ದುಬಾೖ: ಸತತ ಸೋಲಿನಿಂದ ಕಂಗ್ಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ತಂಡಗಳು ಗೆಲುವಿನ ಹಳಿ ಏರಲು ದುಬಾೖ ಅಂಗಳದಲ್ಲಿ ರವಿವಾರದ ದ್ವಿತೀಯ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಧೋನಿ ಮತ್ತು ಕೆ.ಎಲ್. ರಾಹುಲ್ ನೇತೃತ್ವದ ತಂಡಗಳೆರಡೂ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಆಡಿದ 4 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು ಮೂರರಲ್ಲಿ ಸೋತಿವೆ.ಹೀಗಾಗಿ ಇದೊಂದು ಬಿಗ್ ಮ್ಯಾಚ್ ಆಗುವ ಎಲ್ಲ ಸಾಧ್ಯತೆ ಇದೆ. ದಿನದ ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಹೈದರಾಬಾದ್ ಮುಖಾಮುಖೀಯಾಗಲಿದೆ.
ವಾರ್ನರ್ ಸಾರಥ್ಯದ ಹೈದರಾಬಾದ್ ತಂಡ ಶುಕ್ರವಾರದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರಂಭಿಕ ಆಘಾತ ಎದುರಿಸಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪ್ರಿಯಮ್ ಗರ್ಗ್ ಮತ್ತು ಅಭಿಷೇಕ್ ಶರ್ಮ ಜವಾಬ್ದಾರಿಯುತ ಆಟವಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿದ್ದರು ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಹೆಚ್ಚು ಭರವಸೆ ಇರಿಸಿದೆ. ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತಕ್ಕೆ ಸಿಲುಕಿ ಪಂದ್ಯದಿಂದ ಹೊರನಡೆದಿದ್ದರು ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ವಾರ್ನರ್, ಬೇರ್ಸ್ಟೊ, ಮನೀಷ್ ಪಾಂಡೆ ಹಿಂದಿನ ಐಪಿಎಲ್ನಲ್ಲಿ ತೋರಿದ ಚಾರ್ಮ್ ತೋರುವಲ್ಲಿ ಈ ಬಾರಿ ಸಂಪೂರ್ಣ ವಿಫಲರಾಗುತ್ತಿದ್ದಾರೆ. ಈ ಪಂದ್ಯದಲ್ಲಿ ಸಿಡಿದು ನಿಲ್ಲುವ ಅನಿವಾರ್ಯ ಇವರ ಮೇಲಿದೆ.