Latest Posts

Covid-19 ಚಿಕಿತ್ಸೆಗೆ ಕೈಜೋಡಿಸುವಂತೆ ಸಿಎಂ ಯಡಿಯೂರಪ್ಪ ಮನವಿಗೆ ಒಪ್ಪಿದ ಖಾಸಗಿ ಆಸ್ಪತ್ರೆಗಳು

ಬೆಂಗಳೂರು : ಕೊರೊನ ಸೋಂಕು ನಿಯಂತ್ರಿಸಲು ಸರ್ಕಾರದ ಜೊತೆಗೆ ಖಾಸಗಿ ವೈದ್ಯಕೀಯ ಕಾಲೇಜು , ಆಸ್ಪತ್ರೆಗಳು 4,500 ಸಾವಿರ ಬೆಡ್ ಗಳನ್ನು ಕೋವಿಡ್ -19 ಗೆ ಮೀಸಲಿರಿಸಲು ಸಮ್ಮತಿಸಿವೆ ಎಂದು ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಹೇಳಿದರು.

 ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಇಂದು ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು . ಖಾಸಗಿ ಆಸ್ಪತ್ರೆಯ ವೈದ್ಯರು ಅರೆ ವೈದ್ಯಕೀಯ ಸಿಬ್ಬಂದಿಗೂ 50 ಲಕ್ಷ ರೂ . ಮೊತ್ತದ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದರು.

 ಕಳೆದ ನಾಲ್ಕು ತಿಂಗಳಿಂದ ಹತ್ತು ವೈದ್ಯಕೀಯ ಕಾಲೇಜುಗಳು ಹೊರತು ಪಡಿಸಿ , ಇತರ ಎಲ್ಲ ಕಾಲೇಜುಗಳು ಪ್ರಯೋಗಾಲಯ ವ್ಯವಸ್ಥೆ ಮಾಡಿವೆ . ಸರ್ಕಾರಿ ಕಾಲೇಜುಗಳಲ್ಲಿ 2000 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4500 ಸೇರಿದಂತೆ ಸುಮಾರು 6500 ಹಾಸಿಗೆಗಳು ಬೆಂಗಳೂರಿನ ವೈದ್ಯಕೀಯ ಕಾಲೇಜುಗಳಲ್ಲಿಯೇ ಲಭ್ಯವಾಗುತ್ತಿವೆ . ಸಭೆಯಲ್ಲಿ ವೈದ್ಯಕೀಯ ಕಾಲೇಜುಗಳು ಸರ್ಕಾರದೊಂದಿಗೆ ಕೈಜೋಡಿಸಿ , ಕೋವಿಡ್ ಚಿಕಿತ್ಸೆಗೆ ಸಹಕರಿಸುವ ಭರವಸೆನೀಡಿವೆ ಇದಕ್ಕೆ ಸಿದ್ಧತೆಗಳು ಮಾಡಿಕೊಳ್ಳಬೇಕಾಗಿರುವುದರಿಂದ ಹಂತ ಹಂತವಾಗಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

 ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ಕುರಿತಂತೆ ಕೇಂದ್ರೀಕೃತ ವ್ಯವಸ್ಥೆಯನ್ನು ಈಗಾಗಲೇ ಬಿಬಿಎಂಪಿಯಲ್ಲಿ ಮಾಡಲಾಗಿದ್ದು , ಎರಡು ಮೂರು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ .ಕರೋನ ಚಿಕಿತ್ಸೆ ನೀಡುವ ಎಲ್ಲ ಆಸ್ಪತ್ರೆಗಳನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು . ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡಲು ಸಹ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು . ಇದಲ್ಲದೆ ಕೋವಿಡ್ ಕೇರ್ ಸೆಂಟರ್ ಗಳಿಗೆ ಅಗತ್ಯ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ . ಸಿ.ಎನ್ . ಅಶ್ವತ್ಥನಾರಾಯಣ ಕಂದಾಯ ಸಚಿವ ಆರ್ . ಅಶೋಕ್ , ಗೃಹ ಸಚಿವ ಬಸವರಾಜ ಬೊಮ್ಮಾಯಿ ವೈದ್ಯಕೀಯ ಶಿಕ್ಷಣ ಸಚಿವ ಡಾ . ಸುಧಾಕರ್ , ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಮೊದಲಾದವರು ಹಾಜರಿದ್ದರು.

Share this on:
error: Content is protected !!