Latest Posts

ಆರ್ ಎಸ್ ಎಸ್ ಶಾಖೆಗೆ ಹೋಗಿ ನಾನು ಕಲಿಯುವಂತಹದ್ದು
ಏನೂ ಇಲ್ಲ,ಅದರ ಬಗ್ಗೆ ತಿಳಿದುಕೊಂಡೇ ವಿರೋಧಿಸುತ್ತಿದ್ದೇನೆ – ಸಿದ್ದರಾಮಯ್ಯ

ಬೆಂಗಳೂರು: ಲವ್ ಜಿಹಾದ್, ಗೋಹತ್ಯೆ ನಿಷೇಧದ ಮಾತುಗಳೆಲ್ಲ ತಮ್ಮ ಆಡಳಿತ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಬಿಜೆಪಿ ನಾಯಕರ ಹತಾಶ ಪ್ರಯತ್ನ. ಅವರಿಗೆ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಕೋಮುದ್ವೇಷ ಹುಟ್ಟಿಸಲು‌‌ ಈ‌ ಕುತಂತ್ರ ಎಂದು‌ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತಬಾಡಿದ ಅವರು ಮದುವೆಗೆ ಜಾತಿ-ಧರ್ಮಗಳ ನಿರ್ಬಂಧ ಕಾನೂನಿನಲ್ಲಿ ಇಲ್ಲ. ದೇಶದ ಯಾವ ಕಾನೂನು ಕೂಡಾ ಲವ್ ಜಿಹಾದ್ ಎಂದರೆ ಏನು ಎಂದು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವರೇ ಸಂಸತ್ ನಲ್ಲಿ ಹೇಳಿದ್ದಾರೆ. ಸಿ.ಟಿ ರವಿ ಗೃಹಸಚಿವರನ್ನು ಕೇಳಿಕೊಂಡು ಬಂದು ಮಾತನಾಡಲಿ. ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಂತರಧರ್ಮೀಯ ಮದುವೆ ಅಕ್ರಮ ಎಂದು ಹೇಳಿಲ್ಲ. ಆ ತೀರ್ಪನ್ನು ಉಲ್ಲೇಖಿಸುವವರು ಮೊದಲು ಅದನ್ನು ಓದಿಕೊಳ್ಳಲಿ. ಇಷ್ಟಪಟ್ಟವರನ್ನು ವಿವಾಹವಾಗುವ ಸ್ವಾತಂತ್ರ್ಯವನ್ನು
ಸಂವಿಧಾನ ನೀಡಿದೆ. ಗೂಂಡಾರಾಜ್ಯವಾದ ಉತ್ತರ ಪ್ರದೇಶ ನಮಗೆ ಮಾದರಿ ಅಲ್ಲ ಎಂದರು.

ಆರ್ ಎಸ್ ಎಸ್ ಶಾಖೆಗೆ ಹೋಗಿ ನಾನು ಕಲಿಯುವಂತಹದ್ದು
ಏನೂ ಇಲ್ಲ. ಅದರ ಬಗ್ಗೆ ತಿಳಿದುಕೊಂಡೇ ವಿರೋಧಿಸುತ್ತಿದ್ದೇನೆ. ಆಡಳಿತ ನಡೆಸುವವರಿಗೆ ಸಂವಿಧಾನ ಗೊತ್ತಿರಬೇಕು, ಆರ್ ಎಸ್ ಎಸ್ ಅಲ್ಲ. ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಲಿ. ಬೇಕಾದರೆ ನಾನೇ ಸಂವಿಧಾನದ ಪಾಠ ಮಾಡ್ತೇನೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಮೂಲಭೂತವಾಗಿ ಸಂವಿಧಾನ ವಿರೋಧಿ. ಅದು ಮೀಸಲಾತಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲವನ್ನೂ ವಿರೋಧಿಸುತ್ತದೆ. ಅವರು ಮಿಲ್ಲರ್ ವರದಿಯಿಂದ ಮಂಡಲ್ ವರದಿ ವರಗೆ ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರು, ಮನುಸ್ಮೃತಿಗೆ ಬದ್ಧರಾಗಿರುವವರು.

ಗೋಹತ್ಯೆಯ ಬಗ್ಗೆ ಬಿಜೆಪಿ ನಾಯಕರದ್ದು ದಂದ್ವ ನಿಲುವು.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಅತೀ ಹೆಚ್ಚು ಗೋಮಾಂಸ ರಫ್ತು ನಡೆಯುತ್ತಿರುವುದು ಉತ್ತರಪ್ರದೇಶದಲ್ಲಿ. ಹೆಚ್ಚಿನ ಗೋಮಾಂಸ ವ್ಯಾಪಾರಿಗಳು ಬಿಜೆಪಿ ಪಕ್ಷಕ್ಕೆ ಸೇರಿದವರು. ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಹಿಂದಿನ ಬಿಜೆಪಿ ಸರ್ಕಾರ 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿ ಮೂಲ ಕಾಯ್ದೆಯನ್ನು ಉಳಿಸಿಕೊಂಡಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದರು.

Share this on:
error: Content is protected !!