ಉಡುಪಿ: ಪಡುಬಿದ್ರಿ ಪರಿಸರದ ವಾಹನಗಳ ಉಚಿತ ಸಂಚಾರ ರದ್ದುಗೊಳಿಸಿದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ನಿರ್ವಹಣಾ ಗುತ್ತಿಗೆ ಪಡೆದಿರುವ ನವಯುಗ ಕಂಪೆನಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಅದೆಷ್ಟೋ ಬಾರಿ ಸಭೆಗಳನ್ನು ನಡೆಸಿದರೂ ಕಂಪೆನಿ ತಾನು ನೀಡಿರುವ ಆಶ್ವಾಸನೆ ಹಾಗೂ ವಹಿಸಿಕೊಂಡಿರುವ ಕಾಮಗಾರಿಯನ್ನು ಪೂರೈಸುವಲ್ಲಿ ವಿಫಲವಾಗಿದೆ.
ಪಡುಬಿದ್ರಿ ಪರಿಸರದಲ್ಲಿ ಮಾಡಬೇಕಾಗಿರುವ ಸರ್ವಿಸ್ ರಸ್ತೆ ಹಾಗೂ ಪ್ರಯಾಣಿಕರಿಗೆ ತಂಗಲು ಬೇಕಾಗಿರುವ ಬಸ್ ನಿಲ್ದಾಣದಂತಹ ಕನಿಷ್ಠ ಸೌಲಭ್ಯವನ್ನೂ ನೀಡಲು ವಿಫಲವಾಗಿರುವ ಕಂಪನಿ ಇದೀಗ ಫಾಸ್ಟ್ ಟ್ಯಾಗ್ ಕಡ್ಡಾಯವಾದ ನಂತರ ಇಷ್ಟರ ತನಕ ಉಚಿತವಾಗಿ ಪ್ರಯಾಣಿಸುತ್ತಿದ್ದ ಪಡುಬಿದ್ರಿ ಪರಿಸರದ ವಾಹನಗಳಿಗೆ ಶುಲ್ಕ ವಿಧಿಸಲು ತಯಾರಿ ನಡೆಸುತ್ತಿದೆ ಎಂಬ ಸಂಶಯ ಪಡುಬಿದ್ರೆ ಪರಿಸರದ ಜನತೆಯನ್ನು ಕಾಡುತ್ತಿದೆ.
ಪಡುಬಿದ್ರಿ ಪರಿಸರದ ವಾಹನಗಳಿಗೆ ಕಾಮಗಾರಿ ಪೂರ್ಣಗೊಳ್ಳುವ ತನಕ ಉಚಿತ ಸಂಚಾರ ನಿರಾಕರಿಸಿದರೆ ಉಗ್ರ ಹೋರಾಟನಡೆಯಲಿದೆ ಎಂದು ಕ.ರ.ವೇ ಯುವಸೇನೆ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ ರವರು ಎಚ್ಚರಿಕೆ ನೀಡುವುದರೊಂದಿಗೆ ಪಡುಬಿದ್ರಿ ಪರಿಸರದ ವಾಹನಗಳ ಉಚಿತ ಸಂಚಾರಕ್ಕೆ ಅಡ್ಡಿ ಉಂಟು ಮಾಡಬಾರದು ಎಂಬ ಮನವಿಯನ್ನೂ ಮಾಡಿಕೊಂಡಿರುತ್ತಾರೆ.