ಯುಎಇ: ಐಪಿಎಲ್ 13ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಹಂಗಾಮಾದಲ್ಲಿ ಚೆನ್ನೈ ಮೊದಲ ಗೆಲುವನ್ನ ತನ್ನ ಮುಡಿಗೇರಿಸಿಕೊಂಡಿದೆ.ಕಳೆದ ಐಪಿಎಲ್ ಫೈನಲ್ ನಲ್ಲಿ ಸೋಲಿಸಿದ್ದಕ್ಕೆ ಪ್ರತಿಕಾರವನ್ನು ತೀರಿಸಿಕೊಂಡಿದೆ.
ಝಾಯಿದ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು, ಮುಂಬೈ ಇಂಡಿಯನ್ಸ್ ತಂಡವನ್ನ ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ನಿಗದಿತ 20 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು.
163 ರನ್ಗಳ ಗುರಿಯನ್ನ ಬೆನ್ನು ಹತ್ತಿದ ಧೋನಿ ಬಳಗ, ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ನಂತರ ಬಂದ ಅಂಬಟ್ಟಿ ರಾಯುಡು ಮತ್ತು ಡುಪ್ಲೆಸಿಸ್ ತಂಡಕ್ಕೆ ಆಸೆರೆಯಾದರು. 49 ಬಾಲ್ಗಳನ್ನ ಎದುರಿಸಿದ ರಾಯುಡು ಬರೋಬ್ಬರಿ 71 ರನ್ಗಳ ಕಾಣಿಕೆಯನ್ನ ನೀಡಿ, ತಂಡವನ್ನ ಗೆಲುವಿನತ್ತ ಕೊಂಡೊಯ್ಯುತ್ತಿದ್ದಾಗ ರಾಹುಲ್ ಚಹಾರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಡುಪ್ಲೆಸಿಸ್ 44 ಬಾಲ್ಗಳನ್ನ ಎದುರಿಸಿ 58 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 19.2 ಓವರ್ನಲ್ಲಿ ಐದು ವಿಕೆಟ್ಗಳ ಗೆಲುವು ಸಾಧಿಸಿತು.