Latest Posts

ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕು

ಹಿಜಾಬನ್ನು ತೆಗೆಯಲು ಸರಕಾರವು ಬಲವಂತಪಡಿಸುತ್ತಿದೆ.!

ಲೋಕಸಭೆಯಲ್ಲಿ ಕಾಂಗ್ರೆಸ್ ವಿಪಕ್ಷ ನಾಯಕ‌ ಅಧಿರ್ ರಂಜನ್ ಚೌಧರಿ ತೀವ್ರ ವಾಗ್ಧಾಳಿ

ದೆಹಲಿ: ಹಿಜಾಬ್ ವಿವಾದ ಇಂದು ಸಂಸತ್ತಿನಲ್ಲಿ ಬಿರುಸಿನ ಚರ್ಚೆಗೆ ಕಾರಣವಾಯಿತು. ಹಿಜಾಬ್ ಬಗ್ಗೆ ಚರ್ಚೆ ನಡೆಸುವಂತೆ ಪಟ್ಟು ಹಿಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹಿಜಾಬ್ ಧರಿಸಿದ್ದಕ್ಕಾಗಿ ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದರು ಮತ್ತು ಈ ವಿಷಯದ ಬಗ್ಗೆ ಕೇಂದ್ರದ ನಿಲುವು ಏನು ಎಂಬುದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

“ಹಿಂದೂಗಳು ತಮ್ಮ ಮುಂಗೈಯಲ್ಲಿ ತಿಲಕವನ್ನು ಧರಿಸುತ್ತಾರೆ, ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುತ್ತಾರೆ, ಹಿಜಾಬ್ ಧರಿಸುವುದು ಅಪರಾಧವಲ್ಲ. ಇಂದು ಭಯದ ವಾತಾವರಣ ನಿರ್ಮಾಣವಾಗಿದೆ” ಎಂದು ಕರ್ನಾಟಕದಲ್ಲಿ ಹಿಜಾಬ್ ಬಗ್ಗೆ ಘಟನೆಯನ್ನು ಉಲ್ಲೇಖಿಸುತ್ತಾ ಹಿಜಾಬ್ ಬಗ್ಗೆ ಸರಕಾರದ ನಿಲುವು ಏನು? ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಸಂಸದ ಹೈಬಿ ಈಡನ್ ಕೂಡ ಸದನದಲ್ಲಿ ಈ ವಿಷಯದ ಬಗ್ಗೆ ತಕ್ಷಣ ಚರ್ಚೆ ನಡೆಸುವಂತೆ ಕೋರಿದರು. ಆದರೆ ಸ್ಪೀಕರ್ ಅವಕಾಶ ನೀಡಲಿಲ್ಲ. ಕರ್ನಾಟಕದ ಹಲವಾರು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸುವುದನ್ನು ನಿರ್ಬಂಧಿಸಲು ಪ್ರಾರಂಭಿಸಿವೆ ಎಂದು ಈಡನ್ ಹೇಳಿದರು. “ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕು. ಕರ್ನಾಟಕ ಸರ್ಕಾರವು ಸಂವಿಧಾನದ 25 ನೇ ವಿಧಿಯನ್ನು ಉಲ್ಲಂಘಿಸಿರುವುದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ತೀವ್ರ ವಾಗ್ಧಾಳಿ ನಡೆಸಿದರು.

ಕರ್ನಾಟಕದ ಬಿಜೆಪಿ ಸಂಸದ ಶಿವಕುಮಾರ ಉದಾಸಿ ಚೌಧರಿ ಪ್ರಶ್ನೆಗೆ ಉತ್ತರಿಸುತ್ತಾ ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ನ್ಯಾಯಾಲಯದ ಹಲವು ಆದೇಶಗಳಿದ್ದರೂ ಕಾಂಗ್ರೆಸ್ ಈ ವಿಷಯದ ಬಗ್ಗೆ ಅನಗತ್ಯವಾಗಿ ಅಳಲು ತೋಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ವಿಷಯವು ರಾಜ್ಯದ ವಿಷಯವಾಗಿದ್ದು, ಕರ್ನಾಟಕ ಸರ್ಕಾರವು ಈ ಬಗ್ಗೆ ಈಗಾಗಲೇ ನಿಯಮವನ್ನು ಹೊರಡಿಸಿದೆ ಮತ್ತು ಅಧೀನಕ್ಕೊಳಪಟ್ಟ ವಿಷಯವಾಗಿದೆ, ಹಾಗಾಗಿ ಇದರ ಬಗ್ಗೆ ಚರ್ಚೆ ಅನಗತ್ಯ ಎಂದು ಹೇಳಿದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬಜೆಟ್ ಮೇಲಿನ ಸಾಮಾನ್ಯ ಚರ್ಚೆಗೆ ಮುಂದಾದಾಗ, ಚೌಧರಿ ಅವರು ಈ ವಿಷಯದ ಬಗ್ಗೆ ಸರ್ಕಾರದಿಂದ ಹೇಳಿಕೆ ನೀಡಬೇಕೆಂದು ಅವರು ಒತ್ತಾಯಿಸಿದರು.

ಕೊನೆಗೆ ಕಾಂಗ್ರೆಸ್, ಡಿಎಂಕೆ, ಸಿಪಿಐ(ಎಂ), ಸಿಪಿಐ, ವಿಸಿಕೆ, ಎಂಡಿಎಂಕೆ, ಮುಸ್ಲಿಂ ಲೀಗ್ ಮತ್ತು ಜೆಎಂಎಂ ಎಂಬ ಎಂಟು ಪಕ್ಷಗಳಿಗೆ ಸೇರಿದ ವಿರೋಧ ಪಕ್ಷದ ಸಂಸದರು ಕರ್ನಾಟಕದಲ್ಲಿ ಹಿಜಾಬ್ ಧರಿಸುವುದು ಅಪರಾಧವಲ್ಲ ಎಂದು ಘೋಷಣೆ ಕೂಗುತ್ತಾ ಮಂಗಳವಾರದ ಲೋಕಸಭೆ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು.

Share this on:
error: Content is protected !!