Latest Posts

ದೂರ ತೀರದ ಪಯಣ (ಕಾದಂಬರಿ) ಮುಗ್ಧ ಮನಸ್ಸುಗಳ ಮಧುರ ಯಾತ್ರೆ – ಶರೀನಾ ಸಲೀಮ್

ಕಳೆದ ಸಂಚಿಕೆಯಿಂದ…ನೌಫಲ್ ಹೇಳಿದ ಮಾತನ್ನು ನಫೀಸಾದ ನಂಬದಾದಾಗ ಆತ ತಾನು ಕರೆ ಮಾಡುತ್ತೇನೆ ಎಂದು ಹೇಳಿ ಅಶ್ಫಾಕ್ ನಂಬರಿಗೆ ಕರೆ ಮಾಡಿದನು. ಅದೆಷ್ಟೇ ರಿಂಗಾದರೂ ಕರೆ ರಿಸೀವ್ ಆಗುತ್ತಿರಲಿಲ್ಲ.

ಸಂಚಿಕೆ - 5

ಕೊನೆಯ ಪ್ರಯತ್ನ ಎಂಬಂತೆ ನೌಫಲ್ ಮತ್ತೆ ಕರೆ ಮಾಡಿದನು. ಅಷ್ಟರಲ್ಲಿ ಕರೆ ರಿಸೀವ್ ಆಯಿತು.

ನೌಫಲ್ ತನ್ನ ಮೊಬೈಲ್ ಅನ್ನು ಲೌಡ್ ಸ್ಪೀಕರ್ ಅಲ್ಲಿ ಇಟ್ಟವನೇ

” ಏನೋ ಅಶ್ಫಾಕ್, ಆಗದಿಂದ ಕರೆ ಮಾಡುತ್ತಾ ಇದ್ದೇನೆ . ಯಾಕೆ ನೀನು ಕರೆ ರಿಸೀವ್ ಮಾಡುತ್ತಾ ಇಲ್ಲ ? ನೋಡು ನಾನು ನಫೀಸಾದರ ಮನೆಯಲ್ಲಿ ಇದ್ದೇನೆ. ನೀನು ರುಬೀನಾಳನ್ನು ಮದುವೆಯಾಗಬೇಕು ಎಂದು ಹೇಳಿದ ವಿಚಾರವನ್ನು ನಾನು ಅವರಿಗೆ ತಿಳಿಸಿದೆ. ಆದರೆ ಯಾಕೋ ಅವರು ನಂಬುತ್ತಲೇ ಇಲ್ಲ. ಈಗ ನೀನೇ ನಿನ್ನ ಬಾಯಾರೆ ಹೇಳಿಬಿಡು ” ಎಂದು ಒಂದೇ ಸಮನೆ ಹೇಳಿದನು.

” ಹಲೋ, ಇದು ನಾನು ಅಶ್ಫಾಕ್ ಅಲ್ಲ. ಆತ ತನ್ನ ಮೊಬೈಲ್ ಇಲ್ಲಿ ಬಿಟ್ಟು ಹೊರಗೆ ಆಟ ಆಡಲು ತೆರಳಿದ್ದಾನೆ. ” ಆ ಕಡೆಯಿಂದ ಯಾವುದೋ ಹೆಂಗಸಿನ ಧ್ವನಿ ಕೇಳಿ ಬಂತು.

” ಓಹ್ ಹೌದಾ, ಬಂದ ತಕ್ಷಣ ತುಂಬಾ ಅರ್ಜೆಂಟಾಗಿ ಕರೆ ಮಾಡಲು ಹೇಳುತ್ತೀರಾ ? “

“ಹೇಳುವುದೇನೋ ಸರಿ… ಆದರೆ ಆತ ಅದು ಯಾವುದೋ ಹುಡುಗಿಯನ್ನು ಮದುವೆ ಆಗುತ್ತಾನೆ ಎಂದೆಲ್ಲಾ ಹೇಳಿದೆ ಅಲ್ಲಾ ಅದು ಶುದ್ಧ ಸುಳ್ಳು. ಆತ ಹಾಗೆ ಕಂಡ ಕಂಡವರಲ್ಲಿ ಆ ಮಾತನ್ನು ಹೇಳಿ ಯಾವುದಾದರೂ ಹೆಣ್ಣನ್ನು ತನ್ನ ಬುಟ್ಟಿಗೆ ಬೀಳಿಸುತ್ತಾನೆ. ಅದನ್ನೆಲ್ಲಾ ನೀವು ನಂಬುತ್ತೀರಿ ಅಲ್ವಾ ? ಆತನ ಮದುವೆ ನನ್ನ ಜೊತೆ ನಿಶ್ಚಯವಾಗಿದೆ. ಇನ್ನೂ ಕೆಲವು ಹುಡುಗಿಯರು ಆತನ ದುಡ್ಡು ಕಂಡು ಮರುಳಾಗಿ ಆತನ ಜೊತೆಯೇ ಮದುವೆಯಾಗಬೇಕು ಎಂದು ಕನಸು ಕಾಣುತ್ತಾ ಇರುತ್ತಾರೆ. ಅವರಿಗೆ ಅಷ್ಟು ಕೂಡ ಕಾಮನ್ ಸೆನ್ಸ್ ಇಲ್ವಾ…….”

