Latest Posts

ಮುನಿರತ್ನಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರೀಲಿಫ್..!

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿದ್ದು, ಮಾಜಿ ಶಾಸಕ ಮುನಿರತ್ನ ಅವರಿಗೆ ಬಿಗ್ ರೀಲಿಫ್ ಸಿಕ್ಕಿದ್ದು, ನಿಗದಿಯಂತೆ ನವೆಂಬರ್ 3ರಂದು ಮತದಾನ ನಡೆಯಲಿದೆ.

ಸುಪ್ರೀಂಕೋರ್ಟ್ ತೀರ್ಪು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಾಗಲು ಬಯಸುವವರ ನಿಟ್ಟುಸಿರಿಗೆ ಕಾರಣವಾಗಿದೆ. ನ್ಯಾಯಾಲಯದ ತೀರ್ಪಿನ ಬಳಿಕ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಿದೆ ಎಂದು ವರದಿಯಾಗಿದೆ.

ಪ್ರಕರಣದ ಹಿನ್ನೆಲೆ:
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ರ್ಪಸಿ ಸೋಲು ಕಂಡಿದ್ದ ತುಳಸಿಮುನಿರಾಜುಗೌಡ ಅವರು ಹೈಕೋರ್ಟ್‍ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.
ಮುನಿರತ್ನ ಅವರು ಚುನಾವಣಾ ಅಕ್ರಮ ಮಾಡಿ, ನಕಲಿ ಮತದಾನದ ಮೂಲಕ ಸುಮಾರು 25 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ನ್ಯಾಯಯುತ ಚುನಾವಣೆ ನಡೆದಿದ್ದರೆ ನಾನು ಗೆಲ್ಲುತ್ತಿದ್ದೆ.

ಆ 25 ಸಾವಿರ ಮತಗಳು ನನಗೆ ಬರಬೇಕಿತ್ತು ಎಂದು ಹೈಕೋರ್ಟ್‍ನಲ್ಲಿ ವಾದಿಸಿದ್ದರು. ಜೊತೆಗೆ ಮುನಿರತ್ನ ಅವರನ್ನು ಅನರ್ಹ ಮಾಡಿ, ಎರಡನೆ ಸ್ಥಾನದಲ್ಲಿರುವ ನನ್ನನ್ನು ವಿಜೇತನೆಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು.

ತುಳಸಿಮುನಿರಾಜುಗೌಡ ಅವರ ವಾದವನ್ನು ತಳ್ಳಿ ಹಾಕಿದ ಹೈಕೋರ್ಟ್, 25 ಸಾವಿರ ಮತಗಳು ನಿಮಗೆ ಬರುತ್ತಿದ್ದವು ಎಂಬುದಕ್ಕೆ ಸ್ಪಷ್ಟ ಕಾರಣಗಳಿಲ್ಲ. ನಿಮ್ಮಿಬ್ಬರನ್ನು ಹೊರತು ಪಡಿಸಿ ಇನ್ನೂ 13 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ಎರಡನೇ ಸ್ಥಾನದಲ್ಲಿರುವ ನಿಮ್ಮನ್ನು ವಿಜೇತ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ, ತುಳಸಿಮುನಿರಾಜುಗೌಡ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಈ ನಡುವೆ ಆನಂದಕುಮಾರ್ ಮತ್ತು ಸಂತೋಷ್ ಕುಮಾರ್ ಎಂಬುವರು ನಕಲಿ ಮತದಾರರ ಗುರುತಿನಚೀಟಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ನೀಡಿತ್ತು.

ಕೇಂದ್ರ ಚುನಾವಣಾ ಆಯೋಗ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡಿದ ಬೆನ್ನಲ್ಲೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ತುಳಸಿಮುನಿರಾಜುಗೌಡ ಅವರು, ನಮ್ಮ ಪ್ರಕರಣ ಇತ್ಯರ್ಥವಾಗದ ಹೊರತು ಚುನಾವಣೆ ನಡೆಯಬಾರದು. ಆಯೋಗ ಘೋಷಣೆ ಮಾಡಿರುವ ಉಪಚುನಾವಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.

ತುಳಸಿಮುನಿರಾಜುಗೌಡ ಅವರ ವಾದವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಈ ಮೂಲಕ ಉಪಚುನಾವಣೆ ಅಭಾದಿತವಾಗಿ ನವೆಂಬರ್ 3ರಂದು ನಡೆಯಲಿದೆ.

ಚುರುಕುಗೊಂಡ ಚುನಾವಣೆ:
ಅಕ್ಟೋಬರ್ 9ರಿಂದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಅಕ್ಟೋಬರ್ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಇದ್ದು, ನ್ಯಾಯಾಲಯದ ತೀರ್ಪು ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು.

ಬಿಜೆಪಿ ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡದೆ ಕಾದು ನೋಡುತ್ತಿತ್ತು. ಮುನಿರತ್ನ ಮತ್ತು ತುಳಸಿಮುನಿರಾಜುಗೌಡ ಇಬ್ಬರು ಬಿಜೆಪಿ ಟಿಕೆಟ್‍ಗಾಗಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ನ್ಯಾಯಾಲಯದ ತೀರ್ಪು ಎಲ್ಲ ಅಡೆತಡೆಗಳನ್ನು ನಿವಾರಿಸಿದೆ.

Share this on:
error: Content is protected !!