ದೂರ ತೀರದ ಪಯಣ (ಕಾದಂಬರಿ)
ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್

🖋️ ಶರೀನಾ ಸಲೀಮ್
# ಉಮ್ಮು ಶಹೀಮ್ #

ಸಂಚಿಕೆ – 9

ತಂದೆಗೆ ಹುಷಾರಿಲ್ಲದ ವಿಚಾರ ಕೇಳಿ ಮುಕ್ತಾರ್ ಹಾಗೂ ನಫೀಸಾದ ರುಬೀನಾಳನ್ನು ಆಮೀನಾದರ ಮನೆಯಲ್ಲಿ ಬಿಟ್ಟು ಹೋದರು. ಇತ್ತ ನೌಫಲ್ ಅಶ್ಫಾಕ್ ಹೇಳಿದಂತೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದನು. ಹೋಗುವ ದಾರಿಯಲ್ಲಿ ನಫೀಸಾದ ಎಲ್ಲಾ ವಿಚಾರಗಳನ್ನು ಮುಕ್ತಾರ್ ಬಳಿ ಹೇಳಿದರು. ಇದರಲ್ಲೇನೋ ಮೋಸದ ಆಟ ಇದೆ ಎಂದು ಮುಕ್ತಾರಿಗೂ ಅನಿಸಿತು.

ಮುಂದೆ ಓದಿ…….

ಮುಕ್ತಾರ್ ಹಾಗೂ ನಫೀಸಾದ ಅಜ್ಜನ ಮನೆ ತಲುಪಿದ್ದೇ ತಡ ಅವರು ಯೋಚಿಸಿದಕ್ಕಿಂತ ಪರಿಸ್ಥಿತಿ ಭಿನ್ನವಾಗಿತ್ತು. ಅವರು ಅದಾಗಲೇ ಅಜ್ಜನನ್ನು ಕರೆದುಕೊಂಡು ಹಾಸ್ಪಿಟಲ್ ಹೋಗಿದ್ದರು. ಇನ್ನು ಏನು ಮಾಡುವುದು ಎಂದು ಪ್ರಶ್ನಾರ್ಥಕವಾಗಿ ನಫೀಸಾದ ಮಗನ ಮುಖ ನೋಡಿದರು.

ಅಮ್ಮನ ನೋಟವನ್ನು ಅರ್ಥೈಸಿದ ಮಗ

” ಅಮ್ಮಾ ಬರಲು ಹೇಗೂ ಬಂದಾಗಿದೆ. ಅಜ್ಜನನ್ನು ನೋಡದೆ ಹೋಗುವುದು ಸರಿಯಲ್ಲ. ಸ್ವಲ್ಪ ಹೊತ್ತು ಇಲ್ಲಿ ನಿಂತು ಕಾಯೋಣ. ಅಷ್ಟರಲ್ಲಿ ನಾನು ರುಬೀನಾಳಿಗೆ ಕರೆ ಮಾಡಿ ತಿಳಿಸುತ್ತೇನೆ ಎಂದನು. ಅದರಂತೆ ಆಮೀನಾದರಿಗೆ ಕರೆ ಮಾಡಿದನು.

ಆಮೀನಾದ ಕರೆ ರಿಸೀವ್ ಮಾಡಿದವರೇ ರುಬೀನಾಳ ಕೈಯಲ್ಲಿ ಫೋನ್ ನೀಡಿದರು. ಮುಕ್ತಾರ್ ಪರಿಸ್ಥಿತಿಯನ್ನು ರುಬೀನಾಳಲ್ಲಿ ವಿವರಿಸಿದವನೇ ಸ್ವಲ್ಪ ಹೊತ್ತು ನೀನು ಆಮೀನಾದರ ಮನೆಯಲ್ಲಿ ನಿಲ್ಲು ಎಂದನು.

