Latest Posts

ದೂರ ತೀರದ ಪಯಣ (ಕಾದಂಬರಿ)
ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್

-ಶರೀನಾ ಸಲೀಮ್
  # ಉಮ್ಮು ಶಹೀಮ್ #

   ಸಂಚಿಕೆ – 7

ಬಾಗಿಲು ಬಡಿದ ಶಬ್ದ ಕೇಳಿ ರುಬೀನಾ ಬಾಗಿಲು ತೆರೆಯಲು ಎಂದು ಹೋದಳು. ಬಾಗಿಲು ತೆರೆದವಳೇ ಆಶ್ಚರ್ಯದಿಂದ ನೀನಾ ಎಂದು ಕೇಳಿದಳು.

ಆಚೆ ಕಡೆಯಿಂದ ಒಳಬಂದ ಮುಕ್ತಾರ್ ” ಹ್ಞೂಂ ನಾನೇ ಮತ್ತೆ.. ನೀವು ಯಾರು ಅಂತ ಅಂದುಕೊಂಡ್ರಿ?” ಎಂದು ಕೇಳಿದನು.

” ಹಾಗಲ್ಲ ಕಣೋ, ನೀನು ಬರುವಾಗ ಯಾವತ್ತೂ ಸ್ವಲ್ಪ ತಡ ಆಗುತ್ತದಲ್ವಾ ? ಹಾಗೇ ಯಾರಾಗಿರಬಹುದು ಎಂದು ಅಂದುಕೊಂಡೆ ಎಂದು ರುಬೀನಾ ತನ್ನ ಅಣ್ಣನ ಬಳಿ ನಿಜ ಹೇಳಲು ಇಚ್ಛಿಸದೆ ಸುಳ್ಳನ್ನು ಹೇಳಿದಳು.

” ಓಹ್ ಗೊತ್ತಾಯಿತು…. ನೀವು ಆತ ಎಂದು ಎನಿಸಿದಿರಾ? ” ಎಂದು ಮುಕ್ತಾರ್ ಕೇಳಿದಾಗ ರುಬೀನಾಳಿಗೆ ಆಶ್ಚರ್ಯ ಆಯಿತು.

ಅರೇ ಈತನಿಗೆ ಹೇಗೆ ಗೊತ್ತಾಯಿತು ? ಯಾರು ತಿಳಿಸಿದರು ? ಎಂದು ಮನಸ್ಸಿನಲ್ಲೇ ಯೋಚಿಸುತ್ತಿದ್ದಳು.

*” ಆತ ಇಲ್ಲಿ ಬರುವುದಾದರೂ ಯಾತಕ್ಕಾಗಿ ? ಆತನಿಗೆ ಅಲ್ಲಿ ಸುಂದರಿಯಾದ ಹೆಂಡತಿ ಇರುವಾಗ ಇಲ್ಲಿ ಬರುವುದಾದರೂ ಯಾತಕ್ಕಾಗಿ? ತನ್ನ ಹೆಂಡತಿ ,ಮಕ್ಕಳು ಇಲ್ಲಿ ಇದ್ದಾರೆ ಅನ್ನೋ ನೆನಪಾದರೂ ಆತನಿಗೆ ಇದೆಯಾ? ” ಅಷ್ಟು ಹೇಳಬೇಕಾದರೆ ಮುಕ್ತಾರ್ ಮುಖ ರೋಷದಿಂದ ಕುದಿಯುತ್ತಾ ಇತ್ತು.

ತನ್ನ ಅಣ್ಣ ನೌಫಲ್ ಬಗ್ಗೆ ಅಲ್ಲ ಮಾತನಾಡುತ್ತಿರುವುದು. ಈತ ನಾವು ಅಪ್ಪ ಬಂದದ್ದು ಎಂದುಕೊಂಡಿದ್ದೇವೆ ಎಂದು ಎನಿಸಿದ್ದಾನೆ ಎಂದು ಆಕೆಗೆ ತಿಳಿಯಿತು.

” ಯಾಕೆ ಅಣ್ಣಾ ಹಾಗೆ ಅಪ್ಪನನ್ನು ಏಕವಚನದಲ್ಲಿ ಕರೆದು ಮಾತನಾಡಿಸುತ್ತಾ ಇದ್ದೀಯಾ ? ಸರಿ ಅಲ್ಲ ಕಣೋ ಅದು… ” ರುಬೀನಾ ತನ್ನ ಅಣ್ಣನಿಗೆ ಬುದ್ಧಿವಾದ ಹೇಳಿದಳು.

