Latest Posts

‘ಆಧ್ಯಾತ್ಮಿಕ ರಂಗದಲ್ಲಿ ಅಪಾರ ಸಾಮರ್ಥ್ಯವನ್ನು ಸಂಪಾದಿಸಿಕೊಂಡು, ಅನೇಕ ಆಧ್ಯಾತ್ಮಿಕ ಗುರುವರ್ಯರುಗಳ ಆಶೀರ್ವಾದಗಳೊಂದಿಗೆ ತನ್ನ ಆತ್ಮ ಜೀವನವನ್ನು ಪರಿಪಾವನಗೊಳಿಸಿದ ಆತ್ಮೀಯ ಗುರು ಶೈಖುನಾ ಬೊಳ್ಳೂರು ಉಸ್ತಾದ್ ಎಂದು ಖ್ಯಾತರಾದ ಅಲ್ ಹಾಜ್ ಮುಹಮ್ಮದ್ ಅಝ್ ಹರ್ ಫೈಝಿ ಉಸ್ತಾದ್’

ಲಕ್ಷ ದ್ವೀಪದ ಸುತ್ತಲೂ ನೀಲಿ ವರ್ಣದ ಕಡಲು ಹಚ್ಚಹಸುರಿನ ತೆಂಗಿನ ಮರಗಳ ಕಲರವ ಪ್ರಶಾಂತ ವಾತಾವರಣ ಅವುಗಳ ಮಧ್ಯೆ ಪ್ರಕಾಶಮಾನವಾಗಿ ಬಂದ ಸ್ವಹಾಬಿವರ್ಯರಾದ ಹಝ್ರತ್ ಉಬೈದುಲ್ಲಾ (ರ.ಅ) ರವರು ಇಸ್ಲಾಂ ಧರ್ಮದ ಪ್ರಬೋಧನೆ ಗಾಗಿ ಪವಿತ್ರ ಇಸ್ಲಾಮಿನ ಪ್ರಭೆಯನ್ನು ಚೆಲ್ಲಿ ಜೀವಂತಗೊಳಿಸಿದ ಲಕ್ಷ ದ್ವೀಪಿನ ಕಿಲ್ತಾನ್ ಎಂಬಲ್ಲಿನ ವಿದ್ವಾಂಸ ಕುಟುಂಬದಲ್ಲಿ 1954ರಲ್ಲಿ ಸಿರಾಜುದ್ದೀನ್ ಕೋಯ ಮುಸ್ಲಿಯಾರ್ ಹಾಗೂ ಕಣ್ಣಿಪುರದ ಮರ್ಹೂಮತ್ ಬೀಫಾತಿಮಾರವರ ಪುತ್ರನಾಗಿ ಶೈಖುನಾ ಬೊಳ್ಳೂರು ಉಸ್ತಾದ್ ಜನಿಸಿದರು.

ತಂದೆಯವರಾದ ಸಿರಾಜುದ್ದೀನ್ ಕೋಯ ಮುಸ್ಲಿಯಾರ್ ಸರಿ ಸುಮಾರು 45 ವರ್ಷ ತನ್ನ ಮರಣದವರೆಗೆ ಲಕ್ಷದ್ವೀಪದಲ್ಲಿ ಖಾಝಿಯಾಗಿದ್ದರು.

ಮಾದರಿಯುತವಾದ ಜೀವನ ನಡೆಸಿ ಇಸ್ಲಾಮಿನ ನೈಜ ಸ್ವರೂಪವಾದ ಅಹ್ಲುಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶಗಳನ್ನು ಪ್ರಚಾರಪಡಿಸಿದರು. ಹಲವು ತ್ವರೀಕತ್ ಗಳ ಶೈಖ್ ಕೂಡಾ ಆಗಿದ್ದರು. 

ಆಧ್ಯಾತ್ಮಿಕ ಚಿಕಿತ್ಸೆಯ ಜನರು ಸಂಕಷ್ಟಗಳಿಗೆ ಪರಿಹಾರ ನೀಡುತಿದ್ದರು.

