ದೂರ ತೀರದ ಪಯಣ (ಕಾದಂಬರಿ)
ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್

🖋️ ಶರೀನಾ ಸಲೀಮ್
# ಉಮ್ಮು ಶಹೀಮ್ #

ಸಂಚಿಕೆ – 10

ಆಮೀನಾದರ ಮನೆಯಲ್ಲಿ ಇದ್ದ ರುಬೀನಾಳಿಗೆ ತನ್ನ ಮನೆಯ ಬಳಿ ಯಾರೋ ಬಂದಂತಾಗುತ್ತದೆ. ಹೊರಗೆ ಹೋಗಿ ನೋಡಿದರೆ ಆಕೆಯ ತಂದೆ. ತನ್ನೊಂದಿಗೆ ಬಾ ಎಂದು ಆಕೆಯೊಂದಿಗೆ ಆಜ್ಞಾಪಿಸಿದರು.

ಮುಂದೆ ಓದಿ…….

ಬಾ ಹೊರಡು…. ಮನೆಗೆ ಹೋಗೋಣ. ನಿನ್ನ ಅಮ್ಮನ ಅಹಂಕಾರ ನೋಡು. ಆಕೆ ಬೇಕೆಂದೇ ನಿನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾಳೆ. ಊರವರು ಏನು ಹೇಳಲಿಕ್ಕಿಲ್ಲ. ತಂದೆ ಅನ್ನುವವನು ಊರಿನಲ್ಲಿ ಇದ್ದಾನೆ. ಯಾರು ಯಾರ ಮನೆಯಲ್ಲಿ ಮದುವೆ ಪ್ರಾಯಕ್ಕೆ ಬಂದ ಹುಡುಗಿಯನ್ನು ಬಿಟ್ಟು ಹೋಗಿದ್ದಾರೆ ಎನ್ನಲಿಕ್ಕಿಲ್ಲವೇ ?ಎನ್ನುವ ತಂದೆಯ ಮಾತು ರುಬೀನಾಳನ್ನು ಆಶ್ಚರ್ಯಕ್ಕೀಡು ಉಂಟು ಮಾಡಿತು.

ತನ್ನ ಹೆಂಡತಿ ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ಯಾರದೋ ಹಿಂದೆ ಹೋಗುವಾಗ ಊರವರು ಯೋಚಿಸಲಿಲ್ಲವೇ ? ಆಗ ಇರದ ಊರವರ ಚಿಂತೆ ಈಗ ಏಕೆ? ಒಂದು ದಿನವಾದರೂ ತನ್ನ ಮಕ್ಕಳು ಹಸಿವೆಯಿಂದ ಬಳಲುತ್ತಿದ್ದಾರ ಎಂದು ನೋಡಲು ಬಾರದವರಿಗೆ ಈಗ ಈ ಚಿಂತೆ? ಇದೂ ಒಂದು ವಿಚಿತ್ರವೇ ಸರಿ ಎಂದು ಆಕೆಯ ಮನಸ್ಸು ಹತ್ತಾರು ಯೋಚಿಸುತ್ತಿತ್ತು.

” ಏನು ಯೋಚಿಸುತ್ತಾ ಇದ್ದೀಯಾ? ನನ್ನ ಬಳಿ ಅಷ್ಟೊಂದು ಸಮಯ ಇಲ್ಲ. ಹೋಗು ಬೇಗ ಬುರ್ಖಾ ಧರಿಸಿ ಬಾ… ” ಈಗ ಅವರ ಮಾತಿನಲ್ಲಿ ಆಜ್ಞೆ ಇತ್ತು.

