Latest Posts

ದೂರ ತೀರದ ಪಯಣ (ಕಾದಂಬರಿ)
ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್

🖋️ ಶರೀನಾ ಸಲೀಮ್
# ಉಮ್ಮು ಶಹೀಮ್ #
ಸಂಚಿಕೆ – 11


ಮುಕ್ತಾರಿಗೆ ಅದೆಷ್ಟು ಕರೆ ಮಾಡಿದರೂ ಆತ ಸ್ವೀಕರಿಸುತ್ತಾ ಇರಲಿಲ್ಲ. ಇನ್ನು ತನಗೆ ಬೇರೆ ವಿಧಿಯೇ ಇಲ್ಲ ಎಂದು ತಿಳಿದ ರುಬೀನಾ ತನ್ನ ತಂದೆಯೊಂದಿಗೆ ಹೊರಡಲು ಸಿದ್ದಳಾಗುತ್ತಾಳೆ.
ಯಾಕೋ ತಿಳಿಯದೆ ಆಕೆಯ ಕಣ್ಣುಗಳಿಂದ ಅಶ್ರುಧಾರೆ ಇಳಿಯುತ್ತಿತ್ತು.
ಆಮೀನಾದರಿಗೆ ಹಾಗೂ ಅವರ ಮಕ್ಕಳಿಗೆ ಆಕೆಯನ್ನು ನೋಡಿ ಅತೀವ ದುಃಖವಾಯಿತು. ಆದರೆ ಏನೂ ಮಾಡುವ ಪರಿಸ್ಥಿತಿ ಅವರದಾಗಿರಲಿಲ್ಲ.


ನಾನು ತಂದೆಯೊಂದಿಗೆ ಹೋಗುತ್ತೇನೆ. ದಯವಿಟ್ಟು ಮುಕ್ತಾರ್ ಕರೆ ಮಾಡಿದರೆ ವಿಷಯ ತಿಳಿಸಿ. ನನಗೆ ಅಲ್ಲಿಂದ ಕರೆ ಮಾಡಲು ಸಾಧ್ಯವಾಗುತ್ತದೋ ಇಲ್ಲವೋ ಅದೇ ಚಿಂತೆ. ಸರಿ ಏನಾದರೂ ಆಗಲಿ ಇವತ್ತೊಂದು ರಾತ್ರಿ ಹೇಗಾದರೂ ಕಳೆದು ಬಿಡುತ್ತೇನೆ. ಸರಿ ಬರುತ್ತೇನೆ ಎಂದು ಹೇಳಿ ಅವರ ಮನೆಯಿಂದ ಹೊರಗೆ ಹೋದಳು.
ಆಕೆ ಕಣ್ಣಿನಿಂದ ಮರೆಯಾಗುವ ತನಕ ಆಮೀನಾದ ಹಾಗೂ ಮಕ್ಕಳು ನೋಡಿದರು. ಮತ್ತೆ ಒಳಗೆ ಬಂದರು.


ಅಷ್ಟರಲ್ಲಿ ಅವರ ಕಣ್ಣಿಗೆ ಅವರ ಮೊಬೈಲ್ ಕಾಣಿಸಿತು. ತನ್ನ ಮಕ್ಕಳೊಂದಿಗೆ ಮತ್ತೊಮ್ಮೆ ಮುಕ್ತಾರ್ ನಂಬರ್ ಒತ್ತಿ ಕೊಡುವಂತೆ ಹೇಳಿದರು.
ಅವರ ಮಕ್ಕಳು ಅವರು ಹೇಳಿದಂತೆ ಮುಕ್ತಾರ್ ನಂಬರ್ ಒತ್ತಿ ಕೊಟ್ಟರು.
ತುಂಬಾ ಹೊತ್ತು ಫೋನ್ ರಿಂಗ್ ಆದ ನಂತರ ಆ ಕಡೆಯಿಂದ ಕರೆ ಸ್ವೀಕರಿಸುವುದು ಕೇಳಿತು. ಆಮೀನಾದ ತಕ್ಷಣ ಆ ಧ್ವನಿ ನಫೀಸಾದರೆಂದು ಪತ್ತೆ ಹಚ್ಚಿದರು.