ಆಕೆ ತನ್ನ ಮಾತನ್ನು ಮುಂದುವರೆಸುತ್ತಾ ಇದ್ದಳು. ಕೇಳಲಾಗದೆ ನೌಫಲ್ ಕರೆ ಕಟ್ ಮಾಡಿದನು.

ಕಟ್ ಮಾಡಿದವನೇ ಮೆಲ್ಲನೆ ನಫೀಸಾದರ ಮುಖ ನೋಡಿದನು. ಅವರ ಕಂಗಳಲ್ಲಿ ನೀರು ತುಂಬಿ ತುಳುಕಿಡುತ್ತಿತ್ತು. ಆ ಹೆಣ್ಣಿನ ಮಾತು ಅವರನ್ನು ಅಷ್ಟೊಂದು ದುಃಖಕ್ಕೀಡು ಮಾಡಿಸಿದ್ದವು.

ನೌಫಲ್ ಅವರಲ್ಲಿ ಏನೊಂದೂ ಮಾತನಾಡುವ ಮುನ್ನ

” ದಯವಿಟ್ಟು ಏನೊಂದೂ ಹೇಳಬೇಡ ನೌಫಲ್ … ಹೇಳಲು ಕೇಳಲು ಏನೂ ಉಳಿದಿಲ್ಲ. ಎಲ್ಲವನ್ನೂ ನಾನು ನನ್ನ ಕಿವಿಯಾರೆ ಕೇಳಿಸಿಕೊಂಡೆ.”

ಧ್ವನಿ ಕೇಳಿ ಬಂದ ಕಡೆ ತಿರುಗಿ ನೋಡಿದನು ನೌಫಲ್. ರುಬೀನಾ ಅಲ್ಲಿ ನಿಂತಿದ್ದಳು.

” ಇಲ್ಲ ರುಬೀನಾ , ನೀನು ನಿನ್ನ ಕಿವಿಯಾರೆ ಕೇಳಿಸಿದ್ದು ಯಾವುದೂ ನಿಜವಲ್ಲ. ಇದರಲ್ಲಿ ಏನೋ ಸಂಚು ಇದೆ. ನನಗೂ ಇದು ಅರ್ಥ ಆಗುತ್ತಿಲ್ಲ. ಆದರೆ ಅಶ್ಫಾಕ್ ಅಂತಹ ಹುಡುಗನಲ್ಲ. ಆ ರೀತಿ ನಿನ್ಞ ಬಾಳನ್ನು ಹಾಳು ಮಾಡಬೇಕು ಎನ್ನುವ ಯಾವ ಉದ್ದೇಶವೂ ಆತನಿಗೆ ಇಲ್ಲ.” ಎಂದು ನೌಫಲ್ ಆಕೆಗೆ ಸಮಜಾಯಿಷಿ ನೀಡಲು ನೋಡಿದನು.

” ಇಲ್ಲಾ ನೌಫಲ್… ಆ ಹುಡುಗಿ ಯಾಕಾಗಿ ಸುಳ್ಳು ಹೇಳಬೇಕು ಹೇಳು ? ಆಕೆಗೆ ಅದರಿಂದ ಏನು ಲಾಭ? ನೀನು ಹೇಳಿದ ಮಾತಿಗಾಗಿ ನನಗೆ ದುಃಖ ಆಗುತ್ತಿಲ್ಲ. ಅಶ್ಫಾಕ್ ಯಾಕೆ ನನ್ನ ಜೀವನದ ಜತೆ ಚೆಲ್ಲಾಟ ಆಡಲು ನೋಡಿದ ? ನಾನು ಅಂತಹದ್ದು ಏನು ಮಾಡಿದ್ದೇನೆ ಆತನಿಗೆ ? ನನ್ನ ಅಮ್ಮ ಅಷ್ಟೊಂದು ಪ್ರೀತಿಯಿಂದ ಆತನ ಉಪಚಾರ ಮಾಡುತ್ತಿದ್ಧದ್ದು ಆತನಿಗೆ ಮರೆತು ಹೋಯಿತೇ ? ಮರೆತು ಹೋಗದೆ ಇರುವುದಾದರೂ ಹೇಗೆ ಹೇಳು ? ಆತನೀಗ ಇರುವುದು ಮುಂಬೈ ಅಂತಹ ಮಹಾ ನಗರದಲ್ಲಿ ಅಲ್ಲವಾ? ಇಲ್ಲಿಂದ ಹೋಗಿ ಹಲವು ವರ್ಷಗಳು ಆಯಿತು ಅಲ್ವಾ ? ನನ್ನ ಅಮ್ಮ ಮಾಡಿದ ಉಪಚಾರದ ಋಣ ಹೀಗೆ ತೀರಿಸಬೇಕು ಎಂದು ಬಯಸಿದನೇ ? ” ಅಷ್ಟು ಕೇಳಬೇಕಾದರೆ ಆಕೆಯ ಧ್ವನಿ ಗದ್ಗದಿತವಾಯಿತು.

