Latest Posts

ಪ್ರತಿ ಮನಸ್ಸಿನ ಭಾವನೆಗಳ ಛಾಯೆ -ಪ್ರತಿಬಿಂಬ (ಕಾದಂಬರಿ)

ಸಂಚಿಕೆ – 5
ಅಮ್ಮಾವ್ರೇ…. ಸೈದ ಕರೆದುದನ್ನು ಕೇಳಿ ಮೆಲ್ಲನೆ ತನ್ನ ಕಣ್ಣೀರು ಒರೆಸಿಕೊಂಡಳು ಮುನೀರ.

ಮತ್ತೊಮ್ಮೆ ತನ್ನ ಮಗನತ್ತ ನೋಡಿದಳು. ಅಲ್ಲಿ ಯಾವುದೇ ಭಾವನೆಯೂ ಇಲ್ಲ. ಕೆಳಗೆ ಕುಳಿತಿದ್ದವನು ಅಲ್ಲಿಂದ ಎದ್ದು ಹೋಗಿ ತನ್ನ ಹಾಸಿಗೆಯಲ್ಲಿ ಮಲಗಿದನು. ಅದನ್ನು ಕಂಡ ಮುನೀರಾ ಸೈದಾಳತ್ತ ತಿರುಗಿಬಾ ನಾವು ಹೊರಗೆ ಹೋಗೋಣ ಎಂದಳು.

ಸೈದಾ ಮುನೀರಾಳನ್ನು ಹಿಂಬಾಲಿಸಿದಳು.

ಸೋಫಾದಲ್ಲಿ ಬಂದು ಕುಳಿತ ಮುನೀರಾಳತ್ತ ನೋಡಿದಳು ಸೈದಾ. ಯಾಕೋ ತುಂಬಾ ಆಲೋಚನೆ ಮಾಡುತ್ತಿರುವಂತೆ ಕಾಣಿಸಿತು.  ” ಅಮ್ಮಾ, ಕುಡಿಯಲು ನೀರು ತರಬೇಕೆ ? ಎಂದು ಕೇಳಿದಳು.

” ಬೇಡ ಸೈದಾ… ನನಗೇನೂ ಬೇಡ. ನಿನಗೆ ಇದನ್ನೆಲ್ಲಾ ನೋಡಿದರೆ ಆಶ್ಚರ್ಯ ಆಗಿರಬೇಕಲ್ವಾ ?  ಯಾಕಾದರೂ ಇಲ್ಲಿ ಕೆಲಸಕ್ಕೆ ಬಂದೆ ಎಂದು ಎನಿಸುತ್ತಿದೆಯಾ ? ನಿನ್ನ ಮೊದಲು ಬಂದ ಎರಡು ಕೆಲಸದವರು ಇದೇ ಕಾರಣಕ್ಕೆ ಕೆಲಸ ಬಿಟ್ಟರು. ಏನು ಮಾಡುವುದು ಹೇಳು? “.

” ಇಲ್ಲಾ ಅಮ್ಮಾವ್ರೇ… ಒಂದು ಕ್ಷಣ ಹಾಗೆ ಎನಿಸಿತು ನಿಜ. ಆದರೆ ನಿಮ್ಮ ಕಣ್ಣೀರು ನೋಡಿ ಯಾಕೋ ಬೇಜಾರಾಯಿತು. ಹೆತ್ತ ಕರುಳಿನ ವೇದನೆ ಏನೆಂದು ನನಗೂ ತಿಳಿದಿದೆ. ಮತ್ತೆ ನಾನು ಆ ರೀತಿ ಯೋಚಿಸುವುದು ತಪ್ಪಲ್ವೇ… ಅಷ್ಟಕ್ಕೂ ಅವನಿಗೆ ಆದದ್ದು ಆದರೂ ಏನು ಅಮ್ಮಾವ್ರೇ ? “

ಸೈದಾಳ ಮುಖದಲ್ಲಿ ತಿಳಿಯುವ ಕುತೂಹಲ ಇತ್ತು.

” ಏನಿಲ್ಲಾ ಸೈದಾ… ಎಲ್ಲಾ ಮಕ್ಕಳಂತೆ ನನ್ನ ಮಗನೂ ಇದ್ದ. ಮುನೀರಾ ಹೇಳಬೇಕು ಎನ್ನುವಷ್ಟರಲ್ಲಿ ಡೋರ್ ಬೆಲ್ ಬಾರಿಸಿತು.

