Latest Posts

ದೂರ ತೀರದ ಪಯಣ (ಕಾದಂಬರಿ)
ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್

– ಶರೀನಾ ಸಲೀಮ್
  # ಉಮ್ಮು ಶಹೀಮ್ #

   ಸಂಚಿಕೆ – 08

ನೌಫಲ್ ಯಾಕೆ ಈ ಮನೆಗೆ ಬಂದಿದ್ದಾನೆ ಎಂದು ಕೇಳುವಷ್ಟರಲ್ಲಿ ಮುಕ್ತಾರ್ ಮೊಬೈಲ್ ರಿಂಗಣಿಸುತ್ತದೆ. ಆ ಕಡೆಯಿಂದ ಮಾತು ಕೇಳಿದವನೇ ಆಘಾತದಿಂದ ತನ್ನ ತಾಯಿಯ ಮುಖ ನೋಡುತ್ತಾನೆ.

” ಅಮ್ಮಾ ತಾತನಿಗೆ ಹುಷಾರಿಲ್ಲದ್ದು ಸ್ವಲ್ಪ ಜೋರಾಗಿಯೇ ಇದೆಯಂತೆ. ಹಾಗಾಗಿ ನಾವು ಈಗ ಹೋಗಬೇಕು ? ಏನು ಮಾಡುವುದು ? ನೀನು ಹೇಗೆ ಹೇಳುತ್ತೀಯೋ ಹಾಗೆ ಎಂದನು.

“ಅರೇ ಹೌದಾ?” ಎಂದು ಕೇಳಿದ ನಫೀಸಾದರ ಮುಖದಲ್ಲಿ ಆತಂಕದ ಛಾಯೆ ಎದ್ದು ಕಾಣುತ್ತಿತ್ತು.

ಮತ್ತೇನೊಂದನ್ನೂ ಯೋಚಿಸದೇ ಅವರು ಹೊರಡಲು ಅನುವಾದರು.

ಹೋಗುವುದೇನೋ ಸರಿ ….. ಆದರೆ ಈಗ ಬೈಕಿನಲ್ಲಿ ಹೋಗಬೇಕಷ್ಟೇ. ಬಸ್ಸಿಗೆಲ್ಲಾ ಕಾಯುತ್ತಾ ನಿಂತರೆ ಸಮಯ ಸಾಲದು. ಗಾಡಿ ಮಾಡಿ ಹೋಗೋಣ ಎಂದರೆ ತುಂಬಾ ಕಷ್ಟ… ಏನು ಮಾಡುವುದು? ಮುಕ್ತಾರ್ ಅಮ್ಮನ ಮುಂದೆ ತನ್ನ ಮನದಲ್ಲಿ ಇದ್ದ ಪ್ರಶ್ನೆಯನ್ನು ಮುಂದಿಟ್ಟನು.

ಈಗ ಯೋಚಿಸುವ ಸರದಿ ನಫೀಸಾದರದ್ದು ಆಗಿತ್ತು. ಸ್ವಲ್ಪ ಹೊತ್ತು ಯೋಚಿಸಿದವರೇ

” ಮುಕ್ತಾರ್ ಒಂದು ವೇಳೆ ಅಪ್ಪ ಹುಷಾರಾದರೆ ನಾವು ಇವತ್ತೇ ಹಿಂದಿರುಗಿ ಬರೋಣ. ಇಲ್ಲಾ ಅಂದರೆ ನನ್ನನ್ನು ಮಾಡಿ ನೀನು ಹಿಂದಿರುಗಿ ಬಂದು ಬಿಡು. ಅಲ್ಲಿವರೆಗೂ ರುಬೀನಾ ಅವಳ ಅಪ್ಪನ ಮನೆಯಲ್ಲಿ ಇರಲಿ ಆಗದೇ ? ಎಂದು ಪ್ರಶ್ನಿಸಿದರು.

ಅಮ್ಮನ ಮಾತು ಕೇಳಿದ ತಕ್ಷಣ ಮುಕ್ತಾರ್ ಮುಖ ಕೋಪದಿಂದ ಕುದಿಯತೊಡಗಿತು.

“ಬೇಡ ನೀವಿಬ್ಬರೂ ಇಲ್ಲೇ ನಿಲ್ಲಿ. ನಾನೇ ಹೋಗಿ ಅಜ್ಜನ ಆರೋಗ್ಯ ವಿಚಾರಿಸಿಕೊಂಡು ಬರುತ್ತೇನೆ . ಅವಳನ್ನು ಆತನ ಮನೆಯಲ್ಲಿ ಬಿಡಲು ನನಗೆ ಮನಸಿಲ್ಲ ಅಮ್ಮಾ… ಆತನ ಪತ್ನಿಯ ಮೇಲೆ ನನಗೆ ಒಂದು ಚೂರು ಕೂಡ ವಿಶ್ವಾಸ ಇಲ್ಲ. ನೀವಾದರೋ ಮನೆಯಲ್ಲೇ ಇರುತ್ತೀರಿ. ಏನೊಂದೂ ವಿಷಯ ತಿಳಿಯುವುದಿಲ್ಲ. ನನಗೆ ಇಷ್ಟವಿಲ್ಲ. ಹೇಳಿ ಈಗ ಏನು ಮಾಡುತ್ತೀರಿ? “ಎಂದು ತಾಯಿಯ ಮುಖ ನೋಡಿದನು.

