Latest Posts

ಸದನದಲ್ಲಿ ಗದ್ದಲದ ನಡುವೆ ವಿವಾದಾತ್ಮಕ ಭೂ ಸ್ವಾಧೀನ ತಿದ್ದುಪಡಿ ಮಸೂದೆ ಗೆ ಅಂಗೀಕಾರ

ಬೆಂಗಳೂರು: ರಾಜ್ಯ ಸರ್ಕಾರದ ಭೂ ಸ್ವಾಧೀನ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ಆಕ್ರೋಶಗೊಂಡ ವಿರೋಧ ಪಕ್ಷದ ಶಾಸಕರು ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಸದನದಿಂದ ಹೊರನಡೆದಾಗ ರಾಜ್ಯ ಸರ್ಕಾರ ಮಸೂದೆಯನ್ನು ಅಂಗೀಕರಿಸಿದೆ.

ಸದನದಲ್ಲಿ ಮಸೂದೆಯ ಪ್ರಾಸ್ತಾವಿಕ ತಿದ್ದುಪಡಿಗಳನ್ನು ವಿರೋಧಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಬಿಜೆಪಿ ಸರ್ಕಾರ ರಾಜ್ಯದ ಸ್ವಾಭಿಮಾನಿ ರೈತರನ್ನು ಗುಲಾಮರನ್ನಾಗಿಸಲು ಹೊರಟಿದೆ. ರೈತರ ಜಮೀನುಗಳನ್ನು ಯಾರೂ ಬೇಕಾದರೂ ಖರೀದಿ ಮಾಡಬಹುದು ಎಂಬದು ಅತ್ಯಂತ ಕೆಟ್ಟ ತಿದ್ದುಪಡಿಯಾಗಿದೆ. ಈ ಮೂಲಕ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು ರೈತರ ಭೂಮಿಯನ್ನು ಖರೀದಿಸುತ್ತಾರೆ. ರೈತರನ್ನು ಗುಲಾಮರನ್ನಾಗಿಸುವ ಕಾರಣದಿಂದಲೇ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಟ್ವೀಟ್ ಮಾಡಿದ ಯಡಿಯೂರಪ್ಪ, “ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕವು ಇಂದು ವಿಧಾನಸಭೆಯಲ್ಲಿ ಚರ್ಚೆ ನಂತರ ಅಂಗೀಕೃತಗೊಂಡಿದೆ. ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಕೃಷಿಕರಿಗೆ ಯಾವ ರೀತಿಯ ಸಮಸ್ಯೆಯೂ ಉಂಟಾಗುವುದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ರಾಜ್ಯಸರ್ಕಾರ ಬದ್ಧವಾಗಿದೆ.” ಎಂದು ಹೇಳಿದ್ದಾರೆ.

ಇತ್ತ ನಗರದಲ್ಲಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿವೆ.

Share this on:
error: Content is protected !!