ಸಲಾಂ ಹೇಳುತ್ತಾ ಆಮೀನಾದ ಮಾತನಾಡಲು ಪ್ರಾರಂಭಿಸಿದರು.
” ಅಲ್ಲಾ ನಫೀಸಾ…. ಆಗದಿಂದ ಮುಕ್ತಾರಿಗೆ ಕರೆ ಮಾಡುತ್ತಾ ಇದ್ದೇವೆ. ಯಾಕೆ ಮುಕ್ತಾರ್ ಕರೆ ಸ್ವೀಕರಿಸುತ್ತಾ ಇಲ್ಲ. ಆ ಹುಡುಗಿ ನೋಡಿ ,ನೋಡಿ ಕೊನೆಗೆ ಹೋದಳು.”
” ಮುಕ್ತಾರ್ ಇಲ್ಲ ಆಮೀನಾ… ಅವನು ಅವನ ಮಾವನ ಜೊತೆ ನನ್ನ ತಂದೆಯೊಡನೆ ನಿಲ್ಲಲೆಂದು ಹಾಸ್ಪಿಟಲ್ ಹೋಗಿದ್ದಾನೆ. ಹೋಗುವಾಗ ಮರೆತು ಮೊಬೈಲ್ ಬಿಟ್ಟು ಹೋಗಿದ್ದಾನೆ. ಏನು ವಿಷಯ ? ಏನಾಯಿತು? ” ಆತಂಕದಿಂದಲೇ ಕೇಳಿದರು ನಫೀಸಾದ.


” ಏನಿಲ್ಲ ನಫೀಸಾ…. ನಿನ್ನ ಗಂಡ ನಿಮ್ಮ ಮನೆಯ ಹತ್ತಿರ ಬಂದಿದ್ದರು. ನೀನು ಇಲ್ಲದ್ದನ್ನು ನೋಡಿ ರುಬೀನಾಳನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆಗೆ ಹೋಗಲೇ ಮನಸ್ಸಿರಲಿಲ್ಲ. ಆದರೆ ನಿನ್ನ ಗಂಡ ಬಲವಂತವಾಗಿ ಆಕೆಯನ್ನು ಕರೆದುಕೊಂಡು ಹೋದರು. “
ಆಮೀನರ ಮಾತು ಕೇಳಿ ಆಕಾಶವೇ ಕಳಚಿ ಬಿದ್ದಂತಾಯಿತು ನಫೀಸಾದರಿಗೆ.
” ಅಯ್ಯೋ ಏನು ಹೇಳುತ್ತಾ ಇದ್ದೀಯಾ ? ಒಂದು ವೇಳೆ ಮುಕ್ತಾರಿಗೆ ಈ ವಿಷಯ ತಿಳಿದರೆ ಆತ ದೊಡ್ಡ ಗಲಾಟೆಯೇ ಮಾಡಬಹುದು. ಯಾ ಅಲ್ಲಾಹ್!!!!!! ನಾನೇನು ಮಾಡಲಿ ಈಗ? ಒಂದು ವೇಳೆ ನಾಳೆ ಆತ ಅಲ್ಲಿಗೆ ಬಂದರೂ ಬರಬಹುದು. ಎಂತಹ ಪರಿಸ್ಥಿತಿ ಇದು.”


ಅವರ ಮಾತಿನಲ್ಲಿ ಇದ್ದ ಆತಂಕ ಗಮನಿಸಿದ ಆಮೀನಾದರಿಗೆ ದುಃಖ ಆಯಿತು.
ಅವಳು ಹೇಳೋಣ ಎಂದು ಅದೆಷ್ಟು ಕರೆ ಮಾಡಿದರೂ ನೀವು ರಿಸೀವ್ ಮಾಡಿಲ್ಲ ನಫೀಸಾ. ಹಾಗಾಗಿ ಆಕೆ ಹಾಗೆಯೇ ಹೋದಳು. ಇರಲಿ ಬಿಡಿ ನಫೀಸಾ … ಒಂದು ದಿನದ ವಿಷಯ ತಾನೇ … ನಾಳೆ ಮುಕ್ತಾರ್ ಬಂದರೆ ಹೇಗೂ ವಿಷಯ ತಿಳಿಯುತ್ತದೆ . ಅಲ್ಲಿಂದ ಕರೆದುಕೊಂಡು ಬಂದರಾಯಿತು. ಆಕೆ ಅವಳಾಗಿಯೇ ಹೋದದ್ದು ಅಲ್ಲ ಅಲ್ವಾ ಎಂದು ಆಮೀನಾ ನಫೀಸಾದರನ್ನು ಸಮಾಧಾನ ಪಡಿಸಿದರು.