ಅವರ ತಂದೆ ತಾಜ್ ಮಹಮ್ಮದ್ ಮುಸ್ಲಿಯಾರ್ ಕೂಡ ಖಾಝಿಯಾಗಿದ್ದರು. ಅವರು ಮಂಗಳೂರು ಝೀನತ್ ಭಕ್ಷ್ ಮಸೀದಿ ಅಂಗಳದಲ್ಲಿ, ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೈಯ್ಯದ್ ಮೌಲಾ ರವರ ಮೌಲೂದ್ ರಚಿಸಿದವರು.

 ಅವರ ತಂದೆ ಶೈಖ್ ಅಬ್ದುಲ್ಲಾ ಮುಸ್ಲಿಯಾರ್ ಎಂಬ ಪಂಡಿತರು. ಅವರ ತಂದೆಯಾಗಿದ್ದಾರೆ ಗುಲಾಂ ಮಹಮ್ಮದ್ ಅಹ್ಮದ್ ನಕ್ಷಬಂದಿ (ರ.ಅ) ಅವರ ಮಖ್ ಬರ ಅಮೇನಿ ದ್ವೀಪದಲ್ಲಿದ್ದು ಹಲವಾರು ಕರಾಮತ್ ಗಳಿರುವುದು ಅವರ ವಿಶ್ರಾಂತಿ ತಾಣವು ನೊಂದವರ ಕಷ್ಟ ಕಾರ್ಪಣ್ಯಗಳಿಂದ ಬಳಲುತ್ತಿರುವ ಬಾಳಿನ ದ್ವೀಪ ವಾಗಿದೆ. 

ಪ್ರತಿವರ್ಷವೂ ಅಲ್ಲಿ ಉರುಸ್ ನಡೆಯುತ್ತಲಿದೆ. ಇಂತಹ ವಿದ್ವಾಂಸರ ಔಲಿಯಾಗಳ ಕುಟುಂಬದಲ್ಲಿ ಜನಿಸಿ ಬಂದವರಾಗಿದ್ದಾರೆ ನಮ್ಮೆಲ್ಲರ ಕಣ್ಮಣಿ ಶೈಖುನಾ ಬೊಳ್ಳೂರು ಉಸ್ತಾದ್.

ಶೈಖುನಾರವರ ಸಹೋದರರಾದ ಆಟ್ಟಕೋಯರವರು ಕವರತ್ತಿ ದ್ವೀಪದಲ್ಲಿ ಸರ್ಕಾರಿ ವೈದ್ಯರಾಗಿದ್ದು ಈಗ ರಿಟರ್ಡ್ ಆಗಿದ್ದಾರೆ.

ಮತ್ತೋರ್ವರು ಕರ್ನಾಟಕದ ಹೆಮ್ಮೆಯ ವಿದ್ವಾಂಸ ಮಿತ್ತಬೈಲು ಕೇಂದ್ರೀಕರಿಸಿ ಕಳೆದ 52 ವರ್ಷಗಳಿಂದ ವಿಜ್ಞಾನದ ಬೆಳಕು ಚೆಲ್ಲಿ. ಸಮಸ್ತ ಕೆರಳ ಜಂ-ಇಯ್ಯತುಲ್ ಉಲಮಾ ಇದರ ಕೇಂದ್ರೀಯ ಮುಶಾವರ ಸದಸ್ಯರಾಗಿದ್ದ ಮರ್ಹೂಮ್ ಶೈಖುನಾ ಮಿತ್ತಬೈಲ್ ಉಸ್ತಾದ್ (ಖ.ಸಿ).

ಇನ್ನೋರ್ವರು ಮರ್ಹೂಮ್ ಕುಂಞ ಕೋಯ. ಮತ್ತೋರ್ವ ಅಬ್ದುಲ್ ನಾಸಿರ್ ಫೈಝಿ ದುಬೈಯಲ್ಲಿ ಮತ್ತೋರ್ವ ಮೊಹಮ್ಮದ್ ರಾಝಿ ಮುಸ್ಲಿಯಾರ್