“ಪರವಾಗಿಲ್ಲ ಅಣ್ಣಾ.. ನಾನಿಲ್ಲಿ ಚೆನ್ನಾಗಿದ್ದೇನೆ. ನನ್ನ ಬಗ್ಗೆ ನೀವು ಯೋಚನೆ ಮಾಡಬೇಡಿ ” ಎಂದು ರುಬೀನಾ ಭರವಸೆಯ ಮಾತುಗಳನ್ನು ಹೇಳಿದಾಗ ಮುಕ್ತಾರ್ ಮನಸ್ಸಿಗೆ ನೆಮ್ಮದಿಯಾಯಿತು.

” ಒಂದು ವೇಳೆ ಅಜ್ಜನನ್ನು ಅಡ್ಮಿಟ್ ಮಾಡಿದರೆ ನಾನು ನಾಳೆ ಅಲ್ಲಿಗೆ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ” ಎಂದು ರುಬೀನಾಳಲ್ಲಿ ಹೇಳಿ ಕರೆ ಕಟ್ ಮಾಡಿದನು.

ಕರೆ ಕಟ್ ಆದ ನಂತರ ರುಬೀನಾ ಆಮೀನಾದರ ಕೈಯಲ್ಲಿ ಮೊಬೈಲ್ ಕೊಟ್ಟಳು.ಮುಕ್ತಾರ್ ಹೇಳಿದ ವಿಚಾರಗಳನ್ನು ಹೇಳಿದಳು. ಆಮೀನಾ ಅವರು ಅಜ್ಜನ ಆರೋಗ್ಯಕ್ಕೆ ಆಗಿ ದುಆ ಮಾಡಿದರು.

ಅಂದಿನ ಸಮಯ ಅದು ಹೇಗೆ ಹೋಯಿತೋ ಗೊತ್ತೇ ಆಗಲಿಲ್ಲ ರುಬೀನಾಳಿಗೆ. ಸಂಜೆ ಹೊತ್ತಿಗೆ ಯಾರೋ ತನ್ನ ಮನೆಯ ಬಾಗಿಲ ಬಳಿ ಬಂದು ತನ್ನ ಅಮ್ಮನ ಹೆಸರು ಎತ್ತಿ ಕರೆಯುವುದು ಕೇಳಿಸಿತು. ಅರೇ ಯಾರಿದು ಈಗ ಬಂದು ತನ್ನ ಅಮ್ಮನ ಹೆಸರನ್ನು ಎತ್ತಿ ಕರೆಯುತ್ತಾ ಇದ್ದಾರೆ ಎಂದು ಮೆಲ್ಲಗೆ ಆಶ್ಚರ್ಯದಿಂದ ಆಮೀನಾದರವರ ಮನೆಯ ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಆ ವ್ಯಕ್ತಿಯ ನೋಡಿ ಅವಳಿಗೆ ಮತ್ತೂ ಆಶ್ಚರ್ಯ ಆಯಿತು. ಅರೇ ಯಾವತ್ತೂ ಬಾರದ ಇವರು ಇವತ್ತೇಕೆ ಬಂದಿದ್ದಾರೆ? ಅದೂ ಅಲ್ಲದೆ ಈಗ ಅಮ್ಮ ಕೂಡ ಮನೆಯಲ್ಲಿ ಇಲ್ಲ. ಏನು ಮಾಡಲಿ? ಹೊರಗೆ ಹೋಗಿ ಅಮ್ಮ ಇಲ್ಲ ಎಂದು ಹೇಳಲೇ ? ಅಥವಾ ಕರೆದು ಕರೆದು ಯಾರೂ ಇಲ್ಲ ಎಂದು ತಿಳಿದು ಹಿಂದೆ ಹೋಗುವಾರೆ? ಎಂದೆಲ್ಲಾ ಆಕೆಯ ಮನಸ್ಸು ಯೋಚಿಸುತ್ತಿತ್ತು.

