ ಮುಂದುವರೆಸು.. ದೇವರು ನಿನಗೆ ಒಳ್ಳೆಯ ಬುದ್ಧಿಶಕ್ತಿ ನೀಡಿದ್ದಾನೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು”ಎಂದು ಹೇಳಿ ಆಕೆಯನ್ನು ಹಾರೈಸಿ ಮುಂದೆ ನಡೆದರು.

ಭಾವುಕಗೊಂಡಿತು ಆಕೆಯ ಮನಸ್ಸು… ಇಲ್ಲಾದರೂ ನಾನು ಸೋಲಲಿಲ್ಲ ಅಲ್ಲವೇ ಎಂದು ಮನ ಖುಷಿಗೊಂಡಿತು… ಅಷ್ಟರಲ್ಲಿ ದೂರದಲ್ಲಿ ರೈಹಾನ ತನ್ನತ್ತ ಕೈಬೀಸಿ ಕರೆಯುತ್ತಿರುವುದು ಕಂಡಿತು. ಆಕೆಯನ್ನೇ ಹುಡುಕುತ್ತಿದ್ದ ಸುರಯ್ಯಾ ಆಕೆಯ ಬಳಿ ಹೆಜ್ಜೆ ಹಾಕಿದಳು.

” ಏನೇ ನಿಮ್ಮ ಲೆಕ್ಚರರ್ ನಿಮ್ಮನ್ನು ಮಾತನಾಡಿಸುತ್ತಿದ್ದರು… ಏನು ವಿಷಯ?”

” ಏನಿಲ್ಲಾ ಕಣೇ ಪರೀಕ್ಷೆ ಹೇಗಿತ್ತು ಎಂದು ವಿಚಾರಿಸಿದರು ಅಷ್ಟೇ..”

” ನೋಡು ನಿನ್ನ ಬಳಿ ಲೆಕ್ಚರರ್ ಕೇಳುತ್ತಾರೆ… ನಿನ್ನ ಮೇಲೆ ಅಷ್ಟೊಂದು ಪ್ರೀತಿ ನಂಬಿಕೆ ಅವರಿಗೆ ಅಲ್ವಾ…? “

ಆಕೆಯ ಮಾತು ಕೇಳಿ ಮುಗುಳ್ನಗೆ ಬೀರಿದಳು ಸುರಯ್ಯಾ..

ಸರಿ ಬಾ ಅದನ್ನೆಲ್ಲಾ ಮತ್ತೆ ಮಾತನಾಡೋಣ … ನಡಿ ಮನೆಗೆ ಹೋಗೋಣ ತಡವಾಗುತ್ತೆ ಎಂದ ಆಕೆಯ ಮಾತು ಕೇಳಿ ಆಕೆಯ ಕೈ ಹಿಡಿದು ನಿಲ್ಲಿಸಿದಳು ರೈಹಾನ.

” ಸುರಯ್ಯಾ ಇನ್ನು ನಾವು ಯಾವಾಗ ಸಿಗುತ್ತೇವೊ ಇಲ್ಲವೋ ಎಂದು ತಿಳಿದಿಲ್ಲ. ನಿನ್ನೊಂದಿಗೆ ಕಳೆದ ಕ್ಷಣಗಳು ಇನ್ನು ನನಗೆ ಬರೀ ನೆನಪು ಅಲ್ವಾ…”

ಗೆಳತಿಯ ಮಾತು ಕೇಳಿ ಕಣ್ಣಾಲಿಗಳು ತುಂಬಿ ಬಂದವು ಸುರಯ್ಯಾಳಿಗೆ…

“ರೈಹಾನ ನಿಜವಾಗಿಯೂ ನಾನು ನಿನಗೆ ಅದೆಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮೀನೆ… ನನ್ನ ನೋಡಿ ಎಲ್ಲಾ ನನ್ನಿಂದ ದೂರ ಹೋಗುತ್ತಿದ್ದರೆ ನೀನು ಮಾತ್ರ ನನ್ನ ಬದುಕಿನಲ್ಲಿ ಒಳ್ಳೆಯ ಗೆಳತಿಯಾಗಿ ಬಂದೆ. ಯಾರು ಅದೇನೆ ಅಂದರೂ ನಿನಗೆ ಮಾತ್ರ ನಾನೇ ನಿನ್ನ ಪ್ರಪಂಚವಾದೆ. ಪ್ರತಿ ದಿನವೂ ಏನಾದರೂ ಬೇಸರವಾದಾಗ ನಾನು ನಿನ್ನಲ್ಲಿ ಹಂಚುತ್ತಿದ್ದೆ. ನೀನು ಮನಸ್ಸಿಗೆ ಸಮಾಧಾನ ಮಾಡಿ ನನ್ನ ನೋವ ಮರೆಸುತ್ತಿದ್ದೆ. ಇನ್ನು ನಿನ್ನಂತ ಗೆಳತಿ ನನಗೆ ಸಿಗಲಿಕ್ಕಿಲ್ಲ ಎಂದು ತನ್ನ ಗೆಳತಿಯನ್ನು ಆಲಿಂಗಿಸಿದಳು.

ಮುಂದುವರೆಯುವುದು…

Share this on:
error: Content is protected !!