ಉಸ್ತಾದರ ವಿದ್ಯಾಭ್ಯಾಸದ ಕುರಿತು

ಲೌಕಿಕ ವಿದ್ಯಾಭ್ಯಾಸ ಮತ್ತು ಧಾರ್ಮಿಕ ಪ್ರಾಥಮಿಕ ಶಿಕ್ಷಣ ಊರಲ್ಲೇ ಪಡೆದು ತನ್ನ 12 ವಯಸ್ಸಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಕಲಿಯಬೇಕು ಎಂಬ ಹಂಬಲದಿಂದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೂಚಕ್ಕಾಡ್, ಪಯ್ಯನ್ನೂರು,ತಾಯಿನೇರಿ ನಂತರ ಕರ್ನಾಟಕದ ಮಂಗಳೂರು ತಾಲೂಕಿನ ಜೋಕಟ್ಟೆಯಲ್ಲಿ ಅದರ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಮಲಬಾರಿನ ಮಕ್ಕಾ ಎಂದೇ ಪ್ರಖ್ಯಾತಿ ಹೊಂದಿದ ಪೊನ್ನಾನಿಯಲ್ಲಿ 6 ವರ್ಷಗಳ ಕಾಲ ಹಲವಾರು ವಿದ್ವಾಂಸರಿಂದ ದೀನಿ ಜ್ಞಾನಗಳನ್ನು ಪಡೆದರು. ಅಲ್ಲಿನ ಪ್ರಧಾನ ಗುರುವರ್ಯರು ಶೈಖುನಾ ಮರ್ಹೂಮ್ ಕೆ.ಕೆ ಅಬ್ದುಲ್ಲಾ ಮುಸ್ಲಿಯಾರ್ ಅಗಿದ್ದರು.

  ಅಂದು ಅವರ ಸಹಪಾಠಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರು ಕೊಡಪ್ಪನಕಲ್ ಮನೆತನದ ಸುಪುತ್ರರಾದ ಸಯ್ಯದ್ ಹೈದರ್ ಅಲಿ ಶಿಹಾಬ್ ತಂಞಳ್ ಆಗಿದ್ದರು.

ಪೊನ್ನಾನಿಯಲ್ಲಿ M.A. ಬಿರುದು ಪಡೆದು ವಿಶ್ವವಿಖ್ಯಾತ ವಿದ್ಯಾಲಯವಾದ ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯಾ ಅರಬಿಕ್ ಕಾಲೇಜಿನಲ್ಲಿ ಜ್ಞಾನದ ಸೂರ್ಯ ಸರ್ವ ಮಂಡಲಗಳಲ್ಲೂ, ಅಪಾರ ಪಾಂಡಿತ್ಯ ಹೊಂದಿದ್ದ ಶೈಖುನಾ ಶಂಸುಲ್ ಉಲಮಾ ಮತ್ತು ಕೋಟುಮಲ ಅಬೂಬಕ್ಕರ್ ಮುಸ್ಲಿಯಾರ್, ಎಂ.ಟಿ ಅಬ್ದುಲ್ಲಾ ಮುಸ್ಲಿಯಾರ್ ರವರಲ್ಲಿ ಕಲಿತು MFF ಬಿರುದು ಪಡೆದರು. 

ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರು, ಕಾಞಂಗಾಡ್ ಸಂಯುಕ್ತ ಜಮಾತ್ ಖಾಝಿಯು ಆದ ಶೈಖುನಾ ಸಯ್ಯದ್ ಜಿಫ್ರಿ ಮುತ್ತು ಕೋಯ ತಂಞಳ್ ಮತ್ತು ಸಮಸ್ತ ಕೆರಳ ಜಂ-ಇಯ್ಯತುಲ್ ಉಲಮಾ ಇದರ ಮಾಜಿ ಕಾರ್ಯದರ್ಶಿ ಮರ್ಹೂಮ್ ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್, ಡಾ| ಬಹಾವುದ್ದೀನ್ ನದ್ವಿ ಕುರಿಯಾಡ್ ಅವರ ಸಹಪಾಠಿಗಳಾಗಿದ್ದರು. 

