Latest Posts

ಕನ್ನಯ್ಯ ಕುಮಾರ್ ಪೌರತ್ವ ರದ್ದು ಪಡಿಸಲು ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ 25ಸಾವಿರ ದಂಡ ವಿಧಿಸಿದ ಹೈಕೋರ್ಟ್

ಲಕ್ನೋ :ಯೋಗ್ಯತೆಯಿಲ್ಲದ ಅರ್ಜಿಯು  ಸ್ವೀಕಾರಾರ್ಹವಲ್ಲವೆಂದ ಅಲಹಾಬಾದ್ ಹೈ ಕೋರ್ಟ್

ಕನ್ಹಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ. ಹಾಗಾಗಿ ಅವರ ಪೌರತ್ವ ರದ್ದು ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದ ವಾರಣಾಸಿಯ ನಾಗೇಶ್ವರ ಮಿಶ್ರಾ ಎಂಬವರಿಗೆ ಅಲಹಾಬಾದ್ ಹೈಕೋರ್ಟ್, ಸುಖಾ ಸುಮ್ಮನೆ ನ್ಯಾಯಾಲಯದ ಸಮಯ ಹಾಳು ಮಾಡಿರುವುದಕ್ಕಾಗಿ  25 ಸಾವಿರ ದಂಡ ವಿಧಿಸಿದೆ.

ಕನ್ಹಯ್ಯ ಕುಮಾರ್‌ ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಬಲಪಂಥೀಯ ಸಂಘಟನೆಗಳ ಆರೋಪವನ್ನೇ ಬಂಡವಾಳ ಮಾಡಿಕೊಂಡು ವಾರಣಾಸಿಯ ನಾಗೇಶ್ವರ ಮಿಶ್ರಾ, ಕನ್ಹಯ್ಯ ಕುಮಾರ್ ಅವರ ಪೌರತ್ವ ರದ್ಧತಿಗೆ ಅರ್ಜಿ ಸಲ್ಲಿಸಿದ್ದರು. ಕನ್ಹಯ್ಯ ಕುಮಾರ್ ಮತ್ತು ಅವರ ಬೆಂಬಲಿಗರು ಭಯೋತ್ಪಾದನಾ ಗುಂಪುಗಳನ್ನು ಬೆಂಬಲಿಸುತ್ತಿದ್ದಾರೆ. ಏಕತೆಯನ್ನು ಅಸ್ಥಿರಗೊಳಿಸಲು ಮತ್ತು ನಮ್ಮ ದೇಶದ ಶಾಂತಿಯನ್ನು ಭಂಗಗೊಳಿಸಲು ಯತ್ನಿಸುತ್ತಿದ್ದಾರೆ ಎನ್ನುವ ಬಲಪಂಥೀಯ ಸಂಘಟನೆಗಳ ಆಧಾರ ರಹಿತ ಆರೋಪಗಳಂತೆಯೇ ವಾದಿಸಿ ನಾಗೇಶ್ವರ ಮಿಶ್ರಾ ಅರ್ಜಿ ಸಲ್ಲಿಸಿದ್ದರು.

ಪೌರತ್ವವನ್ನು ರದ್ದು ಮಾಡುವುದು ಎನ್ನುವುದು ಗಂಭೀರವಾದ ವಿಚಾರವಾಗಿದೆ. ಇದು ಭಾರತದಲ್ಲಿ ವಾಸಿಸುವ ವ್ಯಕ್ತಿಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ದೇಹದ್ರೋಹಿ ಘೋಷಣೆ ಕೂಗಿರುವ ಆರೋಪದ ಕುರಿತಂತೆ ದೆಹಲಿಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಿ ಇಲ್ಲಿ ಮತ್ತೊಂದು ಅರ್ಜಿ ಸಲ್ಲಿಸುವುದರಲ್ಲಿ ಅರ್ಥವಿಲ್ಲ. ಭಾರತೀಯ ಪೌರತ್ವ ಕಾಯ್ದೆ-1955ರ ಸೆಕ್ಷನ್ 10ರ ಅನ್ವಯ ಕನ್ಹಯ್ಯ ಕುಮಾರ್ ಪೌರತ್ವ ರದ್ದುಪಡಿಸುವಂತೆ ಕೋರಿದ್ದೀರಿ. ಆದರೆ ಈ ಸೆಕ್ಷನ್‌ ಅಡಿಯ ಕಾನೂನು ಭಾರತೀಯರಲ್ಲದವರಿಗೆ ನೀಡಿದ ಪೌರತ್ವಕ್ಕೆ ಅನ್ವಯಿಸುತ್ತದೆಯೇ ವಿನಾ ಭಾರತದಲ್ಲೇ ಹುಟ್ಟಿದವರಿಗೆ ಅನ್ವಯಿಸುವುದಿಲ್ಲ. ಕೋರ್ಟ್‌ನ ಸಮಯವನ್ನು ಈ ರೀತಿ ವ್ಯರ್ಥ ಮಾಡುವುದು ಸರಿಯಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದ ಅಲಹಾಬಾದ್ ಕೋರ್ಟ್, ಅರ್ಜಿಯನ್ನು ವಜಾ ಮಾಡಿ, ಅರ್ಜಿದಾರನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

Share this on:
error: Content is protected !!