Latest Posts

ಪ್ರತಿಬಿಂಬ- ಕಾದಂಬರಿ

-ಶರೀನಾ ಸಲೀಮ್
     ಸಂಚಿಕೆ – 2

ಅರೇ ಏನೂಂತ ಮಾತನಾಡುತ್ತಾ ಇದ್ದೀಯಾ ಸುರಯ್ಯಾ… ನನಗಾದರೂ ನಿನ್ನ ಹೊರತು ಮತ್ತಾರಿದ್ದಾರೆ ಹೇಳು.. ನಿಜವಾಗಿಯೂ ನಿನ್ನಂತಹ ಬುದ್ಧಿವಂತ ಹುಡುಗಿ ನನ್ನ ಗೆಳತಿಯಾಗಿ ಸಿಕ್ಕಿರುವುದು ನನ್ನ ಭಾಗ್ಯ.
   ಇಬ್ಬರ ಮನಸ್ಸೂ ದುಃಖದಿಂದ ಕೂಡಿತ್ತು. ಒಬ್ಬರನ್ನೊಬ್ಬರು ಅಗಲಿ ಇರಲಾರದ ಗೆಳತಿಯರು ಬೇರೆ ಬೇರೆಯಾಗುವ ಹಂತದಲ್ಲಿ ಇದ್ದಾಗ ದುಃಖಗೊಳ್ಳುವುದು ಸಹಜವೆ.
ಅಷ್ಟರಲ್ಲಿ ಬಸ್ ಬಂದಿದ್ದು ಕಂಡಿತು. ಬಸ್ ಬಂತೆಂದು ಇಬ್ಬರೂ ಬಸ್ ಹತ್ತಲು ತೆರಳಿದರು.   ತಮ್ಮ ನಿಲ್ದಾಣ ಬಂದಂತೆ ಸುರಯ್ಯಾ  ರೈಹಾನಳಿಗೆ ಕಣ್ಣು ಸನ್ನೆಯಲ್ಲೇ ಇಳಿಯುತ್ತೇನೆಂದು ತಿಳಿಸಿ ಇಳಿದು ಮನೆಯತ್ತ ನಡೆದಳು. ಇನ್ನು ರೈಹಾನಳನ್ನು ಯಾವಾಗ ನೋಡುವುದೋ ಏನೋ, ಮನಸ್ಸು ಯೋಚಿಸುತ್ತಿತ್ತು.

” ಬಂದಿಯಾ ಮಗಳೇ, ಹೇಗಿತ್ತು ಪರೀಕ್ಷೆ? ” ಎದುರಲ್ಲಿ ಇದ್ದ ಅಜ್ಜಿ ಕೇಳಿದರು.

  ಅಜ್ಜಿ  ಕೇಳಿದ್ದನ್ನು ನೋಡಿ  ಸುರಯ್ಯಾ ಬಂದಳು ಎಂದು ಅರ್ಥೈಸಿದ ಆಕೆಯ ಅಮ್ಮ ಸಫಿಯ್ಯಾ ಒಳಗಿಂದ ಹೊರಬಂದರು.

” ಹ್ಞಾಂ ಬಂದಿಯಾ… ನಿನ್ನನ್ನೇ ಕಾಯುತ್ತಿದ್ದೆ. ಹೇಗಿತ್ತು ಪರೀಕ್ಷೆ? ” ಎಂದು ಕೇಳಿದರು.

“ಅರೇ ಅಮ್ಮಾ ಪರೀಕ್ಷೆ ಸುಲಭವಾಗಿ ಇತ್ತು.   ಆದರೆ ನನ್ನನ್ನು ಯಾಕೆ ನೀವು ಕಾಯುತ್ತಿದ್ದದ್ದು?  ಏನು ವಿಷಯ?”

” ಏನಿಲ್ಲಾ ನೀನು ಸ್ನಾನ ಮಾಡಿ ಬಾ. ಮತ್ತೆ ಹೇಳ್ತೇನೆ.”

“ಸರಿ ಅಮ್ಮಾ…” ಎಂದು ಒಳನಡೆದಳು ಸುರಯ್ಯಾ.

ಅರೇ ನನ್ನನ್ನು ಕಾಯುವಂತಹದು ಏನಿದೆ? ಬೆಳಿಗ್ಗೆ ಹೋಗುವಾಗ ಏನು ಹೇಳಿರಲಿಲ್ಲ ಯೋಚಿಸುತ್ತಲೇ ಸ್ನಾನದ ಕೊಠಡಿಗೆ ತೆರಳಿದಳು.
        
      *******************

ಅಮ್ಮಾವ್ರೇ… ಅಮ್ಮಾವ್ರೇ.. ಕೆಲಸದವಳ ಧ್ವನಿ ಕೇಳಿ ಓಡಿ ಬಂದಳು ಮುನೀರ.

ಅರೇ ಏನಾಯಿತು? ಯಾಕೆ ಹೀಗೆ ಬೊಬ್ಬೆ ಹಾಕ್ತಿದ್ದೀಯಾ ಎಂದು ಕೇಳಿದಾಗ ಕೆಲಸದವಳು ತನ್ನ ಬಲಭಾಗಕ್ಕೆ ಕೈ ತೋರಿಸಿ ಅಲ್ಲಿ ನೋಡಿ ಎಂದು ಹೇಳಿದಳು.

ಅತ್ತ ನೋಡಿದ ಮುನೀರ ಆಶ್ಚರ್ಯಗೊಂಡು ಯಾ ಅಲ್ಲಾಹ್ ಎಂದು ಆ ಕಡೆ ಓಡುತ್ತಾಳೆ.