ಬೇಡ ತಿಳಿದೂ….ತಿಳಿದೂ ಸತಾಯಿಸುವುದು ಸರಿಯಲ್ಲ ಎಂದು ಎನಿಸಿದ ರುಬೀನಾ ಮೆಲ್ಲಗೆ ಹೊರಗೆ ಹೋದಳು.

ಹತ್ತಿರ ಹೋದವಳೇ ಮೆಲು ಧ್ವನಿಯಲ್ಲಿ ಅಪ್ಪಾ ಎಂದು ಕರೆದಳು.

ಈಕೆ ಕರೆದ ಧ್ವನಿ ಕೇಳಿ ಆ ವ್ಯಕ್ತಿ ಹಿಂದಿರುಗಿ ಈಕೆಯತ್ತ ನೋಡಿದರು.

” ಎಲ್ಲಿ ನಿನ್ನ ಅಮ್ಮಾ…? ಆಗದಿಂದಲೂ ಕರೆಯುತ್ತಿದ್ದೇನೆ . ಕೇಳಿಸುತ್ತಾ ಇಲ್ವಾ ? ಒಂದು ಮಾತು ಕೂಡ ಆಡುತ್ತಿಲ್ಲ. ಏನು ಇಲ್ಲಿ ಭಿಕ್ಷೆ ಬೇಡಲು ಬಂದು ನಿಂತಿದ್ದೇನೆ ಎಂದು ಎನಿಸಿದ್ದೀರಾ ಹೇಗೆ ? ಅವರು ಗಡುಸಾದ ಧ್ವನಿಯಲ್ಲೇ ಕೇಳಿದರು.

ಮುಕ್ತಾರ್ ಸುಮ್ಮನೆ ಅಲ್ಲ ಇವರನ್ನು ದ್ವೇಷಿಸುವುದು. ಇವರ ಈ ಬುದ್ಧಿಗಾಗಿಯೇ. ಯಾವಾಗಲಾದರೂ ಒಮ್ಮೆ ಸಿಗುವಾಗ ಒಂದು ಪ್ರೀತಿಯಲ್ಲಿ ಎರಡು ಮಾತನಾಡಿದರೆ ಅದೇನಾಗುತ್ತದೆ ಇವರಿಗೆ. ಯಾವುದಕ್ಕೂ ನಮಗೆ ಆ ಭಾಗ್ಯ ಇಲ್ಲ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಇರುತ್ತಾಳೆ.

“ಏನು ಗೊಂಬೆ ಥರ ಹಾಗೇ ನಿಂತಿದ್ದೀಯಾ? ಏನು ಬಾಯಿ ಬರೋದಿಲ್ಲವೇನು ಮಾತನಾಡೋದಿಕ್ಕೆ?” ಎಂಬ ಅವರ ಧ್ವನಿಯು ಆಕೆಯನ್ನು ಯೋಚನಾ ಲಹರಿಯಿಂದ ಹೊರಬರುವಂತೆ ಮಾಡಿತು.

” ಅಮ್ಮ ಇಲ್ಲ. ಅಜ್ಜನಿಗೆ ಉಷಾರಿಲ್ಲ ಎಂದು ವಿಷಯ ತಿಳಿದು ಮುಕ್ತಾರ್ ಹಾಗೂ ಅಮ್ಮ ಊರಿಗೆ ಹೋಗಿದ್ದಾರೆ. ಆದರೆ ಅಜ್ಜನನ್ನು ಹಾಸ್ಪಿಟಲ್ ಕರೆದುಕೊಂಡು ಹೋಗಿದ್ದಾರೆ ಎಂದು ಅಲ್ಲೇ ಉಳಿದುಕೊಂಡಿದ್ದಾರೆ. “

” ಹೋಗುವಾಗ ಒಂದು ಮಾತು ಪತಿಯ ಬಳಿ ಹೇಳಬೇಕು ಎನ್ನೋ ಪ್ರಜ್ಞೆ ಇಲ್ಲಾ ಅವಳಿಗೆ?”