ನಫೀಸಾದರಿಗೆ ಏನು ಹೇಳಬೇಕು ಎಂದೇ ತೋಚಲಿಲ್ಲ. ಒಂದು ಕಡೆ ತನ್ನ ತಂದೆಯ ಆರೋಗ್ಯ ಅಷ್ಟು ಚೆನ್ನಾಗಿಲ್ಲ ಎಂದು ತಿಳಿದ ಮೇಲೆ ಯಾಕೋ ಹೋಗದಿದ್ದರೆ ಮನಸು ಕೇಳುವುದಿಲ್ಲ.ಆದರೆ ಮಗಳನ್ನು ಕರೆದುಕೊಂಡು ಹೋಗುವ ಹಾಗಿಲ್ಲ. ಆಕೆಯ ತಂದೆಯ ಮನೆಯಲ್ಲಿ ಬಿಡಲು ಈ ಮಗ ಕೇಳುವುದಿಲ್ಲ. ಇದಕ್ಕೇ ಇಷ್ಟು ಕೋಪ ಮಾಡುತ್ತಿದ್ದಾನೆ. ಇನ್ನು ಅಶ್ಫಾಕ್ ವಿಚಾರ ಹೇಳಿದರೆ ಎಷ್ಟು ಕೋಪ ಮಾಡಲಿಕಿಲ್ಲ. ಅವರ ಮನಸ್ಸು ಯೋಚಿಸುತ್ತಲೇ ಇತ್ತು.

ಅಮ್ಮ ಇನ್ನೂ ಯೋಚಿಸುತ್ತಲೇ ಇರುವುದನ್ನು ನೋಡಿದ ಮುಕ್ತಾರ್

” ಅಮ್ಮಾ ಯೋಚಿಸಲು ಸಮಯ ಇಲ್ಲ ಅಮ್ಮಾ… ಬೇಗನೇ ಏನಾದರೂ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು” ಎಂದು ಹೇಳಿದನು.

” ಮುಕ್ತಾರ್ ಹೇಗಿದ್ದರೂ ನನ್ನನ್ನು ಮಾಡಿ  ಒಂದು ವೇಳೆ ನೀನು ಬಂದರೂ ಬರಬಹುದಲ್ವಾ ? ಅಲ್ಲಿವರೆಗೆ ರುಬೀನಾ ಆಮೀನಾದರ ಮನೆಯಲ್ಲಿ ಕುಳಿತುಕೊಳ್ಳಲಿ. ಅಲ್ಲಿ ಗಂಡಸರು ಅಂತ ಯಾರೂ ಇಲ್ಲ. ಅವರು ಮತ್ತೆ ಅವರ ಹೆಣ್ಣು ಮಕ್ಕಳು ಇದ್ದಾರೆ. ಆಮೀನಾದ ಏನೂ ಬೇಡ ಅನ್ನಲಿಕ್ಕಿಲ್ಲ. ಸರಿಯಾ ಹೇಳು ಎಂದು ಕೇಳಿದಾಗ ಮುಕ್ತಾರ್ ಹಾಗೂ ರುಬೀನಾ ತಮ್ಮ ಒಪ್ಪಿಗೆ ಸೂಚಿಸಿದರು.

ಅದರಂತೆಯೇ ಮುಕ್ತಾರ್ ಹಾಗೂ ನಫೀಸಾದ ಹೊರಡಲು ಅನುವಾದರು. ಹೋಗುವ ಮುಂಚೆ ರುಬೀನಾಳನ್ನು ಕರೆದುಕೊಂಡು ಹೋಗಿ ಆಮೀನಾದರ ಬಳಿ ಮಾಡಿ ಬಂದರು. ಅವರ ಬಳಿ ವಿಷಯವನ್ನು ಎಲ್ಲಾ ವಿವರಿಸಿ ಹೇಳಿದರು. ಆಮೀನಾದ ಖುಷಿಯಿಂದಲೇ ಅದಕ್ಕೆ ಒಪ್ಪಿಗೆ ಸೂಚಿಸಿದರು. ಅದಕ್ಕೇನಂತೆ ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ. ಆಕೆ ಇಲ್ಲೇ ಇರಲಿ ಎಂದು ಆರಾಮವಾಗಿ ಹೇಳಿದರು. ಅವರು ಅಷ್ಟು ಹೇಳಿದ ಮೇಲೆ ಮುಗಿಯಿತು ಅಲ್ವಾ ಎಂದು ಮುಕ್ತಾರ್ ಹಾಗೂ ನಫೀಸಾದ ನಿಶ್ಚಿಂತೆಯಿಂದ  ಹೊರಡಿದರು. ಅವರು ಹೋದತ್ತಲೇ ನೋಡಿದ ರುಬೀನಾ ಮತ್ತೆ ಒಳನಡೆದಳು. ಆಮೀನಾದರ ಮಕ್ಕಳು ಅವಳ ಗೆಳತಿಯರೇ ಆದುದರಿಂದ ಆಕೆಗೆ ಅಲ್ಲಿ ಕುಳಿತು ಕೊಳ್ಳಲು ಸಂಕೋಚವೆನಿಸಲಿಲ್ಲ.