” ಇಲ್ಲಾ ಅಪ್ಪಾ… ಮುಕ್ತಾರಿಗೆ ನಾನು ಅಲ್ಲಿ ಬರುವುದು ಸರಿ ಕಾಣಿಸೋದಿಲ್ಲ. ನಾನು ಬರುವುದಿಲ್ಲ. ನಾಳೆ ಬೆಳಿಗ್ಗೆ ಆತ ನನ್ನನ್ನು ಕರೆದುಕೊಂಡು ಹೋಗುತ್ತಾನೆ. ಹಾಗಾಗಿ ಇವತ್ತೊಂದು ದಿವಸ ನಾನು ಇಲ್ಲಿ ಇರುತ್ತೇನೆ.”

ಅಷ್ಟರಲ್ಲಿ ಅವರ ಕಣ್ಣು ಕೋಪದಿಂದ ಕೆಂಡಾಮಂಡಲ ಆಯಿತು.

” ಒಂದು ತಂದೆಯ ಮಾತಿಗೆ ಹೇಗೆ ಬೆಲೆ ಕೊಡಬೇಕು ಎಂದು ನಿನಗೆ ನಿನ್ನ ಅಮ್ಮ ಕಲಿಸಿಲ್ಲವೇ ? ಕಲಿಸುವುದಾದರೂ ಹೇಗೆ? ಸ್ವತಃ ಆಕೆಗೆ ಬುದ್ಧಿ ಇದ್ದರೆ ತಾನೇ ? “

ತನ್ನ ಅಮ್ಮನ ಬಗ್ಗೆ ಆ ರೀತಿ ಹೇಳುವುದನ್ನು ಆಕೆಗೆ ಕೇಳಲಾಗಲಿಲ್ಲ. “ದಯವಿಟ್ಟು ಅಪ್ಪಾ ಇಲ್ಲದ ಮಾತೆಲ್ಲ ನೀವು ಹೇಳಬೇಡಿ. ಅಮ್ಮನ ಬಗ್ಗೆ ಇಲ್ಲಸಲ್ಲದನ್ನು ಹೇಳುವುದು ನನ್ನಿಂದ ಕೇಳಿಸಲು ಆಗುವುದಿಲ್ಲ.ನಿಮಗೇನು ನಾನೀಗ ನಿಮ್ಮ ಮನೆಗೆ ಬರಬೇಕು ತಾನೇ.. ಸರಿ ಬರುತ್ತೇನೆ ನಿಲ್ಲಿ” ಎಂದು ನುಡಿದವಳೇ ಆಮೀನಾದರ ಮನೆಯ ಒಳ ಹೊಕ್ಕಳು.

ಆಮೀನಾದರಿಗೆ ಈಕೆಯ ಬಾಡಿದ ಮುಖ ನೋಡಿ ಏನೋ ವಿಷಯ ಇದೆ ಎಂದೆನಿಸಿತು. ಅವರು ರುಬೀನಾಳಲ್ಲಿ ವಿಷಯ ಕೇಳಿದರು. ರುಬೀನಾ ಅವರಲ್ಲಿ ವಿಷಯ ತಿಳಿಸಿದರು.

ಅವರಿಗೆ ಆಘಾತವಾಯಿತು. ಅರೇ ಹಾಗಾದರೆ ನೀನು ಹೋಗುತ್ತೀಯಾ.. ಮುಕ್ತಾರ್ ಹಾಗೂ ನಿನ್ನಮ್ಮ ನಿನ್ನ ಜವಾಬ್ದಾರಿ ನಮಗೆ ಒಪ್ಪಿಸಿ ಹೋಗಿದಾರಲ್ಲ? ಏನು ಮಾಡುವುದು ಹೇಳು? ಈಗ ನೀನು ಹೋದರೆ ಹೇಗೆ? ಆಮೀನಾದ ಆತಂಕದಿಂದಲೇ ಕೇಳಿದರು.

“ಅರೇ ಆಮೀನಾದ ನೀವು ಆತಂಕ ಪಡಬೇಡಿ. ಅವರ ಬಾಯಿಂದ ನಿಮಗೂ ಬೈಗುಳ ಸಿಗುವುದು ನನಗೆ ಇಷ್ಟ ಇಲ್ಲ.ನನಗೊಂದು ಉಪಕಾರ ಮಾಡುತ್ತೀರಾ ?ಎಂದು ನಯವಾಗಿಯೇ ಆಮಿನಾದರಲ್ಲಿ ರುಬೀನಾ ಕೇಳಿದಳು.