” ಅಪ್ಪ ಅಪ್ಪನ ರೀತಿಯಲ್ಲಿ ಇದ್ದರೆ ಬಾಯಿ ತುಂಬಾ ಅಪ್ಪಾ ಅಂತ ಕರಿಯಬಹುದು. ಆದರೆ ಅವರನ್ನು ಕರಿಯಬೇಕಾದ ಯೋಗ್ಯತೆ ಅವರು ಕಳೆದುಕೊಂಡಿದ್ದಾರೆ ರುಬೀನಾ.”

” ಹಾಗೆಲ್ಲ ಹೇಳಬೇಡ ಮಗನೇ… ನಿನ್ನ ಹುಟ್ಟಿಸಿದ ತಂದೆ ಕಣೋ ಅವರು. ಅವರು ಹೇಗೆ ಬೇಕಾದರೂ ಇರಲಿ . ಆದರೆ ನಾವು ಅವರಿಗೆ ಕೊಡಬೇಕಾದ ಬೆಲೆ ಕೊಡಬೇಕು.”

ಅಮ್ಮಾ , ನೀನು ಮತ್ತೆ ರುಬೀನಾ ಆ ಮನುಷ್ಯನಿಗೆ ಬೆಲೆ ಕೊಡುವುದಿದ್ದರೆ ಕೊಡಿ. ಆದರೆ ನಾನು ಮಾತ್ರ ಕೊಡುವುದಿಲ್ಲ. ಯಾಕೆಂದರೆ ಎಂದಾದರೂ ಆತ ತಂದೆ ಎನ್ನುವ ಸ್ಥಾನವನ್ನು ನಿಭಾಯಿಸಿದ್ದಾನ? ಎಂದಾದರೂ ನಮ್ಮನ್ನು ಕಷ್ಟಪಟ್ಟು ಸಾಕಿ ಸಲಹಿದ್ದಾನ? ಎಂದಾದರೂ ನಿನ್ನನ್ನು ಬಾಯಿ ತುಂಬಾ ತನ್ನ ಪತ್ನಿ ಅಂತ ಕರೆದು ಪ್ರೀತಿಸಿದ್ದಾನ? ಇಲ್ಲ ಅಲ್ವಾ ಅಮ್ಮಾ… ಎಲ್ಲಾ ತಂದೆಯಂದಿರು ತಮ್ಮ ಮಕ್ಕಳನ್ನು ಪ್ರೀತಿಸುವುದನ್ನು ನೋಡಿದಾಗ ನಾನು ಆಸೆ ಪಟ್ಟಿದ್ದೇನೆ. ನಮ್ಮ ತಂದೆ ನಮಗಾಗಿ ಹೀಗೆ ಮಾಡಿದರೆ ಎಂದು . ಇಲ್ಲ ಆತ ಮಾಡಲೇ ಇಲ್ಲ. ಸುಂದರವಾದ ಪತ್ನಿ ಸಿಕ್ಕಳು ಎಂದು ನಮ್ಮನ್ನು ಮರೆತ. ಆಕೆಯ ಮಕ್ಕಳನ್ನು ಬೆಟ್ಟದಷ್ಟು ಪ್ರೀತಿಸುತ್ತಾನೆ. ಆದರೆ ನಾವು ತಂದೆಯಿದ್ದೂ ಅನಾಥರಂತೆ ಇದ್ದೇವೆ. ಅದಲ್ಲದೆ ನೀನು ಇಷ್ಟು ಕಷ್ಟಪಟ್ಟು ಸಾಕಿ ಸಲಹಿ ನಮ್ಮನ್ನು ಬೆಳೆಸುವಾಗ ಒಂದು ದಿನವಾದರೂ ನಿನ್ನ ಕಷ್ಟದಲ್ಲಿ ಭಾಗಿಯಾಗಿದ್ದಾನ? ಇಲ್ಲವಲ್ಲ. ಯಾವಾಗಲಾದರೂ ಮನಸ್ಸಿಗೆ ಇಷ್ಟವಾದರೆ ಅತಿಥಿಯಂತೆ ಬಂದು ಹೋಗುತ್ತಾನೆ ಅಷ್ಟೇ.ಆತ ಯಾವಾಗ ನಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಅಂದೇ ನಾನು ಕೂಡ ನಿಜವಾಗಿಯೂ ಆತನನ್ನು ಅಪ್ಪಾ ಎಂದು ಬಾಯಿ ತುಂಬಾ ಕರೆಯುತ್ತೇನೆ. ಎಂದು ಹೇಳುತ್ತಾ ಮುಕ್ತಾರ್ ಒಮ್ಮೆ ತನ್ನ ಮಾತು ನಿಲ್ಲಿಸಿದನು.

