ಮಂಗಳೂರು: ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಭಾವೈಕ್ಯತೆಯ ಸಂದೇಶವಾಗಿ ಕೇಸರಿ ಶಾಲು ಧರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿತ್ತು.
ಈ ಬಗ್ಗೆ ಯು.ಟಿ.ಖಾದರ್ ಅಭಿಮಾನಿಗಳು ಹಾಗೂ ಎಲ್ಲಾ ಧರ್ಮದ ಜಾತ್ಯಾತೀತ ಸಮಾನ ಮನಸ್ಕರು ಶಹಬ್ಬಾಸ್ ಎಂದಿದ್ದರು.
ಹಲವಾರು ಚಿಂತಕರು, ಸಾಮಾಜಿಕ ಕಾರ್ಯಕರ್ತರು ಕೂಡ ಖಾದರ್ ನಡೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು.
ಅದರ ಭಾಗವಾಗಿ ಯುವ ಚಿಂತಕ ರಾ ಚಿಂತನ್ ಅವರು ಯು.ಟಿ.ಖಾದರ್ ನಡೆಯನ್ನು ಸ್ವಾಗತಿಸಿ, ತಾನು ಈ ಹಿಂದೆ ಕೇಸರಿ ಶಾಲು ಧರಿಸಿದ್ದ ಫೋಟೋವನ್ನು ತನ್ನ ಅಧೀಕೃತ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿ, “ಕೇಸರಿ ಬಲಿದಾನದ, ತ್ಯಾಗದ ಸಂಕೇತ ಹಾಗೂ ಅದು ಮತ್ಯಾರದ್ದೋ ವೈಯುಕ್ತಿಕ ಅಸ್ಮಿತೆಯಲ್ಲ, ಅದು ಯಾರಪ್ಪನ ಮನೆ ಆಸ್ತಿಯೂ ಅಲ್ಲ, ಬಿಟ್ಟು ಕೊಟ್ಟು ಬರೆಗಟ್ಟಿದ್ದು ಸಾಕು, ನಮ್ಮ ಕೇಸರಿ ನಮ್ಮ ಹಕ್ಕು ಎಂದು ಬರೆದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಆರೆಸ್ಸೆಸ್ ಮುಖಂಡ, ಪ್ರಸ್ತುತ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಆರ್.ಭಾಸ್ಕರ್ ಪ್ರಸಾದ್ ಅವರು ಯು.ಟಿ.ಖಾದರ್ ಅವರದ್ದು ಅಸಹಾಯಕ, ಹೇಡಿತನದ ನಡೆ, ಅವರ ಉದ್ದೇಶವೇ ಬೇರೆ ಹಾಗೂ ನಾವು ಕೇಸರಿ ಧರಿಸುವ ಕಾರಣಕ್ಕೂ, ಯು.ಟಿ.ಖಾದರ್ ಅವರು ಧರಿಸುವುದಕ್ಕೂ ವ್ಯತ್ಯಾಸ ಇದೆ ಎಂದು ಕಮೆಂಟ್ ಮಾಡಿದ್ದರು.
ಇದೀಗ ಅವರು ಕಮೆಂಟ್ ಮಾಡಿರುವ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು,
ಈ ಬಗ್ಗೆ ಜಾತ್ಯಾತೀತ ನಿಲುವಿನ ಬಾಂಧವರು, ಬುದ್ದಿಜೀವಿಗಳು ಭಾಸ್ಕರ ಪ್ರಸಾದ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಖಂಡಿಸಿ ವಿ.ರಾಜು ಎನ್ನುವವರು ಕೇಸರಿ, ಬಿಳಿ, ಹಸಿರಿನ ಸಮ್ಮಿಲನವೇ ಭಾತೃತ್ವ, ಸಹೋದರತೆಯ ಸಂಕೇತ.
ತ್ಯಾಗ, ಶಾಂತಿ, ಬಲಿದಾನಗಳ ನಾಡಿದು ಭಾರತ.
ಒಬ್ಬ ವ್ಯಕ್ತಿ ಏನು, ಯಾವುದನ್ನು ತಿನ್ನಬೇಕು, ಏನನ್ನು ಧರಿಸಬೇಕು ಎಂದು ಇತರರು ನಿರ್ಧರಿಸುವುದು ಅಸಹಿಷ್ಣುತೆಯ ಪರಮಾವಧಿ ಮತ್ತು ಅದು ಕೋಮುವಾದಿಗಳ ಷಡ್ಯಂತ್ರ ಎಂದು ಬರೆದಿದ್ದಾರೆ.

ಖಲೀಲ್ ಮುಳಬಾಗಿಲು ಎನ್ನುವವರು ನಾನು ಏನನ್ನು ತಿನ್ನಬೇಕು, ಧರಿಸಬೇಕು ನಿರ್ಧರಿಸಬೇಕು ಎಂದು ತೀರ್ಮಾನಿಸುವುದು ನನ್ನ ವೈಯುಕ್ತಿಕ ವಿಚಾರ. ಅದು ನನ್ನ ಹಕ್ಕು, ಅದಕ್ಕೆ ಯಾರ ಅಪ್ಪಣೆ ಬೇಕಾಗಿಲ್ಲ.
ಯು.ಟಿ.ಖಾದರ್ ಅವರೇ ತಾವು ನೈಜ ಹಾದಿಯಲ್ಲಿದ್ದೀರಿ ಹಾಗೂ ಜನರ ಬೆಂಬಲ ತಮಗೆ ಸದಾ ಇದೆ ಎಂದು ಬರೆದುಕೊಂಡಿದ್ದಾರೆ.
ಮತ್ತೊರ್ವ ರಾಕೇಶ್ ಎನ್ನುವವರು ಭಾಸ್ಕರ ಪ್ರಸಾದ್ ಅವರು ಸಂಘ ಬದಲಾಯಿಸಿದ್ದಾರೆಯೇ ಹೊರತು ಚಿಂತನೆಗಳಲ್ಲಿ ಕಿಂಚಿತ್ತೂ ಬದಲಾವಣೆ ಇಲ್ಲ ಎಂದು ಬರೆದಿದ್ದಾರೆ.
ಒಟ್ಟಾರೆಯಾಗಿ ಬಿ.ಆರ್.ಭಾಸ್ಕರ ಪ್ರಸಾದ್ ಅವರ ಬೇಜವಾಬ್ದಾರಿ ಕಮೆಂಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.