” ಅರೇ ಆಮೀನಾ… ನನ್ನ ಚಿಂತೆ ಅದಲ್ಲ. ಆಕೆಯ ತಂದೆ ಜೊತೆ ಇದ್ದರೆ ನನಗೇನು ಅಭ್ಯಂತರ ಹೇಳಿ? ಆದರೆ ಅವರ ಪತ್ನಿಗೆ ನಮ್ಮನ್ನು ಕಂಡರೆ ಆಗಲ್ಲ. ಆದಷ್ಟು ಆಕೆ ಅವರನ್ನು ನಮ್ಮಿಂದ ದೂರ ಮಾಡಿಸುವುದು ತಿಳಿದೇ ಇದೆ. ಅದಲ್ಲದೆ ಆಕೆಯ ತಮ್ಮನೊಬ್ಬ ಕೆಲವೊಮ್ಮೆ ಆಕೆಯ ಮನೆಗೆ ಬರುತ್ತಾನಂತೆ. ಆತನ ವ್ಯಕ್ತಿತ್ವ ಸರಿ ಇಲ್ಲ. ಆತನು ಅಲ್ಲಾಹನನ್ನು ಮರೆತು ದಿನ ಕಳೆಯುತ್ತಾನೆ. ಆತನಿಗೆ ಇಲ್ಲದ ದುಶ್ಚಟಗಳು ಇಲ್ಲ ಎಂದು ಮುಕ್ತಾರ್ ಹೇಳಿದ ನೆನಪು. ಹಾಗಾಗಿ ನನಗೆ ಭಯ ಆಗುತ್ತಿದೆ ಎಂದು ನಫೀಸಾದ ಹೇಳಿದಾಗ ಆಮೀನಾದರಿಗೆ ಅಯ್ಯೋ ಪಾಪ ಎಂದು ಎನಿಸಿತು. ಆದರೂ ಏನಾಗಲಿಕಿಲ್ಲ ಎಂದು ಅವರಿಗೆ ಭರವಸೆಯ ಮಾತುಗಳನ್ನು ಹೇಳಿ ಸಮಾಧಾನ ಮಾಡಿ ಕರೆ ಕಟ್ ಮಾಡಿದರು.
ನಫೀಸಾದರಿಗೆ ತನ್ನ ಮಗಳದೇ ಯೋಚನೆ ಆಗಿತ್ತು. ಅಯ್ಯೋ ದೇವರೇ ನನ್ನ ಮಗಳು ಅಲ್ಲಿ ಕ್ಷೇಮವಾಗಿ ಇರಲಿ ಎಂದು ಮನದಲ್ಲಿಯೇ ಲೋಕದ ಅಧಿಪತಿಯೊಂದಿಗೆ ಬೇಡಿಕೊಂಡರು.ಒಂದೇ ಸಮನೆ ರಿಂಗ್ ಆಗುತ್ತಿದುದನ್ನು ನೋಡಿದ ನೌಫಲ್ ತನ್ನ ಮೊಬೈಲ್ ರಿಸೀವ್ ಮಾಡಿದನು.
ಆ ಕಡೆಯಿಂದ ಅಶ್ಫಾಕ್ ಧ್ವನಿ ಕೇಳಿಸಿತು.
” ನೌಫಲ್ ನಾನು ಮೊನ್ನೆ ನಿನ್ನೊಂದಿಗೆ ಹೇಳಿದ ಆ ಯೋಜನೆ ನೆನಪಿದೆ ತಾನೇ… ಆಕೆ ಇಂದು ಇಲ್ಲಿಗೆ ಬಂದಿದ್ದಾಳೆ. ನೀನು ನಾಳೆ ಬೆಳಿಗ್ಗೆ ರುಬೀನಾಳ ಮನೆಗೆ ಹೋಗಬೇಕು. ಹೋದ ನಂತರ ನಾನು ಆಕೆಯಿಂದಲೇ ಅವರಿಗೆ ಕರೆ ಮಾಡಿಸಿ ನಿಜ ವೃತ್ತಾಂತ ತಿಳಿಸುತ್ತೇನೆ ಸರಿಯಾ? ಆದರೆ ನೀನು ನಾನು ಹೇಳಿದ ಸಮಯಕ್ಕೆ ಸರಿಯಾಗಿ ಹೋಗಬೇಕು ಸರೀನಾ? ” ಎಂದು ಕೇಳಿದಾಗ ನೌಫಲ್ ಸರಿ ಎಂದು ಹೇಳಿ ಕರೆ ಕಟ್ ಮಾಡಿದನು.
ಇತ್ತ ಅಶ್ಫಾಕ್ ತನ್ನ ಮನದಲ್ಲಿಯೇ ರುಬೀನಾ ನೀನು ಸಣ್ಣವಳಿರುವಾಗ ನಾನು ನಿನ್ನನ್ನು ನೋಡಿದ್ದು. ಈಗ ನೀನು ಹೇಗಿದ್ದೀಯೋ ನಾನರಿಯೆ… ಇನ್ನು ಸಮಯ ಕಳೆಯಲು ಬಿಡಬಾರದು . ಆದಷ್ಟು ಬೇಗ ಮದುವೆಯಾಗಬೇಕು…. ಎಂದು ಯೋಚಿಸುತ್ತಲೇ ಇದ್ದನು…
ಮುಂದುವರೆಯುವುದು……

Share this on:
error: Content is protected !!