    ಒಂದು ನಿಮಿಷ ಎಂದ ಮುನೀರಾ ಕದ ತೆರೆಯಲು ಹೋದಳು.

ಸುರಯ್ಯಾಳ ತಂದೆ ನೇರವಾಗಿ ಸಹನಾಳ ಮನೆಯತ್ತ ನಡೆದರು.

” ಅಲ್ಲಾ ಸಾರ ಅವರೇನೊ ಮಕ್ಕಳು, ಬುದ್ಧಿ ಇರೋದಿಲ್ಲ. ನಾವು ದೊಡ್ಡವರು ಅವರ ಕಿವಿಯಲ್ಲಿ ಇಲ್ಲ ಸಲ್ಲದನ್ನು ಬಿತ್ತಬಾರದು ತಾನೆ. ನನ್ನ ಮಗಳಿಗೆ ಅಂತಹುದು ಏನಾಗಿದೆ? ಆ ಮಗುವಿನ ಮನಸ್ಸು ಅದೆಷ್ಟು ನೊಂದಿದೆ ನಿನಗೆ ತಿಳಿದಿದೆಯಾ ? “

” ಅಲ್ಲಾ ಅಣ್ಣಾ.‌…ತಿಳಿದು ನಾನು ಏನು ಮಾಡಬೇಕು ಹೇಳಿ. ನಿಮ್ಮ ಮಗಳ ಭಾಗ್ಯ ಸರಿ ಇಲ್ಲ . ಅದಕ್ಕೆ ನಮ್ಮನ್ನು ದೂರಿದರೆ ಪ್ರಯೋಜನ ಇಲ್ಲ. ನನ್ನ ಮಗಳು ಆಕೆಯೊಂದಿಗೆ ಸೇರುವುದು ನನಗೆ ಇಷ್ಟವಿಲ್ಲ. ನನ್ನ ಮಗಳು ನನ್ನಿಷ್ಟ.”

” ನನ್ನ ಮಗಳ ಭಾಗ್ಯ ಸರಿ ಇಲ್ಲ ಎಂದೆಲ್ಲಾ ನೀನು ಹೇಳಬೇಡ. ನೋಡು ಒಂದು ದಿನ ನಿನ್ನ ಮಾತುಗಳಿಗೆ ನೀನೇ ಪಶ್ಚಾತ್ತಾಪ ಪಡುತ್ತೀಯಾ. ನೋಡ್ತಾ ಇರು ”  ಎಂದು ಅಲ್ಲಿಂದ ಸೀದಾ ಬಂದಿದ್ದರು.  ಹಾಗೆ ಇವರನ್ನು ಆ ಊರಿನಿಂದ ಕರೆದುಕೊಂಡು ಬಂದಿದ್ದರು.

ಅಂದು ರಾತ್ರಿ ಸಹನಾಳ ತಂದೆಯ ಕರೆ ಸಫಿಯ್ಯಾದರಿಗೆ ಬಂದಿತ್ತು. ಫೋನ್ ಇಡಬೇಕಾದರೆ ಅವರ ಮುಖ ಕಳೆಗುಂದಿತ್ತು. ಏನೂ ಎಂದು ಖಾದರ್ ಅವರನ್ನು ಕೇಳಿದಾಗ ಅಮ್ಮ ಏನೊಂದೂ ಹೇಳಲಿಲ್ಲ. ಆದರೂ ಅಪ್ಪ ಅರ್ಥೈಸಿಕೊಂಡರು. ಅವರು ಅಮ್ಮನಿಗೆ ಬೈದಿರಬಹುದು ಎಂದು. ಮತ್ತೆ ನಾವು ಅವರ ವಿಷಯಕ್ಕೆ ಹೋಗಿರಲಿಲ್ಲ. ಅವರು ನಮ್ಮ ವಿಷಯಕ್ಕೆ ಕೂಡ  ಬಂದಿರಲಿಲ್ಲ.   ಕೆಲವು ದಿವಸಗಳ ನಂತರ ಅವರು ಪಟ್ಟಣದಲ್ಲಿ ಮನೆ ಮಾಡಿದ್ದಾರೆ. ಅಲ್ಲಿಗೇ ಶಿಫ್ಟ್ ಆಗಿದ್ದಾರೆ ಎಂದು ವಿಷಯ ತಿಳಿದು ಬಂದಿತ್ತು. ನಂತರ ಅಜ್ಜಿ ಮನೆಗೆ ತೆರಳಿದಾಗ ಅವರು ಮನೆಯನ್ನು ಬೇರೆಯವರಿಗೆ ಮಾರಿದ್ದೂ, ಅಲ್ಲಿ ಬೇರೆ ಕುಟುಂಬ ವಾಸವಾಗಿರುವುದು ಕಂಡೆವು. ಮನಸ್ಸು ಯಾಕೋ ಆಕೆಯ ನೆನಪನ್ನೇ ತರಿಸುತ್ತಿತ್ತು. ಆಕೆಗೂ ನನ್ನ ನೆನಪಿರಬಹುದೇ ಎಂಬ ಪ್ರಶ್ನೆಯೂ ಕೂಡ ಮನದಲ್ಲಿ ಉಧ್ಬವವಾಗುತ್ತಿತ್ತು.