ಉಸ್ತಾದ್ ರವರ ಸೇವೆಯ ಕುರಿತು

 ಶೈಖುನಾರವರು ಎಂ.ಎಫ್.ಎಫ್ ಬಿರುದು ಪಡೆದ ನಂತರ ಮಂಗಳೂರಿನ ಪಡೀಲ್ ಜುಮಾ ಮಸೀದಿಯಲ್ಲಿ ಉತ್ತರ ಕರ್ನಾಟಕದ ಅಂಕೋಲ ಸಮೀಪವಿರುವ ಗಂಗಾವಳಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ, ಅದೇ ರೀತಿ ಬಜ್ಪೆ, ಮರವೂರು, ಬಜಾಲ್, ಹಾಸನ ಮುಂತಾದ ಕಡೆಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿ, ಇದೀಗ ಕರ್ನಾಟಕ ರಾಜ್ಯದ ಹೃದಯ ಭಾಗವಾಗಿರುವ ಮಂಗಳೂರು ಉತ್ತರದಲ್ಲಿ 20 ಕಿ.ಮೀ. ದೂರ ಸಂಚರಿಸಿದರೆ, ನಮಗೆ ಕಾಣಲು ಸಾಧ್ಯವಾಗುವುದು. ಹಳೆಯಂಗಡಿ ಎಂಬ ಊರು, ಊರಿನ ಕುಗ್ರಾಮವಾದ ಬೊಳ್ಳೂರು ಮತ್ತು ಆಸುಪಾಸಿಗೂ ಕೀರ್ತಿ ತಂದು ಬಾನೆತ್ತರಕ್ಕೆ ಏರಿ ಸುವುದರಲ್ಲಿ ಪ್ರಧಾನ ಪಾತ್ರ ವಹಿಸಿ ಸರಿ ಸುಮಾರು 33 ವರ್ಷಗಳು ದಾಟಿದವು. ಕುಟುಂಬ ಸಮೇತವು ಇಲ್ಲಿ ವಾಸವಾಗಿದ್ದು, ಜಾತಿ ಮತ ಭೇದ ಭಾವವಿಲ್ಲದೇ ಎಲ್ಲರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಜಿಲ್ಲೆಯಲ್ಲಿ ಚಿರಪರಿಚಿತರಾದರು. ಒಂದು ದಿವಸವೂ ಬಿಡುವಿಲ್ಲದೆ ಎಲ್ಲಾ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದು, ಶಿಲಾನ್ಯಾಸ ಗ್ರಹಪ್ರವೇಶ, ವಾರ್ಷಿಕ ಸಮಾರಂಭ, ಉದ್ಘಾಟನಾ ಕಾರ್ಯಕ್ರಮ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. 

ನಾಡಿನ ನಾನಾ ಕಡೆಗಳಿಂದ ಜನರು ಬೊಳ್ಳೂರಿಗೆ ಧಾವಿಸುತ್ತಾರೆ. ತಾಳ್ಮೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಶ್ರೀಮಂತರು ಬಡವರನ್ನು ಒಂದೇ ರೀತಿಯಲ್ಲಿ ಕಾಣುತ್ತಾ ವಿನಯದ ಪರ್ಯಾಯವಾಗಿ ನಾಡಿನ ಜನತೆಯ ಪ್ರೀತಿಗೆ ಪಾತ್ರರಾದರು. 

   ಭೌತಿಕ ಸುಖ-ಭೋಗ ದೇಹೇಚ್ಛೆ ಆಡಂಭರ ಮತ್ತು ಅಮಿತಾಬಿಲಾಷೆಗಳಿಗೆ ಕಡಿವಾಣ ಹಾಕಿ ನಿಯಂತ್ರಿಸಿಕೊಳ್ಳುವ ಮೂಲಕ ದೇಹವನ್ನು ದಂಡಿಸಿ ಅಲ್ಲಾಹನ ಸಂತೃಪ್ತಿಯನ್ನು ಮೂಲ ಗುರಿಯನ್ನಾಗಿ ಇಟ್ಟುಕೊಂಡು ಐಹಿಕ ಬದುಕನ್ನು ಸಾರ್ಥಕ ಗೊಳಿಸಬೇಕೆಂಬ ಏಕ ದೇಯ್ಯದಲ್ಲಿ ಚಲಿಸುತ್ತಿರುವ ವಿಶ್ವ ಉಲಮಾಗಳಲ್ಲೇ ಅಗ್ರಗಣ್ಯರಾಗಿದ್ದಾರೆ. ಶೈಖುನಾ ಬೊಳ್ಳೂರು ಉಸ್ತಾದ್. 

