Latest Posts

ಲಾಕ್ ಡೌನ್ ನಿಯಮ ಉಲ್ಲಂಘನೆ;ಅಣ್ಣಾ
ಮಲೈ ವಿರುದ್ಧ ಕೇಸು ದಾಖಲು

ತಮಿಳುನಾಡು: ಮೂರು ದಿನಗಳ ಹಿಂದಷ್ಟೇ ಬಿಜೆಪಿಗೆ ಸೇರಿ ಭಾರೀ ಸುದ್ದಿಯಾಗಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ತಮಿಳುನಾಡಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಯಮತ್ತೂರಿನಲ್ಲಿ ಕಾರ್ಯಕರ್ತರ ಕಾನೂನುಬಾಹಿರ ಸಭೆ ನಡೆಸಿದಕ್ಕಾಗಿ ಕೆ.ಅಣ್ಣಾಮಲೈ ಸೇರಿದಂತೆ ಬಿಜೆಪಿ ಪಕ್ಷದ ಕೆಲ ಕಾರ್ಯಕರ್ತರ ಮೇಲೆ ಕೊಯಮತ್ತೂರು ನಗರ ಪೊಲೀಸರು ಕೇಸ್‌ ದಾಖಲಿಸಿದ್ದಾರೆ.

ಕೊಯಮತ್ತೂರಿನ ವಿಕೆಕೆ ಮೆನನ್ ರಸ್ತೆಯಲ್ಲಿರುವ ಕಚೇರಿಗೆ ಗುರುವಾರ ಅಣ್ಣಾಮಲೈ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ್ದರು. ಆದರೆ ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಪಕ್ಷದ ಕಚೇರಿಯಲ್ಲಿ ಬಹಳಷ್ಟು ಜನ ಕಾರ್ಯಕರ್ತರು ಸೇರಿರುವುದು ವರದಿಯಾಗಿದೆ.ಅದಲ್ಲದೇ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಕೂಡ ಲಾಕ್‌ಡೌನ್‌ ಉಲ್ಲಂಘನೆಯಾಗಿದೆ. ನಂತರ, ಕೆ.ಅಣ್ಣಾಮಲೈ ತಮ್ಮ ವಾಹನದಿಂದಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಮೂಲಕ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಸಬ್‌ ಇನ್ಸ್‌ಪೆಕ್ಟರ್ ಸುಕನ್ಯಾರವರು ನೀಡಿದ ದೂರಿನ ಆಧಾರದ ಮೇಲೆ, ಕೊಯಮತ್ತೂರು ಪೊಲೀಸರು ಕೆ.ಅಣ್ಣಾಮಲೈ ಹಾಗೂ ಇತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 269, 270, 285, 341 ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಿಜೆಪಿ ಸೇರಿದ ಮೂರು ದಿನಗಳಲ್ಲೇ ಕೇಸ್ ದಾಖಲಾಗಿ, ಅಣ್ಣಾಮಲೈಯು ಸಂಕಷ್ಟಕ್ಕೆ ದೂಡಿದಂತಾಗಿದ್ದು,ಪೋಲಿಸರ ವಿಚಾರಣೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Share this on:
error: Content is protected !!