    ಸುರಯ್ಯಾ ಮಲಗಿದ್ದೀಯಾ ತಂದೆಯ ಧ್ವನಿ ಕೇಳಿಸಿತು. ಒಮ್ಮೆಲೆ ಧ್ವನಿ ಕೇಳಿ ಎಚ್ಚೆತ್ತುಕೊಂಡಳು. ಅಪ್ಪನಿಗೆ ತಿಳಿಯಬಾರದು ಎಂದು ಮುಖವನ್ನು ಒರೆಸಿಕೊಂಡಳು.

“ಇಲ್ಲಾ ಅಪ್ಪ “ಎಂದವಳ ಮುಖ ನೋಡಿದಾಗ ಆಕೆ ಅತ್ತಿದ್ದಾಳೆ ಎನ್ನುವುದು ಅವಳ ತಂದೆಯ ಗಮನಕ್ಕೆ ಬಂದಿತು.

” ಏನು ಏನಾಯಿತು? ಯಾಕೆ ಅತ್ತಿದ್ದು ? ಎಂದಾಗ  ಹೇಳದೇ ಇರಲಾಗಲಿಲ್ಲ.
ಏನಿಲ್ಲಪ್ಪ ಹಳೆಯದೆಲ್ಲ ನೆನಪಾಯಿತು ಅಷ್ಟೇ ಎಂದಳು.

“ಅದನ್ನೆಲ್ಲಾ ಮರೆತು ಬಿಡು ಎಂದು ನಾನು ಹೇಳಲಾರೆ ಮಗಳೇ. ಯಾಕೆಂದರೆ ಜೀವನದಲ್ಲಿ ಯಶಸ್ಸುಗಳಿಸಲು ಈ ಎಲ್ಲ ಕಹಿ ನೆನಪುಗಳು ನಮಗೆ ಸ್ಪೂರ್ತಿ ಆಗಿರುತ್ತದೆ.  ಮುಂದೆಂದು ನೀನು ದೊಡ್ಡ ಸಾಧಕಿ ಆಗಬೇಕು ಮಗಳೇ. ಆಡುವವರ ಮುಂದೆ ತಲೆ ಎತ್ತಿ ನಿಲ್ಲಬೇಕು . ಏನು ಹೇಳ್ತೀಯಾ?” ಎಂದಾಗ ಹೌದಪ್ಪ ಎಂದು ತನ್ನ ತಂದೆಯನ್ನು ತಬ್ಬಿ ಹಿಡಿದಳು.

“ಅದಲ್ಲ ವಿಷಯ ಮಗಳೇ…ಈ ಘಟನೆ ನಡೆದು ಅದೆಷ್ಟೋ ವರ್ಷಗಳು ಕಳೆದು ಹೋದವು. ನಂತರನೂ ನೀನು ಅಜ್ಜಿ ಮನೆಗೆ ಹೋಗುತ್ತಿದ್ದೆ. ಮತ್ಯಾಕೆ ಇವತ್ತು ಈ ರೀತಿ ಆಡಿದೆ? ಏನಾದರೂ ಕಾರಣ ಇದೆಯಾ?  ಏನಾದರೂ ಸಂಭವಿಸಿದೆಯಾ? ಹೇಳು

“ಅದೂ…… “ಎಂದು ಹೇಳಲು ಪ್ರಾರಂಭಿಸಿದಳು.

ಮುಂದುವರೆಯುವುದು

Share this on:
error: Content is protected !!