ಸದಾ ಸಮಯ ಏಕಾಂಗಿಯಾಗಿರುವುದನ್ನು ಇಷ್ಟಪಡುತ್ತಿದ್ದ ಮಹಾನರು ದೈನಂದಿನ ರಾತ್ರಿ-ಹಗಲು ದಿಕ್ರ್,ಸ್ವಾಲತ್, ಕುರಾನ್ ಪಾರಾಯಣಗಳಲ್ಲಿ ಧನ್ಯ ಮಗ್ನರಾಗುತ್ತಿದ್ದರು. ದಿಕ್ರ್ ಮತ್ತು ಕುರಾನ್ ಪಠಿಸುವುದು ಶೈಖುನಾ ರವರಿಗೆ ಪಂಚಪ್ರಾಣವಾಗಿತ್ತು. ರಮಲಾನ್ ತಿಂಗಳಿನ ಪ್ರಥಮ ರಾತ್ರಿ ಚಂದ್ರದರ್ಶನವಾದುದನ್ನು ಖಚಿತವಾದರೆ ಆ ತಿಂಗಳಲ್ಲಿ ವಿಶುದ್ಧ ಕುರಾನ್ ಅತಿಹೆಚ್ಚು ಪಾರಾಯಣ ಮಾಡುವುದರಲ್ಲಿ ಮಗ್ನರಾಗುತ್ತಿದ್ದರು.

ಜ್ಞಾನದ ಕಡಲಲ್ಲಿ ಮಿಂದು, ಜ್ಞಾನದ ಬತ್ತರ ಒರತೆಯಾಗಿ ಬಾಲಿ ಸಾರ್ಥಕ ಬದುಕು ಕಂಡ ಬೊಳ್ಳೂರು ಉಸ್ತಾದ್. ಬೊಳ್ಳೂರನ್ನು ಕೇಂದ್ರೀಕರಿಸಿ ಕಳೆದ 33 ವರ್ಷಗಳಿಂದ ವಿಜ್ಞಾನದ ಬೆಳಕು ಹರಡಿದ ವಿನಯದ ಪ್ರತೀಕವೇ ಬೊಳ್ಳೂರು ಉಸ್ತಾದ್.

ಉತ್ತಮ ವರ್ತನೆ, ವಿನಯಶೀಲತೆ ಸೌಮ್ಯಸ್ವಭಾವ ಸಮೀಪದ ಎಲ್ಲಾ ಸ್ಥಳದ ಜನರನ್ನು ಸಮಾನಭಾವದಿಂದ ಕಾಣುವ ಕೌಶಲ್ಯ ಇದು ಸರ್ವರಿಂದಲೂ ಪ್ರಶಂಸೆಗೆ ಒಳಗಾಗಿದೆ.

ಅಶಕ್ತರ ಅಭಲ ಕಷ್ಟತೆಯನ್ನು ಅನುಭವಿಸುವವರ ಪಾಲಿಗೆ ಅಲ್ಲಾಹನ ಅನುಗ್ರಹದಿಂದ ಕಾಲಘಟ್ಟದ ನಿಯೋಗವಾಗಿ ಆಗಮಿಸಿದ ಆಪತ್ಬಾಂಧವರಾಗಿದ್ದಾರೆ.

 ದಿನನಿತ್ಯವೂ ಜನರಿಗೆ ಅವರಿಂದ ಉಂಟಾಗುವ ಅದ್ಭುತ ಸುದ್ದಿಗಳಿಗೆ ಲೆಕ್ಕವಿಲ್ಲ. ಅದನ್ನೆಲ್ಲ ಸಂಗ್ರಹಿಸಿಡುವ ಪ್ರಯತ್ನ ಇಲ್ಲಿ ಮಾಡಿಲ್ಲ. ನಮ್ಮ ಕಣ್ಣ ಮುಂದೆ ನಮ್ಮ ಆಹ್ವಾಲುಗಳನ್ನು ಬಗೆಹರಿಸಲು ಅಲ್ಲಾಹನು ನಮಗೆ ಬೇಕಾಗಿ ನಿಯೋಗಿಸಿದ ಮಹಾ ವ್ಯಕ್ತಿತ್ವವನ್ನು ಸಾಧ್ಯವಾದಷ್ಟು ಪ್ರಯೋಜನ ಪಡೆಯಲು ನಮಗೆ ಸಾಧ್ಯವಾದರೆ ಅದೇ ಪುಣ್ಯ.

✍️ G.M.ಹನೀಫ್ ದಾರಿಮಿ ಅಂಕೋಲಾ

Share this on:
error: Content is protected !!