ಬೈಕಿನಲ್ಲಿ ಹೋಗಬೇಕಾದರೆ ಮುಕ್ತಾರಿಗೆ ಒಮ್ಮೆಲೇ ತನ್ನ ತಾಯಿ ನೌಫಲ್ ಬಂದ ವಿಚಾರ ಹೇಳಿದ್ದು ನೆನಪಾಯಿತು. ಆತ ತಾಯಿಯಲ್ಲೇ ನೇರವಾಗಿ ಕೇಳಿಬಿಟ್ಟನು. ನಫೀಸಾದ ಎಲ್ಲಾ ವಿಚಾರಗಳನ್ನು ಮಗನಲ್ಲಿ ಹೇಳಿಬಿಟ್ಟರು.

” ಅಮ್ಮಾ ಹಲವು ವರ್ಷಗಳ ಹಿಂದೆ ನಾವು ಅಶ್ಫಾಕ್ ಅನ್ನು ನೋಡಿದ್ದು. ಈಗ ನೋಡದೆ ಅದೆಷ್ಟು ವರ್ಷಗಳು ಸಂದವು. ಅಮ್ಮಾ ಆತ ಆಟ ಆಡಿಸುತ್ತಿಲ್ಲ ಎಂದು ನನಗೆ ಅನಿಸುತ್ತದೆ. ಯಾಕೆಂದರೆ ಇಷ್ಟು ವರ್ಷಗಳ ನಂತರವೂ ಆತನಿಗೆ ಈ ಊರಿನಲ್ಲಿ ಇರುವ ಅಷ್ಟೂ ಹುಡುಗಿಯರನ್ನು ಬಿಟ್ಟು ರುಬೀನಾಳ ನೆನಪಿದೆ ಎಂದರೆ ಅದು ನಿಜವಾದ ಪ್ರೀತಿಯೇ ಇರಬೇಕು. ಆತ ರುಬೀನಾಳನ್ನು ಮದುವೆಯಾಗುವ ಬಯಕೆ ಹೊಂದಿದ್ದಾನೆ ಎಂದು ಹಲವು ವರ್ಷಗಳ ಮೊದಲೇ ನನಗೆ ತಿಳಿದಿತ್ತು.  ಆದರೆ ಇದರಲ್ಲಿ ಈಗ ಏನೋ ಮೋಸದ ಆಟ ಇದೆ ಎಂದು ನನಗೆ ಅನಿಸುತ್ತದೆ. ಏನಿದ್ದರೂ ನೋಡೋಣ ಬಿಡುವು ಮಾಡಿಕೊಂಡು ನೌಫಲಿಗೆ ನಾನೇ ಕರೆ ಮಾಡುತ್ತೇನೆ ಎಂದು ಹೇಳಿದನು.

ಈಗ ನಫೀಸಾದರ ಮನಸ್ಸಿಗೆ ಒಂದಿಷ್ಟು ಸಮಾಧಾನ ದೊರಕಿತು.

ಆದರೆ ರುಬೀನಾಳ ಮನದಲ್ಲಿ ಇದೇ ವಿಚಾರ ಕೊರೆಯುತ್ತಿತ್ತು. ಒಂದು ಕ್ಷಣಕ್ಕಾದರೂ ಅಶ್ಫಾಕ್ ಯಾಕೆ ಈ ರೀತಿ ಆದ ಎಂಬುದೇ ಆಕೆಯ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು.

ಇತ್ತ ನೌಫಲ್ ಅಶ್ಫಾಕ್ ಹೇಳಿದ ಯೋಜನೆಯಂತೆ ತಕ್ಕ ಸಮಯಕ್ಕಾಗಿ ಕಾಯುತ್ತಿದ್ದನು.

ಅಶ್ಫಾಕ್ ಯೋಜನೆ ತಲೆಕೆಳಗಾಗಬಹುದೇ ?

ರುಬೀನಾಳ ಬದುಕಿನ ಪತಂಗದ ದಿಕ್ಕು ಬದಲಾಗಬಹುದೇ ?

ಮುಂದುವರೆಯುವುದು…..

Comments / ಬಹಳ ಚೆನ್ನಾಗಿ ಮೂಡುತ್ತಿದೆ. ✨ ಕೊನೆಯದಾಗಿ ಕುತೂಹಲದಿಂದ  ನಿಲ್ಲಿಸುವ  ಕಾದಂಬರಿ…⚡ಸೂಪರ್…
ಕಾತೂರದಿಂದ ಕಾಯುತ್ತಿರುವ ನಿಮ್ಮ ಅಭಿಮಾನಿಗಳು   – ಮಶೂದ ಜಾರಿಗೆಬೈಲ್

Share this on:
error: Content is protected !!