  ಸೈದಾ… ಸೈದಾ .. ಬಾ ಇಲ್ಲಿ, ನನ್ನ ಒಬ್ಬಳ ಕೈಯಿಂದ ಆಗುತ್ತಾ ಇಲ್ಲ ಎಂದಾಗ ಕೆಲಸದಾಕೆ ಮೆಲ್ಲನೆ ಆ ಕೋಣೆಯತ್ತ ಇಣುಕಿ ನೋಡಿದಳು. ಆ ಮುಖಭಾವ ಕಂಡೊಡನೆ ಹೆದರಿಕೆ ಆಗಿ ಹೋಗಬೇಕೋ ಬೇಡವೋ ಎಂದು ಆಲೋಚಿಸಿ ಒಂದಡಿ ಮುಂದೆ ಇಟ್ಟಳು.

ಮುಂದೆ ಒಂದು ಹೆಜ್ಜೆ ಇಟ್ಟಿದಳಷ್ಟೇ ಆಗಲೇ ಆಕೆಯ ಕಡೆ ತೂರಿ ಬಂತು ಒಂದು ಸ್ಟೀಲ್ ಪಾತ್ರೆ. ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಳು. ಬೇಗಲೇ ಓಡಿ ಹೋಗಿ ಮುನೀರಾಳ ಹಿಂದೆ ಅವಿತು ನಿಂತಳು.

     *******************
   ಸ್ನಾನದ ಕೊಠಡಿಯಿಂದ ಹೊರಬಂದ ಸುರಯ್ಯಾ ತನ್ನ ಬ್ಯಾಗ್  ಓಪನ್ ಮಾಡಿದಳು.

  ಮತ್ತೊಮ್ಮೆ ಅದರತ್ತ ನೋಡುತ್ತಾ ಎಲ್ಲಾ ಬರೆದಿದ್ದೇನೊ ಇಲ್ಲವೋ ಎಂದು ಚೆಕ್ ಮಾಡತೊಡಗಿದಳು. ಎಲ್ಲಾ ಸರಿಯಾಗಿದೆ ಎಂದು ಅನಿಸಿದಾಗ ಅದನ್ನು ಒಳಗಿಟ್ಟು ಅಡುಗೆ ಕೋಣೆಯತ್ತ ನಡೆದಳು.

    ” ಅಮ್ಮಾ ಹೊಟ್ಟೆ ಹಸೀತಿದೆ. ಮೊದಲು ಊಟ ಬಡಿಸು. ನಂತರ ಏನು ವಿಷಯ ಎಂದು ಹೇಳುವಿಯಂತೆ. ” ಎಂದು ಅಲ್ಲಿದ್ದ ತನ್ನ ಅಮ್ಮನಿಗೆ ಹೇಳಿದರು.

” ಸರಿ ಬಾ, ಊಟ ಮಾಡು” ಎಂದು ತಟ್ಟೆಗೆ ಊಟ ಬಡಿಸಿದರು.  ಆಕೆ ಡೈನಿಂಗ್ ಬಳಿ ಬಂದು ಊಟ ಮಾಡಲು
ಪ್ರಾರಂಭಿಸುತ್ತಾಳೆ.

ಅಷ್ಟರಲ್ಲಿ ಒಳಬಂದ ಆಕೆಯ ತಂಗಿ ಸುಮಯ್ಯಾ ಹೊಸ ಬಟ್ಟೆ ಧರಿಸಿರುವುದು ಆಕೆ ಗಮನಿಸುತ್ತಾಳೆ.

” ಅರೇ ಏನೇ ನೀನು ಮನೆಯೊಳಗೆ ಯಾಕೆ ಇಷ್ಟು ಒಳ್ಳೆಯ ಬಟ್ಟೆ ಧರಿಸಿದ್ದೀಯಾ ?” ತಂಗಿಯತ್ತ ಹುಬ್ಬೇರಿಸಿ ಕೇಳಿದಳು.

” ಅರೇ ನಿನಗಿನ್ನೂ ವಿಷಯ  ತಿಳಿದಿಲ್ವಾ? “

” ಏನು ವಿಷಯ? “

” ಏನಿಲ್ಲಾ… ನೀನು ಬಂದ ಮೇಲೆ ಅಜ್ಜಿ ಮನೆಗೆ ಹೋಗೋಣ ಎಂದು ಅಮ್ಮ ಹೇಳಿದಳು. ಹಾಗೆ ನಿನ್ನನ್ನೇ ಕಾಯುತ್ತಿದ್ದೆವು. ಅದಕ್ಕೇ ನಾನು ರೆಡಿಯಾಗಿ ಕುಳಿತದ್ದು.”

” ಓಹ್! ಹಾಗಾ ಸಮಾಚಾರ” ಎಂದು ಸುಮ್ಮನಾದಳು.

ಊಟ ಮುಗಿಸಿದ ಸುರಯ್ಯಾ ತಟ್ಟೆ ಹಿಡಿದುಕೊಂಡು ಅಡುಗೆ ಮನೆ ಹೊರಟಳು. ” ಅಮ್ಮಾ ನೀನು ಹೇಳಬೇಕು ಅಂದಿರೋ ವಿಷಯ ನನಗೆ ಅದಾಗಲೇ ತಿಳಿದಾಯಿತು. ಅಮ್ಮಾ ನಾನು ಎಲ್ಲಿಗೂ ಬರೋದಿಲ್ಲ. ದಯವಿಟ್ಟು ನನ್ನನ್ನು ಕರೀಬೇಡಿ” ಎಂದು ಹೇಳಿ ಅಲ್ಲಿಂದ ಒಳಬಂದಳು.

ಮುಂದುವರೆಯುವುದು…

Share this on:
error: Content is protected !!