Latest Posts

ವೈಯಕ್ತಿಕ ದ್ವೇಷದಿಂದ ಆದಂತಹ ಹಲ್ಲೆ ಕೃತ್ಯಕ್ಕೆ ರಾಜಕೀಯ ಲೇಪ ಹಚ್ಚಲು ಪ್ರಯತ್ನ?!! ಸ್ಥಳೀಯರಿಂದ ತೀವ್ರ ಆಕ್ರೋಶ‍‌

ಮಂಗಳೂರು: ಇತ್ತೀಚೆಗೆ ಉಳ್ಳಾಲದ ಕೋಟೆಕಾರು ಗ್ರಾಮದ ಹಿದಾಯತ್ ನಗರದಲ್ಲಿ ಪರಸ್ಪರ ವೈಯುಕ್ತಿಕ ದ್ವೇಷದಿಂದ ನಡೆದ ಹಲ್ಲೆ ಪ್ರಕರಣಕ್ಕೆ ಎಸ್ಡಿಪಿಐ ನಾಯಕರು ಹಾಗೂ ಎಸ್ಡಿಪಿಐ ಮುಖವಾಣಿ ಎನ್ನಲಾದ ಅಂತರ್ಜಾಲ ಸುದ್ದಿ ತಾಣವೊಂದು ರಾಜಕೀಯ ತೇಪೆ ಹಚ್ಚಲು ಪ್ರಯತ್ನಿಸುತ್ತಿರುವ ಬಗ್ಗೆ ಸ್ಥಳಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ

ಅದರ ಮುಂದುವರಿದ ಭಾಗವಾಗಿ ಎಸ್ಡಿಪಿಐ ಪಕ್ಷದ ದ.ಕ ನೂತನ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಅವರು ಎಸ್ಡಿಪಿಐ ಪಕ್ಷದ ವೇದಿಕೆ ಒಂದರಲ್ಲಿ ಮಾತನಾಡುತ್ತಾ ಎಸ್ಡಿಪಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರೆ ಪರಿಸ್ಥಿತಿ ಚೆನ್ನಾಗಿರಲ್ಲ, ನಮ್ಮ ಮಸಲ್ (ಮಾಂಸ ಖಂಡದ) ಶಕ್ತಿಯನ್ನು ತೋರಿಸಬೇಕಾಗುತ್ತದೆ ಹಾಗೂ ಅಗತ್ಯ ಬಂದಲ್ಲಿ ಮರಣ ಭೂಮಿಯನ್ನು ತೋರಿಸಲು ನಾವು ಹಿಂಜರಿಯುವುದಿಲ್ಲ ಎಂದು ಬೆದರಿಕೆ ರೂಪದಲ್ಲಿ ಕಾಂಗ್ರೆಸ್ ನಾಯಕರನ್ನು ಎಚ್ಚರಿಸಿ ನಾಲಿಗೆ ಹರಿಬಿಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಘಟನೆಯ ಸಂಪೂರ್ಣ ವಿವರ:
ಈ ಹಿಂದಿನ ಪೂರ್ವದ್ವೇಷದ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಮೊಹಮ್ಮದ್ ಇಕ್ಬಾಲ್ ಎಂಬ ಯುವಕನ ಮೇಲೆ ಸ್ಥಳೀಯ ಇಮ್ತಿಯಾಝ್ ಮತ್ತು ಶಾಫಿ ಹಲ್ಲೆ ನಡೆಸುತ್ತಾರೆ,
ಆ ಬಗ್ಗೆ ಹಲ್ಲೆಗೊಳಗಾದ ಇಕ್ಬಾಲ್ ಪೋಲಿಸರಿಗೆ ಆ ಎರಡು ಯುವಕರ ಬಗ್ಗೆ ಮಾಹಿತಿಯನ್ನೂ ನೀಡಿರುತ್ತಾರೆ.
ಅದು ಯಾವುದೇ ಕಾರಣಕ್ಕೂ ರಾಜಕೀಯ ದ್ವೇಷದಿಂದ ಕೂಡಿದ ಹಲ್ಲೆ ಆಗಿರುವುದಿಲ್ಲ.
ಆದರೆ ಸ್ಥಳೀಯವಾಗಿ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಜಮಾಲ್ ಅಜ್ಜಿನಡ್ಕ ಮತ್ತು ಅಬ್ಬಾಸ್ ಅವರು ರಾಜಕೀಯವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದು, ಈರ್ವರ ನೇತೃತ್ವದಲ್ಲಿ ಇತ್ತೀಚೆಗೆ ಸ್ಥಳೀಯ ಹಲವು ಯುವಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಅದು ಸಹಜವಾಗಿಯೇ ಎಸ್ಡಿಪಿಐ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನಲಾಗಿದೆ.


ಈ ಇಬ್ಬರನ್ನು ರಾಜಕೀಯವಾಗಿ ಹೆಣೆಯುವ ಪ್ರಯತ್ನದ ಭಾಗ ಎಂಬಂತೆ ಸಂಬಂಧವೇ ಇಲ್ಲದ ಹಲ್ಲೆ ಪ್ರಕರಣಕ್ಕೆ ಇವರಿಬ್ಬರ ಹೆಸರನ್ನು ಸೇರಿಸುವ ವಿಫಲ ಪ್ರಯತ್ನಕ್ಕೆ ಕೈ ಹಾಕಿರುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಪ್ರಕರಣದ ಜೊತೆ ಸ್ಥಳೀಯ ಜನಪ್ರಿಯ ಶಾಸಕ ಯು.ಟಿ.ಖಾದರ್ ಅವರ ಹೆಸರನ್ನು ಕೂಡ ತಳುಕು ಹಾಕಲು ಕೆಲವರು ಪ್ರಯತ್ನಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಎನ್ನಲಾದ ಹಲವರಿಂದ ನಿರಂತರ ಅಪಪ್ರಚಾರ ನಡೆಯುತ್ತಿರುವುದು ವಿಷಾದನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಹಾಗೂ ಈ ಪ್ರಕರಣದ ಬಗ್ಗೆ ಪೋಲಿಸರು ಸೂಕ್ತ ತನಿಖೆ ನಡೆಸಿ ನೈಜ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕಾನೂನು ಪಾಲಕರನ್ನು ಆಗ್ರಹಿಸಿದ್ದಾರೆ.
ರಾಜಕೀಯ ದ್ವೇಷದಿಂದ ನಿರಪರಾಧಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿರುವ ಹಾಗೂ ಎಸ್ಡಿಪಿಐ ಮುಖವಾಣಿ ಎನ್ನಲಾದ ಸುದ್ದಿ ತಾಣವು ವರದಿ ಮಾಡಿದ ಕಪೋಲಕಲ್ಪಿತ ವರದಿಯ ಬಗ್ಗೆ ಯಾರೂ ಕಿವಿಕೊಡದಿರುವಂತೆ ಸ್ಥಳೀಯ ಇಸ್ಮಾಯಿಲ್ ಅಜ್ಜಿನಡ್ಕ, ಬದ್ರಿಯಾ ಜುಮಾ ಮಸೀದಿ ಅಜ್ಜಿನಡ್ಕ ಇದರ ಉಪಾಧ್ಯಕ್ಷರಾದ ಹಂಝ ಕೋಟೆಕಾರ್, ಹಸೈನಾರ್ ಅಜ್ಜಿನಡ್ಕ, ಹಸೈನಾರ್ ಬಾವು ಅಜ್ಜಿನಡ್ಕ, ಅಬ್ದುಲ್ಲಾ ಅಜ್ಜಿನಡ್ಕ, ಉಸ್ಮಾನ್ ಅಜ್ಜಿನಡ್ಕ, ಶರೀಫ್ ಅಜ್ಜಿನಡ್ಕ, ಶರೀಫ್ ಕೋಟೆಕಾರ್, ನೌಫಲ್ ಅಜ್ಜಿನಡ್ಕ, ತನಾಝ್ ಅಜ್ಜಿನಡ್ಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿರುತ್ತಾರೆ.

Share this on:
error: Content is protected !!