“ಅರೇ ಬಿಡ್ತು ಅನ್ನು. ಉಪಕಾರ ಮಾಡುತ್ತೀರಾ ಎಂದು ಕೇಳುವುದು ಯಾಕೆ? ಮಾಡುತ್ತೇನೆ ಹೇಳು ಏನು?”

ನನಗೆ ನಿಮ್ಮ ಮೊಬೈಲಿನಿಂದ ಮುಕ್ತಾರಿಗೆ ಒಮ್ಮೆ ಕರೆ ಮಾಡಿ ಕೊಡಿ. ನಾನು ಆತನಲ್ಲಿ ಮಾತನಾಡಿ ಹೇಳುತ್ತೇನೆ ವಿಷಯವನ್ನು. ಆತ ಏನಾದರು ಪರಿಹಾರ ಕಂಡು ಹಿಡಿಯುವನು.”

ಈ ರೀತಿ ರುಬೀನಾ ಹೇಳಿದಾಗ ಆಮೀನಾದ ತನ್ನ ಮೊಬೈಲ್ ತೆಗೆದು ಕೊಟ್ಟರು. ಆಕೆ ಮುಕ್ತಾರ್ ನಂಬರಿಗೆ ಡಯಲ್ ಮಾಡತೊಡಗಿದಳು. ಎಷ್ಟೇ ಕರೆ ಮಾಡಿದರೂ ಮುಕ್ತಾರ್ ತೆಗೆಯುತ್ತಲೇ ಇರಲಿಲ್ಲ. ರುಬೀನಾಳ ಹೃದಯ ಬಡಿತ ಜೋರಾಯಿತು.

“ಅರೇ ಮುಕ್ತಾರ್ , ಕಾಲ್ ತೆಗೆಯೋ ಪ್ಲೀಸ್…. ನಾನು ಎಂತಹ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ಉಫ್!!! ನಾನೇನು ಮಾಡಲಿ? ಯಾ ಅಲ್ಲಾಹ್… ಇದೆಂಥಾ ಪರೀಕ್ಷೆ ? ನಾನು ಇದರಿಂದ ಪಾರಾಗುವುದಾದರೂ ಹೇಗೆ ? ಎಂದು ಆಕೆ ತನ್ನ ಮನದಲ್ಲಿಯೇ ಯೋಚಿಸುತ್ತಾ ಇದ್ದಳು.

” ಏನು ಮಾಡುತ್ತಾ ಇದ್ದೀಯಾ ? ಹೊರಡಲಿಲ್ಲವೇ ನೀನು? ಎಷ್ಟು ಹೊತ್ತು ಕಾಯಲಿ ನಾನಿಲ್ಲಿ? ನನ್ನಲ್ಲಿ ಅಷ್ಟು ಸಮಯ ಇಲ್ಲ. ಬೇಗ ಬಾ ” ಎಂದು ತನ್ನ ತಂದೆಯ ಮಾತು ಕೇಳಿ ಬಂದಾಗ ಆಕೆ ಇನ್ನು ತನಗಾವುದೇ ದಾರಿ ಇಲ್ಲ ಎಂದು ತಿಳಿದು ತನ್ನ ತಂದೆಯ ಜೊತೆ ಹೋಗಲು ಹೊರಗೆ ಹೆಜ್ಜೆ ಹಾಕಿದಳು.

ಈ ಹೆಜ್ಜೆಯು ಆಕೆಯನ್ನು ಎತ್ತ ಕೊಂಡೊಯ್ಯುವುದು ?

ಮುಂದುವರೆಯುವುದು….

Share this on:
error: Content is protected !!