ಪುತ್ತೂರು : ಪವಿತ್ರ ರಬೀಉಲ್ ಅವ್ವಲ್ ಮಾಸದ ಭಾಗವಾಗಿ ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ವತಿಯಿಂದ “ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ” ಎಂಬ ಧ್ಯೇಯ ವಾಕ್ಯದಲ್ಲಿ ರಬೀಹ್ ಕ್ಯಾಂಪೈನ್ ಪ್ರಯುಕ್ತ ಮೌಲಿದ್ ಮತ್ತು ಮದುಹುನ್ನೆಬೀ ಕಾರ್ಯಕ್ರಮ ಪುತ್ತೂರು ಸಿರಾಜುಲ್ ಹುದಾ ಮದ್ರಸಾದಲ್ಲಿ ರಾಜ್ಯ ಫೈಝೀಸ್ ಅಧ್ಯಕ್ಷರಾದ ಉಸ್ಮಾನುಲ್ ಫೈಝಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 20 ರಂದು ನಡೆಯಿತು. ರಾಜ್ಯದಾದ್ಯಂತ ಪ್ರಮುಖ ನಿಗದಿತ ಸ್ಥಳಗಳಲ್ಲಿ ನಡೆಯುವ ಎರಡನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಪ್ರವಾದಿ ಮುಹಮ್ಮದ್ ಮುಸ್ತಫಾ( ಸ )ರ ಜನನದಿಂದ ಅನುಗ್ರಹೀತಗೊಂಡ ಈ ಪುಣ್ಯ ಮಾಸದಲ್ಲಿ ಪ್ರವಾದಿ ಪ್ರಕೀರ್ತನೆಗಳು ಎಲ್ಲೆಡೆ ಮೊಳಗುತ್ತಿದೆ. ಹಲವಾರು ಸಂಕಷ್ಟಗಳಿಂದ ಆವೃತವಾಗಿರುವ ಈಗಿನ ಪರಿಸ್ಥಿತಿಯಲ್ಲಿ ಈ ಪುಣ್ಯ ಪ್ರಕೀರ್ತನೆಗಳು ಎಲ್ಲದಕ್ಕೂ ಪರಿಹಾರ ಮಾರ್ಗವಾಗಿ ಪ್ರಯೋಜನಕಾರಿಯಾಗಲಿದೆ. ಅದರ ಭಾಗವಾಗಿ ನಡೆಯುವ ಮೌಲಿದ್ ಮಜ್ಲಿಸುಗಳು ಸಾವಕಾಶವಾಗಿ ಕ್ರಮಬದ್ಧವಾಗಿ ನಡೆದು ಒಳಿತಿನ ಸಿರಿವಂತಿಕೆಯಿಂದ ಕೂಡಿರಲಿ ಎಂದು ಕರೆನೀಡಿದರು. ಸಯ್ಯಿದ್ ಎಸ್.ಎಂ ಮುಹಮ್ಮದ್ ತಂಙಳ್ ಸಾಲ್ಮರ ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು. ರಾಜ್ಯ ಫೈಝೀಸ್ ಪ್ರಮುಖರಾದ ಮೂಸಲ್ ಫೈಝಿ ಪ್ರಮೇಯ ಪ್ರಭಾಷಣ ನಡೆಸಿದರು. ಉಮರ್ ಫೈಝಿ ಸಾಲ್ಮರ ಮುಖ್ಯ ಭಾಷಣ ಮಾಡಿದರು. ಸಮಿತಿಯ ಕೋಶಾಧಿಕಾರಿ ಸುಲೈಮಾನ್ ಫೈಝಿ ಕಣಿಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿರಾಜುದ್ದೀನ್ ಫೈಝಿ ಮಾಡನ್ನೂರು ಸ್ವಾಗತಿಸಿ, ರಿಯಾಝ್ ಫೈಝಿ ಪಟ್ಟೆ ನಿರೂಪಿಸಿ, ಅಹ್ಮದ್ ನಯೀಂ ಫೈಝಿ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಪ್ರಧಾನ ಕಾರ್ಯದರ್ಶಿ ಹಾಜಿ ಯಾಕೂಬ್ ಖಾನ್ ಬಪ್ಪಳಿಗೆ, ಎಸ್ ವೈ ಎಸ್ ಪುತ್ತೂರು ವಲಯ ಅಧ್ಯಕ್ಷರಾದ ಅಬೂಬಕ್ಕರ್ ಮುಲಾರ್, ಜನತಾ ಸ್ಸ್ಕೇಲ್ ಬಝಾರ್ ಮಾಲಕ ಅಬ್ದುಲ್ ರಝಾಕ್ ಹಾಜಿ, ಪಿ.ಬಿ ಅಬ್ದುಲ್ಲ ಹಾಜಿ ಬಪ್ಪಳಿಗೆ, ಇಬ್ರಾಹಿಂ ಮುಸ್ಲಿಯಾರ್ ಸಾಲ್ಮರ, ಅಬ್ದುಲ್ ರಝಾಕ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. ಸರಕಾರದ ಕೋವಿಡ್ ನಡಾವಳಿಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರಂತೆ ಸ್ಥಳೀಯರು ಹಾಗೂ ಫೈಝೀಸ್ ಸದಸ್ಯರು ಭಾಗವಹಿಸಿ, ಕಾರ್ಯಕ್ರಮ ವಿಜಯಕ್ಕೆ ಸಹಕರಿಸಿದರು.