ಮಂಗಳೂರು: ಡ್ಯಾನ್ಸರ್ ಕಿಶೋರ್ ಅಮನ್ ಬಂಧನದಿಂದ ಆರಂಭವಾಗಿದ್ದ ಡ್ರಗ್ ಜಾಲ ಪ್ರಕರಣದ ತನಿಖೆ ನಡೆಸುತ್ತಿದ್ದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರ ವರ್ಗಾವಣೆ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.
ಕಿಶೋರ್ ಅಮನ್ ಬಂಧನ ಬಳಿಕ ನಿರೂಪಕಿ ಅನುಶ್ರೀ ಅವರನ್ನೂ ಸಿಸಿಬಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು. ಅನುಶ್ರೀ ಪ್ರಕರಣದಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡದ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರನ್ನು ಧಿಡೀರ್ ವರ್ಗಾವಣೆ ಮಾಡಲಾಗಿತ್ತು. ಶಿವಪ್ರಕಾಶ್ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ ವರ್ಗಾವಣೆ ಆದೇಶವನ್ನು ತಡೆಹಿಡಿಯಲಾಗಿದ್ದು ಶಿವಪ್ರಕಾಶ್ ಅವರೇ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಆಗಿ ಮುಂದುವರಿಯಲಿದ್ದಾರೆ.