Latest Posts

ಮುಂದಿನ ವರ್ಷದಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ಯಾರಿ ಭಾಷಾ ಕೋರ್ಸ್‌ ಆರಂಭಿಸುವಂತೆ ಕುಲಪತಿಗೆ ಮನವಿ

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಮೂಲಕ ಡಿಪ್ಲೊಮಾ ಅಥವಾ ಸರ್ಟಿಫಿಕೆಟ್‌ ಕೋರ್ಸ್‌ಗಳಾಗಿ ಬ್ಯಾರಿ ಭಾಷೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪೊಎಸ್‌.ಯಡಪಡಿತ್ತಾಯ ಅವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್‌ ಉಚ್ಚಿಲ್‌ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿಯ ಪ್ರಕಾರ ಜನಪದ, ಸಂಪ್ರದಾಯಿಕ ಕಲೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯಾ ಜನಾಂಗ ಭಾಷೆಗೆ ಸಂಬಂಧಿಸಿದಂತೆ ಇರುವ ಕಲಾ ಪ್ರಕಾರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಸರ್ಟಿಫಿಕೆಟ್ ಅಥವಾ ಡಿಪ್ಲೊಮಾ ಕೋರ್ಸ್‌ ಮೂಲಕ ಪ್ರಾರಂಭ ಮಾಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಬ್ಯಾರಿ ಜನಪದ ಕಲೆಗಳಾದ ದಫ್‌, ಬುರ್ದಾ, ಒಪ್ಪನೆ ಮತ್ತು ಕೋಲ್ಕಲಿ ನೃತ್ಯ ಪ್ರಕಾರವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಮೂಲಕ ಡಿಪ್ಲೊಮಾ ಅಥವಾ ಸರ್ಟಿಫಿಕೆಟ್‌ ಕೋರ್ಸ್‌ಗಳಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕು ಎಂದು ವಿನಂತಿ ಮಾಡಿದ್ದಾರೆ. ಸರ್ಟಿಫಿಕೆಟ್ ಅಥವಾ ಡಿಪ್ಲೊಮಾ ಕೋರ್ಸ್‌ ಮೂಲಕ ಪ್ರಾರಂಭ ಮಾಡುದರಿಂದಾಗಿ ಬ್ಯಾರಿ ಕಲೆಗೆ ಉತ್ತೇಜನ ನೀಡಿ, ಬ್ಯಾರಿ ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ ಹಾಗೂ ಕಲೆಯ ಬಗ್ಗೆ ಕೀಳರಿಮೆ ಕಡಿಮೆಯಾಗಿ ಮೂಲ ಜನಪದ ಕಲೆಗಳಿಗೆ ಜೀವ ನೀಡಿದಂತಾಗುತ್ತದೆ. ವಿಶ್ವವಿದ್ಯಾನಿಲಯಗಳಿಂದ ಪ್ರಮಾಣ ಪತ್ರ ನೀಡಿದಲ್ಲಿಇದು ವೃತ್ತಿಪರವಾಗಿಯು ಉಪಯೋಗವಾಗುತ್ತದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್‌ ಉಚ್ಚಿಲ್‌ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಕೋರ್ಸ್‌ ಆರಂಭಿಸುವುದರಿಂದ ಬ್ಯಾರಿ ಭಾಷೆಯ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆ ಮಾಡಿ ಆಳವಾದ ಅಧ್ಯಯನ ನಡೆಸಲು ಸಹಕಾರಿಯಾಗುತ್ತದೆ. ಈ ಕೋರ್ಸ್‌ಗೆ ಪೂರಕವಾಗಿ ಬೇಕಾಗುವ ಪಠ್ಯ ಕ್ರಮ, ಸಂಪನ್ಮೂಲ ವ್ಯಕ್ತಿಗಳನ್ನು ಬ್ಯಾರಿ ಅಕಾಡೆಮಿ ವತಿಯಿಂದ ನೀಡಲಾಗುವುದು, ಆದುದರಿಂದ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಪ್ರಸ್ತಾವನೆಯನ್ನು ಅಕಾಡೆಮಿ ಕೌನ್ಸಿಲ್‌ನಲ್ಲಿಒಪ್ಪಿಗೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪೊಎಸ್‌.ಯಡಪಡಿತ್ತಾಯ ಅವರಿಗೆ ಮನವಿಯಲ್ಲಿ ತಿಳಿಸಲಾಗಿದೆ.

Share this on:
error: Content is protected !!