ತನ್ನ ತಂದೆಯ ಪ್ರಶ್ನೆ ಆಕೆಯನ್ನು ಆಶ್ಚರ್ಯಕ್ಕೀಡು ಉಂಟು ಮಾಡಿತು.

ಯಾವುದೇ ಕಷ್ಟ – ಸುಖದಲ್ಲೂ ನಮ್ಮನ್ನು ನೋಡಲು ಬರುವುದಿಲ್ಲ. ಒಂದು ಹೊತ್ತಿನ ತುತ್ತು ತನ್ನ ಹೆಂಡತಿ , ಮಕ್ಕಳು ತಿಂದಿದ್ದಾರ ಎಂದು ನೋಡಲು ಬಾರದ ಇವರು ಈಗ ಹೀಗೆ ಕೇಳುತ್ತಾ ಇದ್ದಾರಲ್ಲ ಎಂದು. ಆದರೂ ಆಕೆ ಏನೂ ಮಾತನಾಡಲಿಲ್ಲ. ಅವರೊಂದಿಗೆ ಮಾತನಾಡಿದರೆ ತನ್ನ ಸಮಯವೇ ವ್ಯರ್ಥ ಎಂದು ಆಕೆಗೆ ತಿಳಿದಿತ್ತು.

“ಸರಿ ನೀನೊಬ್ಬಳೇ ಏನು ಮಾಡುತ್ತೀಯಾ ? ಎಲ್ಲಿ ಕೂರುತ್ತೀಯಾ?”

” ನಾನು ಆಮೀನಾದರ ಮನೆಯಲ್ಲಿ ಇದ್ದೇನೆ. ಇವತ್ತು ರಾತ್ರಿ ಇಲ್ಲೇ ಇರುತ್ತೇನೆ. ನಾಳೆ ಅವರಿಗೆ ಬರಲು ಅಸಾಧ್ಯ ಆದರೆ ಮುಕ್ತಾರ್ ಬಂದು ನನ್ನನ್ನು ಕರೆದುಕೊಂಡು ಹೋಗುವನು.”

” ಏನು ನೀನು ಕಂಡವರ ಮನೆಯಲ್ಲಿ ಉಳಿದುಕೊಳ್ಳುತ್ತೀಯಾ ? ಏನು ನಿನ್ನ ಅಪ್ಪನಾದ ನಾನು ಸತ್ತಿದ್ದೇನೆ ಎಂದುಕೊಂಡಿದ್ದೀಯಾ ಹೇಗೆ?ಕಂಡ ಕಂಡವರ ಮನೆಯಲ್ಲಿ ಉಳಿದುಕೊಳ್ಳಲು ನಾಚಿಕೆ ಆಗೋದಿಲ್ಲವೇ ನಿನಗೆ. ನಡಿ ಮನೆಗೆ ಹೋಗೋಣ “ಎಂದು ಗದರಿಸಿದಂತೆಯೇ ಹೇಳಿದರು.

ತನ್ನ ತಂದೆಯ ಮಾತು ಕೇಳಿ ರುಬೀನಾ ಆಘಾತಕ್ಕೆ ಒಳಗಾದಳು. ಏನು ಇವರ ಮನೆಗೆ ಹೋಗಬೇಕಾ? ಒಳ್ಳೆಯ ಇಕ್ಕಟ್ಟಿಗೆ ಸಿಲುಕಿದೆ ಅಲ್ಲವೇ ಎಂದು ಅವಳ ಮನಸು ಯೋಚಿಸುತ್ತಿತ್ತು.

ತಂದೆಯ ಮಾತು ಕೇಳಿ ರುಬೀನಾ ಅವರ ಮನೆಗೆ ಹೊರಡುವಳೇ

ಆಪತ್ತು ಎನ್ನುವುದು ಆಕೆಯ ಬೆನ್ನ ಹಿಂದೆ ದುಂಬಾಲು ಬಿದ್ದಿದೆಯೇ ?

ಮುಂದುವರೆಯುವುದು….

Share this on:
error: Content is protected !!