Latest Posts

ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಮಹಿಳಾ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ: ಅಥಾವುಲ್ಲ ಜೋಕಟ್ಟೆ

ಎಸ್ಡಿಪಿಐ ನಾಯಕನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.

ಎಸ್ಡಿಪಿಐ ನಾಯಕರ ದ್ವಂದ್ವ ಹೇಳಿಕೆಗಳಿಂದ ಅಡಕತ್ತರಿಯಲ್ಲಿ ಸಿಲುಕಿದ ಕಾರ್ಯಕರ್ತರು.

ಮಂಗಳೂರು: ಎಸ್ಡಿಪಿಐ ನಾಯಕ ಅಥಾವುಲ್ಲಾ ಜೋಕಟ್ಟೆ ಅವರು ಫೇಸ್‌ಬುಕ್‌ ಮೂಲಕ ಶೈಕ್ಷಣಿಕವಾಗಿ ಜಾಗೃತಿಗೊಂಡ ಸಮುದಾಯಕ್ಕೆ ಸಡ್ಡು ಹೊಡೆಯುವವರಿಗೆ ಪ್ರತ್ಯೇಕ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಿ ತಿರುಗೇಟು ನೀಡೋಣ ಎಂದು ಬರೆದು ಹಾಕಿದ್ದು, ಪ್ರಸ್ತುತ ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಮ್ಮ ವಿಧ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕೇಳುತ್ತಿದ್ದಾರೆ, ಈ ನಿಮ್ಮ ಹೇಳಿಕೆಯು ಹಿಜಾಬ್ ಪರವಾಗಿ ಹೋರಾಟ ನಿರತ ವಿಧ್ಯಾರ್ಥಿನಿಯರಿಗೆ ಮಾಡುವ ಅವಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಶಾಲಾ ಕಾಲೇಜು ‌ಮಟ್ಟದಲ್ಲಿ ನಮ್ಮ ಮಕ್ಕಳನ್ನು ಹಿಂದೂ ಮುಸ್ಲಿಂ ಎಂದು ಪ್ರತ್ಯೇಕವಾಗಿಸುವ ಸಂಘಪರಿವಾರದ ಯೋಜನೆಗೆ ಪರೋಕ್ಷವಾಗಿ ಇದು ನಾವು ಮಂಡಿಯೂರಿದಂತೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಮತ್ತೊಬ್ಬ ಎಸ್ಡಿಪಿಐ ರಾಜ್ಯ ಸೆಕ್ರೇಟರಿಯೇಟ್ ಮೆಂಬರ್ ಅಕ್ರಮ್ ಹಸನ್ ಅವರು ಮಸೀದಿಗಳ ಅಧೀನದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಮುಂದೆ ಶೈಕ್ಷಣಿಕ ಸಮಸ್ಯೆ ಬರದಂತೆ ಮಾಡಬಹುದಾ ಎಂದು ತನ್ನ ಫೇಸ್‌ಬುಕ್‌ ಖಾತೆಯ ಮೂಲಕ ಬರೆದಿದ್ದು ಇದು ಕೂಡ ಕ್ರಮವಾಗಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಬೂ ರಾಝಿ ಮಂಗಳೂರು ಎಂಬವರು ಎಸ್ಡಿಪಿಐ ನಾಯಕರಿಗೆ ಏನಾಗಿದೆ? ಉಡುಪಿ ಜಿಲ್ಲೆಯ ಎಸ್ಡಿಪಿಐ ನಾಯಕ ಹಿಜಾಬ್ ವಿವಾದ ಸಣ್ಣ ವಿಷಯ, ಅಲ್ಲಿಯೇ ಪರಿಹರಿಸಬಹುದಿತ್ತು ಎಂದು ಹೇಳುತ್ತಾರೆ, ಮತ್ತಿಬ್ಬರು ನಾಯಕರು ಭವಿಷ್ಯದಲ್ಲಿ ಹಿಜಾಬ್ ಸಮಸ್ಯೆ ಬರದಂತೆ ನೋಡಿಕೊಳ್ಳಲು ಮಸೀದಿ ಅಧೀನದಲ್ಲಿ ಹಾಗೂ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ ಎನ್ನುತ್ತಿದ್ದಾರೆ. ಇದೇ ನಾಯಕರು ಹಿಜಾಬ್ ಸಂಘರ್ಷದ ಆರಂಭದಲ್ಲಿ ಬೆಂಕಿಯುಂಡೆಯಂತಹ ಸವಾಲೆಸೆದು ಈಗ ಬಿಟ್ಟಿ ಪರಿಹಾರ ಮಾರ್ಗ ತೋರಿಸಿ ಪಲಾಯನ ಮಾಡುವುದೇ? ಎಂದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು ಖಾಲಿದ್ ಕಬಕ ಎನ್ನುವವರು ಇದು ಸಾಂವಿಧಾನಿಕ ಹಕ್ಕಿಗೆ ಸೋಲೊಪ್ಪಿಕೊಂಡು ಫ್ಯಾಸಿಸ್ಟ್ ಸರಕಾರಕ್ಕೆ ಮಂಡಿಯೂರಿ ನಿಂತಂತೆ, ಇದನ್ನು ನೀವು ಹೇಳಬೇಕಾ? ಇದು ಸದ್ಯದ ಸಮಸ್ಯೆಗೆ ಪರಿಹಾರವಾ? ಆಗುವುದಾದರೆ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡೋಣ, ಅದು ಸಾಧ್ಯವಿಲ್ಲ ಎಂದಾದರೆ ಬಿಟ್ಟಿ ಸಲಹೆಗಳನ್ನು ನೀಡದೆ ಸುಮ್ಮನೆ ಇದ್ದು ಬಿಡಿ ಎಂದು ನೋವನ್ನು ತೋಡಿಕೊಂಡಿದ್ದಾರೆ.

ಇನ್ನೊಬ್ಬರು ತನ್ನ ಗೋಡೆಯಲ್ಲಿ ಎಸ್ಡಿಪಿಐ ನಾಯಕರ ಇಂತಹ ಹೇಳಿಕೆಗಳು ಇವತ್ತು ಯು.ಟಿ.ಖಾದರ್ ಅಥವಾ ಉಲೆಮಾಗಳು ಹೇಳುತ್ತಿದ್ದರೆ ಇವತ್ತು ಅದನ್ನು ವಿರೋಧಿಸಲು ಎಸ್ಡಿಪಿಐಯವರು ಮುಂಚೂಣಿಯಲ್ಲಿರುತ್ತಿದ್ದರು.
ಕಾಂಗ್ರೆಸ್ ಅಥವಾ ಇತರ ಸಂಘಟನಾ ಪರ ನಾಯಕರನ್ನು ಹೀಯಾಳಿಸಿ ಅವರಿಗೆ ಎಮ್ಆರ್ ಎಂ, ಸಂಘಿ ಪಟ್ಟವನ್ನು ಕಟ್ಟುತ್ತಿದ್ದರು ಎಂದು ಬರೆದಿದ್ದಾರೆ.

ಒಟ್ಟಾರೆಯಾಗಿ ನಾಯಕರ ಈ ರೀತಿಯ ದ್ವಂದ್ವ ಹೇಳಿಕೆಗಳಿಂದ ಎಸ್ಡಿಪಿಐ ಕಾರ್ಯಕರ್ತರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

Share this on:
error: Content is protected !!