” ಇಲ್ಲಾ ರುಬೀನಾ… ಅಶ್ಫಾಕ್ ಅನ್ನು ಇಷ್ಟು ವರ್ಷಗಳ ಕಾಲ ನೀನು ನೋಡಿದ್ದೀಯಲ್ಲ.. ಇಷ್ಟೇನಾ ನೀನು ಅರ್ಥ ಮಾಡಿದ್ದು ? “

” ನಾನು ಕಂಡಿದ್ದು ಹಲವು ವರ್ಷಗಳ ಮೊದಲು ಅವನನ್ನು. ಇಂದು ಆತ ಬದಲಾಗಿಲ್ಲ ಅನ್ನುವುದಕ್ಕೆ ಏನು ಗ್ಯಾರಂಟಿ. ಆ ಹುಡುಗಿ ಜೊತೆ ಆತನ ನಿಶ್ಚಿತಾರ್ಥ ಆಗಿದೆ. ಅಲ್ಲದೆ ಆಕೆ ಹೇಳಿದ ಮಾತು ನೀನು ಕೇಳಿಸಿದೆಯಾ ? ಬಡ ಹೆಣ್ಣು ಮಕ್ಕಳು ಆತನ ಆಸ್ತಿಗಾಗಿ ಆತನನ್ನು ಒಳ ಹಾಕಲು ನೋಡುತ್ತಾರೆ ಎಂದು. ಯಾವಾಗ ನಾನು ಆ ರೀತಿ ಮಾಡಿದ್ದೇನೆ ಹೇಳು ? ಎಂದಾದರೂ ಆತನ ಜತೆ ನನ್ನ ಮದುವೆ ಆಗುವ ಕನಸು ನಾನು ಕಂಡಿದ್ದೇನೆಯೇ ? ಹೇಳು ನೀನು ? ಆ ಮಾತು ನನ್ನ ಮನಸ್ಸನ್ನು ಅದೆಷ್ಟು ಘಾಸಿಗೊಳಿಸಿದೇ ನನಗೆಯೇ ಗೊತ್ತು. ನಿನ್ನ ಗೆಳೆಯ ಕರೆ ಮಾಡಿದರೆ ಈ ಮಾತನ್ನು ಆತನಿಗೆ ತಿಳಿಸಿಬಿಡು. ಇನ್ನೆಂದಿಗೂ ನಾನು ಆತನ ಮುಖವನ್ನು ನೋಡಲಾರೆ. ನಾನು ಆತನನ್ನು ದ್ವೇಷಿಸುತ್ತಾ ಇದ್ದೇನೆ ..”ಎಂದು ಹೇಳಿ ರುಬೀನಾ ಒಳನಡೆದಳು.

ನಫೀಸಾದ ಮತ್ತೇನೂ ಮಾತನಾಡಲಿಲ್ಲ. ನೌಫಲ್ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಅಲ್ಲಿಂದ ಹೊರ ನಡೆದನು.

ತನ್ನ ಗಾಡಿಯಲ್ಲಿ ಸ್ವಲ್ಪ ದೂರ ಬರುತ್ತಿದ್ದಂತೆ ಆತನ ಮೊಬೈಲ್ ರಿಂಗಣಿಸತೊಡಗಿತು‌. ಯಾರ ಕರೆ ಎಂದು ನೋಡಲು ಆತ ತನ್ನ ಮೊಬೈಲ್ ತೆಗೆದನು.

ಅಶ್ಫಾಕ್ ಜೊತೆ ನಿಶ್ಚಿತಾರ್ಥ ಹೊಂದಿದ ಹೆಣ್ಣು ಯಾರು ?

ನೌಫಲ್ ಮೊಬೈಲಿಗೆ ಬಂದ ಕರೆ ಯಾರದು ?

ಮುಂದುವರೆಯುವುದು…..

Share this on:
error: Content is protected !!