ಬಿಹಾರ: ಬಂಡಾಯ ಶಾಸಕರು ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ ಅವರನ್ನು ಪಕ್ಷದ ಸಂಸದೀಯ ನಾಯಕರಾನ್ನಾಗಿ ನೇಮಕಗೊಳಿಸಿದ ಕೆಲವು ತಾಸುಗಳ ನಂತರ ಚಿರಾಗ್ ಪಾಸ್ವಾನ್ ಅವರು ಆ ಐದು ಬಂಡಾಯ ಸಂಸತ್ ಸದಸ್ಯರನ್ನು ಲೋಕ ಜನಶಕ್ತಿ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.ಐದು ಸಂಸದರು ಪಶುಪತಿ ಪರಾಸ್, ಪ್ರಿನ್ಸ್ ರಾಜ್, ಚಂದನ್ ಸಿಂಗ್, ವೀಣಾ ದೇವಿ ಮತ್ತು ಮೆಹಬೂಬ್ ಅಲಿ ಕೇಶರ್.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯ ನಂತರ ಈ ಐವರು ಸಂಸದರಿಗೆ ಶೋಕಾಸ್ ನೋಟಿಸ್ ನೀಡಲಾಯಿತು ಆದರೆ ಅವರು ಅದಕ್ಕೆ ಉತ್ತರಿಸಲು ವಿಫಲರಾಗಿದ್ದರಿಂದ ಅಮಾನತುಗೊಳಿಸಲಾಗಿದೆ.
ಸಂಸದ ಮತ್ತು ಎಲ್ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ಅವರು ಬುಧವಾರ ಮಧ್ಯಾಹ್ನ 1 ಗಂಟೆಗೆ ಈ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಜೆಪಿ ಪಕ್ಷದ ಕಳಪೆ ಸಾಧನೆ ಮಾಡಿದ ನಂತರ ಈ ಐವರು ನಾಯಕರು ಚಿರಾಗ್ ಪಾಸ್ವಾನ್ ಅವರೊಂದಿಗೆ ಭಿನ್ನಮತ ಹೊಂದಿದ್ದರು.
ವಾರಾಂತ್ಯದಲ್ಲಿ ನಡೆದ ಸಭೆಯಲ್ಲಿ ಅವರು ಪಕ್ಷದ ಸಂಸದೀಯ ನಾಯಕರಾಗಿ ಪಶುಪತಿ ಪರಾಸ್ ಅವರನ್ನು ನೇಮಕ ಮಾಡಲು ನಿರ್ಧರಿಸಿದರು.ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೋಮವಾರ ಸಂಜೆ ಇದಕ್ಕೆ ಅನುಮೋದನೆ ನೀಡಿದರು.