ನಂತರ ಮಾತು ಮುಂದುವರಿಸಿದವನೇ……..

” ಅದು ಸರಿ, ಇವತ್ತು ಯಾಕೆ ಆತ ಬರುತ್ತೇನೆಂದು ಹೇಳಿದ್ದ? ನೀವು ಯಾಕೆ ಆತನಿಗಾಗಿ ಕಾಯುತ್ತಾ ಇದ್ದೀರಿ? ಎಂದು ಒಮ್ಮೆಲೇ ನೆನಪಾದವರಂತೆ ಪ್ರಶ್ನಿಸಿದ.

ಈಗ ತಾಯಿ, ಮಗಳು ತಮ್ಮ ತಮ್ಮ ಮುಖ ನೋಡಿಕೊಂಡರು. ನೌಫಲ್ ಬಂದ ವಿಚಾರ ಆತನಲ್ಲಿ ಹೇಳುವುದೋ , ಬೇಡವೋ ಎಂಬ ದ್ವಂದ್ವ ಪರಿಸ್ಥಿತಿ ಅವರಿಗುಂಟಾಯಿತು. ಮೊದಲೇ ಆತ ಅತೀವ ಕೋಪದಲ್ಲಿ ಇದ್ದಾನೆ. ಇನ್ನು ಈ ವಿಚಾರ ಹೇಳಿದರೆ ಖಂಡಿತವಾಗಿಯೂ ಈಗಲೇ ನೌಫಲ್ ಬಳಿ ಹೋಗಿ ಜಗಳಕ್ಕೆ ಇಳಿಯಬಹುದು ಎಂದೆನಿಸಿತು ಅವರಿಗೆ. ಆದರೆ ಹೇಳದೆ ಇದ್ದಲ್ಲಿ ಮುಚ್ಚಿಟ್ಟಂತೆ ಆಗುವುದಿಲ್ಲವಾ ಎಂದೆನಿಸಿ ನಫೀಸಾದರೆ ಮೆಲ್ಲನೆ

” ಅದೂ ಮಗನೇ ನಾವು ನಿನ್ನ ಅಪ್ಪನಿಗಾಗಿ ಕಾದಿದ್ದು ಅಲ್ಲ. ನೌಫಲ್ ಬಂದು ಹೋಗಿದ್ದ. ಆತನೇ ಮತ್ತೆ ಬಂದನೋ ಎಂದೆನಿಸಿತು. ಹಾಗೇ ನಾವು ಆತ ಎಂದುಕೊಂಡೆವು ” ಎಂದು ಹೇಳಿ ಮಗನ ಮುಖ ನೋಡಿದರು.

ನೌಫಲಾ ? ಆತ ಯಾಕೆ ಬಂದಿದ್ದ ಇಲ್ಲಿಗೆ ? ಮುಕ್ತಾರ್ ಆಶ್ಚರ್ಯದಿಂದ ಕೇಳಿದ.

ನಫೀಸಾದ ಹೇಳಬೇಕು ಎಂದು ಬಾಯಿ ತೆರೆಯುವಷ್ಟರಲ್ಲಿ
ಮುಕ್ತಾರ್ ಮೊಬೈಲ್ ರಿಂಗಣಿಸತೊಡಗಿತು‌.

ಆತ ಕರೆ ರಿಸೀವ್ ಮಾಡಿದವನೇ ಆ ಕಡೆಯ ಮಾತು ಕೇಳಿ ಆಘಾತಗೊಂಡಂತಾದನು

ಮುಕ್ತಾರಿಗೆ ಬಂದ ಕರೆ ಯಾರದು?

ಈ ಕರೆಯಿಂದ ರುಬೀನಾಳ ಬದುಕಿನ ದಿಕ್ಕೇ ಬದಲಾ‌ಗಬಹುದೇ?

ಮುಂದುವರೆಯುವುದು…

🖋️ ಶರೀನಾ ಸಲೀಮ್
# ಉಮ್ಮು ಶಹೀಮ್ #

Share this on:
error: Content is protected !!